ಟೆಹ್ರಾನ್ : ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಜಂಟಿ ಕ್ಷಿಪಣಿ ದಾಳಿ ನಡೆಸಿದ್ದು, ಇದೀಗ ಇರಾನ್ ಕೂಡ ಪ್ರತಿದಾಳಿಯನ್ನು ಆರಂಭಿಸಿದೆ. ಈ ಹಿನ್ನೆಲೆ ಇಸ್ರೇಲ್‌ನಲ್ಲಿರುವ ಭಾರತೀಯರಿಗಾಗಿ ಸಹಾಯವಾಣಿ ಬಿಡುಗಡೆ ಮಾಡಲಾಗಿದೆ.
ಇರಾನ್‌ನ ಟೆಹ್ರಾನ್ ನಗರದ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ ನಡೆಸಿದೆ. ಇರಾನ್‌ನಾದ್ಯಂತ ಸುಮಾರು 30 ಕಡೆ ದಾಳಿ ನಡೆದಿದ್ದು, ಇರಾನ್ ಅಧ್ಯಕ್ಷರ ನಿವಾಸ ಮತ್ತು ಗುಪ್ತಚರ ನೆಲೆ ಸೇರಿದಂತೆ ಹಲವು ಸ್ಥಳಗಳಲ್ಲಿ ಜಂಟಿ ದಾಳಿ ನಡೆಸಲಾಗಿದೆ. ಇರಾನ್‌ನ ಟೆಹ್ರಾನ್ ಮೇಲೆ ಇಸ್ರೇಲ್ ದಾಳಿ ಹಿನ್ನೆಲೆ ಇರಾನ್‌ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಅಲರ್ಟ್ ಸಂದೇಶ ರವಾನಿಸಲಾಗಿದೆ.
ಪ್ರಸಕ್ತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಎಚ್ಚರಿಕೆ, ಸುರಕ್ಷತೆ ವಹಿಸಲು ಸೂಚನೆ ನೀಡಿದ್ದು, ಅನಗತ್ಯ ಓಡಾಟ ಮಾಡದಂತೆ, ಅನಗತ್ಯವಾಗಿ ಮನೆಗಳಿಂದ ಹೊರಗೆ ಬರದಂತೆ ಮನವಿ ಮಾಡಲಾಗಿದೆ. ಯುದ್ಧದ ಕುರಿತ ಸುದ್ದಿಗಳನ್ನು ಫಾಲೋ ಮಾಡಿ ಕಾಲಕಾಲಕ್ಕೆ ಮಾಹಿತಿ ಪಡೆದುಕೊಳ್ಳುತ್ತಿರುವಂತೆ ಸೂಚನೆ ನೀಡಲಾಗಿದೆ. ಇರಾನ್ ಭಾರತೀಯರಿಗೆ ರಾಯಭಾರ ಕಚೇರಿ ತುರ್ತು ಸಂಪರ್ಕ ಸಂಖ್ಯೆಗಳನ್ನು ಪ್ರಕಟ ಮಾಡಿದೆ.
ಇಸ್ರೇಲ್ ಹಾಗೂ ಅಮೆರಿಕ ಜಂಟಿ ಕ್ಷಿಪಣಿ ದಾಳಿಗೆ ಇಸ್ರೇಲ್ ಕೂಡ ಪ್ರತಿದಾಳಿ ಆರಂಭಿಸಿದೆ. ಬಹ್ರೇನ್‌ನಲ್ಲಿರುವ ಅಮೆರಿಕಾದ ನೌಕಾ ನೆಲೆಯ ಮೇಲೆ ಇರಾನ್ ದಾಳಿ ಮಾಡಿದೆ. ಇಸ್ರೇಲ್‌ನ ರಾಜಧಾನಿ ಟೆಲ್ ಅವೀವ್ ಮೇಲೆ ಇರಾನ್ ದಾಳಿ ನಡೆಸಿದೆ. ಅಮೆರಿಕದ ಎಲ್ಲಾ ವಾಯುನೆಲೆಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ದಾಳಿಯನ್ನು ಇರಾನ್ ಖಚಿತಪಡಿಸಿದೆ.
ಇಸ್ರೇಲ್ ಮೇಲೆ ಇರಾನ್ ಪ್ರತಿದಾಳಿ ಹಿನ್ನೆಲೆ, ಇಸ್ರೇಲ್‌ನಲ್ಲಿರುವ ಭಾರತೀಯರಿಗಾಗಿ ಸಹಾಯವಾಣಿ ಬಿಡುಗಡೆ ಮಾಡಲಾಗಿದೆ. ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಅತ್ಯಂತ ಎಚ್ಚರಿಕೆಯಿಂದ ಜಾಗರೂಕರಾಗಿರಲು ಸೂಚಿಸಲಾಗಿದೆ. ಭಾರತೀಯ ಪ್ರಜೆಗಳು ಇಸ್ರೇಲಿ ಅಧಿಕಾರಿಗಳು ಮತ್ತು ಹೋಮ್ ಫ್ರಂಟ್ ಕಮಾಂಡ್ ಹೊರಡಿಸಿದ ಸುರಕ್ಷತಾ ಮಾರ್ಗಸೂಚಿಗಳು ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲಾ ಭಾರತೀಯ ಪ್ರಜೆಗಳು ಗೊತ್ತುಪಡಿಸಿದ ಆಶ್ರಯಗಳ ಸಮೀಪದಲ್ಲಿಯೇ ಇರಬೇಕು.
ಮುಂದಿನ ಸೂಚನೆ ಬರುವವರೆಗೂ ಇಸ್ರೇಲ್‌ನೊಳಗೆ ಎಲ್ಲಾ ಅನಗತ್ಯ ಪ್ರಯಾಣವನ್ನು ತಪ್ಪಿಸಲು ಭಾರತೀಯ ಪ್ರಜೆಗಳಿಗೆ ಸೂಚನೆ ನೀಡಲಾಗಿದೆ. ನಾಗರಿಕರು ಸ್ಥಳೀಯ ಸುದ್ದಿಗಳು, ಅಧಿಕೃತ ಪ್ರಕಟಣೆಗಳು ಮತ್ತು ತುರ್ತು ಎಚ್ಚರಿಕೆಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲು ಸೂಚಿಸಲಾಗಿದೆ. ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಭಾರತೀಯ ಪ್ರಜೆಗಳು 24*7 ಸಹಾಯವಾಣಿಯ ಮೂಲಕ ಟೆಲ್ ಅವೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸೂಚನೆ ನೀಡಿದೆ.















