ಬೆಂಗಳೂರು: ಅರಣ್ಯ ಇಲಾಖೆಯಿಂದ ರಾಜ್ಯದ ವಿವಿಧೆಡೆ ನಿರ್ಮಿಸಲಾಗಿರುವ ಜೈವಿಕ ಉದ್ಯಾನ ಮತ್ತು ಸಸ್ಯೋದ್ಯಾನಗಳಲ್ಲಿರುವ ಮರಗಳ ಹೆಸರು, ಅವುಗಳ ಪ್ರಭೇದ ಇತ್ಯಾದಿಯ ಸಂಕ್ಷಿಪ್ತ ವಿವರವಿರುವ ಫಲಕ ಹಾಕುವ ಮೂಲಕ ಇಂದಿನ ಮಕ್ಕಳು ವೃಕ್ಷ ಗುರುತಿಸುವಂತೆ ಅರಿವು ಮೂಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಣ್ಣೂರು ಜೈವಿಕ ಉದ್ಯಾನಕ್ಕೆ ಇಂದು ಸಚಿವ ಕೆ.ಜೆ. ಜಾರ್ಜ್ ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದ ಅವರು, ಉದ್ಯಾನದ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತಂತೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಬೆಂಗಳೂರು ನಗರದಲ್ಲಿ ಬಡಾವಣೆಗಳು, ಬಹುಮಹಡಿ ಕಟ್ಟಡಗಳ ಜೊತೆಗೆ ವಾಹನಗಳ ಸಂಖ್ಯೆಯೂ ವಿಪರೀತ ಏರಿಕೆ ಆಗುತ್ತಿದ್ದು, ಕಟ್ಟಡ ಮತ್ತು ವಾಹನದಿಂದ ಹೊರಹೊಮ್ಮುವ ಶಾಖವನ್ನು ತಡೆಯಲು ಮರಗಳಿಂದ ಮಾತ್ರ ಸಾಧ್ಯ. ಹೀಗಾಗಿ ಎಲ್ಲ ಬಡಾವಣೆಯಲ್ಲೂ ಸ್ಥಳೀಯ ವೃಕ್ಷಗಳನ್ನು ಬೆಳೆಸಿ, ಸಾರ್ವಜನಿಕರಿಗೆ ಶುದ್ಧ ಆಮ್ಲ ಜನಕ ಲಭ್ಯವಾಗುವಂತೆ ಮಾಡಲು ಕ್ರಮ ವಹಿಸುವಂತೆ ಸೂಚಿಸಿದರು.
ಉದ್ಯಾನದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮತ್ತು ಪ್ರವೇಶದ್ವಾರವನ್ನು ಆಕರ್ಷಕಗೊಳಿಸಲೂ ಈಶ್ವರ ಖಂಡ್ರೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಮತ್ತಿತರರರು ಹಾಜರಿದ್ದರು.














