ಮೈಸೂರು: ಬೆಂಗಳೂರು ಅರಮನೆ ಆಸ್ತಿ ಕುರಿತು ರಾಜ್ಯ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದ್ದು, ಕಾನೂನಾತ್ಮಕ ಹೋರಾಟ ಮುಂದುವರಿಸುತ್ತೇವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮಾಧ್ಯಮದರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ನಮಗೆ ಪರಿಹಾರ ಕೊಡುವ ಅಗತ್ಯವಿಲ್ಲ. ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) ಪ್ರಮಾಣಪತ್ರ ಕೊಟ್ಟರೆ ಸಾಕು. ಆದರೆ, ಕೊಡುತ್ತಿಲ್ಲ, ಸರ್ಕಾರ ಅವರ ಕೈಯಲ್ಲಿರುವುದರಿಂದ ಹೀಗೆ ವರ್ತಿಸುತ್ತಿದ್ದಾರೆ. ಸಾರ್ವಜನಿಕ ಹಿತದೃಷ್ಟಿಗೆ ನಮ್ಮ ಆಸ್ತಿನೇ ಬೇಕಾ ಎಂದು ಯದುವೀರ್ ಪ್ರಶ್ನಿಸಿದ್ದಾರೆ.
ಬೆಂಗಳೂರು ಆರಮನೆ ಆಸ್ತಿ ವಿಚಾರ ಸಂಬಂಧ ಸುಗ್ರೀವಾಜ್ಞೆಗೆ ಮುಂದಾಗಿರುವ ಸರ್ಕಾರದ ನಿರ್ಧಾರ ಕುರಿತು ಪ್ರತಿಕ್ರಿಯಿಸಿ, “ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಅನುಸಾರ ನಡೆದುಕೊಳ್ಳಲಿ, ಸಾಮಾಜಿಕ ನ್ಯಾಯದ ವಿಚಾರ ಪ್ರಸ್ತಾಪಿಸಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು.
ರಾಜ್ಯ ಸರ್ಕಾರದಿಂದ ನಮಗೆ ಯಾವುದೇ ಪರಿಹಾರ ಕೊಡುವ ಅಗತ್ಯವಿಲ್ಲ. ನಮಗೆ ಟಿಡಿಆರ್ ಸರ್ಟಿಫಿಕೇಟ್ ಕೊಟ್ಟರೆ ಸಾಕು. ಪರಿಹಾರದ ಬದಲಿಗೆ ಕೊಡುವ ಟಿಡಿಆರ್ ಕೊಟ್ಟರೆ ಸಾಕು. ಆದರೆ, ಸರ್ಕಾರ ಟಿಡಿಆರ್ ಕೊಡುತ್ತಿಲ್ಲ, ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ” ಎಂದರು.
ಸಾರ್ವಜನಿಕರ ಜಾಗ ಬಳಸಿದರೆ ಸರ್ಕಾರದಿಂದ ಪರಿಹಾರ ಕೊಡುತ್ತಾರೆ. ಹಿಂದೆ, ಸದಾಶಿವನಗರ ಕೂಡ ಬೆಂಗಳೂರು ಅರಮನೆಗೆ ಸೇರಿತ್ತು. ನಾವು ಆಗಲೇ ಸಾಮಾಜಿಕ ನ್ಯಾಯದಲ್ಲಿ ಬಹಳಷ್ಟು ಜಮೀನು ಕೊಟ್ಟಿದ್ದೇವೆ. ಸಾಮಾನ್ಯರಿಗಿರುವ ಕಾನೂನೇ ನಮಗೂ ಇದೆ. ಟಿಡಿಆರ್ ಬದಲು ನಗದು ಪರಿಹಾರ ಹೇಳಬಹುದಿತ್ತು. ಆದರೆ, ನಮ್ಮ ಸರ್ಕಾರದ ಖಜಾನೆಗೆ ಧಕ್ಕೆಯಾಗುತ್ತದೆ ಎಂಬ ಕಾರಣದಿಂದ ಟಿಡಿಆರ್‌ಗೆ ಒಪ್ಪಿಕೊಂಡಿದ್ದೇವೆ. ಈ ವಿಷಯದಲ್ಲಿ ಹೆಚ್ಚು ಚರ್ಚಿಸುವ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟ್ ಆದೇಶವೂ ಇದೆ ಎಂದರು.
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಅವರಿಂದ ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಹೇಳಿದ್ದೇವೆ ಇದೊಂದು ಗಂಭೀರವಾದ ಪ್ರಕರಣ. ಈ ಪ್ರಕರಣದಲ್ಲಿ ಪತ್ನಿಯ ಹೆಸರಿರುವ ಕಾರಣದಿಂದ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ನಮ್ಮ ಪಕ್ಷ ಈಗಾಗಲೇ ಆಗ್ರಹಿಸಿದೆ. ಆ ನಿಲುವಿನಲ್ಲಿ ಬದಲಾವಣೆ ಇಲ್ಲ, ಸಿಎಂ ಸಿದ್ದರಾಮಯ್ಯನವರು ಈಗಾಲಾದರೂ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಲಿ ಎಂದು ಸಂಸದ ಯದುವೀರ್ ಒಡೆಯರ್ ಒತ್ತಾಯಿಸಿದರು.