ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳಲ್ಲಿ ಇಸ್ಕಾನ್‌ನ ‘ಪೌಷ್ಟಿಕ ಆಹಾರ’ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಂದು ಚಾಲನೆ ನೀಡಿದರು. ಇನ್ಮುಂದೆ ಆಸ್ಪತ್ರೆಗಳಲ್ಲಿ ಇಸ್ಕಾನ್‌ನ ರುಚಿಕರ ಹಾಗೂ ಆರೋಗ್ಯಕರ ಊಟ ಸಿಗಲಿದೆ.
ಇಂದಿರಾನಗರದಲ್ಲಿರುವ ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಊಟ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಸದ್ಯ ಕೆಸಿ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಇಸ್ಕಾನ್ ಊಟ ಸಿಗಲಿದೆ.
ಸುಮಾರು 9 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ 1.37 ಕೋಟಿ ರೂಪಾಯಿ ವೆಚ್ಚವಾಗಲಿದೆ. ಜನರಲ್ ರೋಗಿಗಳಿಗೆ, ಥೆರಪಿಸ್ಟ್, ಬಾಣಂತಿಯರಿಗೆ ಬೇರೆ ಪೌಷ್ಠಿಕ ಆಹಾರ, ಮಕ್ಕಳಿಗೆ ಬೇರೆ ರೀತಿಯ ಪೌಷ್ಠಿಕ ಆಹಾರವನ್ನು ನಾಲ್ಕು ವರ್ಗದ ರೋಗಿಗಳಿಗೆ ಐದು ಮಾದರಿಯ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುವುದು.
ಯೋಜನೆಗೆ ಚಾಲನೆ ಬಳಿಕ ದಿನೇಶ್ ಗುಂಡೂರಾವ್ ಮಾತನಾಡಿ, ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ ಕ್ಯಾಥ್ ಲ್ಯಾಬ್ ಆರಂಭ ಮಾಡುವುದಾಗಿ ಘೋಷಣೆ ಮಾಡುತ್ತೇವೆ. ಮಂಗಳೂರು, ಹೋಸಕೋಟೆಯಲ್ಲಿ ಕೂಡ ಕ್ಯಾಥ್ ಲ್ಯಾಬ್ ಓಪನ್ ಮಾಡ್ತೇವೆ. ಮೂರು ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿದ್ದೇವೆ. ಇದನ್ನು ಇನ್ನೂ ವಿಸ್ತರಣೆ ಮಾಡೋ ಬಗ್ಗೆ ಚಿಂತನೆ ಆಗುತ್ತದೆ.
ಐದು ಥರದ ಪೌಷ್ಟಿಕ ಆಹಾರ ವಿತರಣೆ ಮಾಡ್ತಾ ಇದ್ದೇವೆ. ಬಾಣಂತಿಯರಿಗೆ ಒಂದು ಆಹಾರ ಕ್ರಮ, ಥೆರಪಿಸ್ಟ್ಗಳಿಗೆ ಒಂದು ಮಾದರಿಯ ಆಹಾರ ಕ್ರಮ, ಮಕ್ಕಳಿಗೆ ಒಂದು ರೀತಿಯ ಆಹಾರ ಕ್ರಮ ಜಾರಿ ಆಗ್ತಿದೆ. ನಮ್ಮ ಆಸ್ಪತ್ರೆಯಲ್ಲಿ ಪ್ರಾರಂಭ ಆಗಿರೋದು ನನಗೆ ಬಹಳ ಸಂತೋಷ ಮತ್ತು ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.
ಮೊಟ್ಟೆ ಕೊಡದಿದ್ದರೂ ಪ್ರೋಟಿನ್ ಕಂಟೆಂಟ್ ಅನ್ನು ಕೊಡಬೇಕು. ಇದು ಪ್ರಥಮ ಹಂತದಲ್ಲಿ ಮೂರು ಆಸ್ಪತ್ರೆ. ಎಲ್ಲೆಲ್ಲಿ ಇಸ್ಕಾನ್ ಇದೆ, ಅಲ್ಲಿಯ ಜಿಲ್ಲಾ ಆಸ್ಪತ್ರೆಗಳಿಗೆ ವಿಸ್ತರಿಸೋದಕ್ಕೆ ತೀರ್ಮಾನ ಮಾಡುತ್ತೇವೆ. ಬೆಳಗಾವಿ, ಬಳ್ಳಾರಿ, ಧಾರವಾಡ, ಮೈಸೂರು ಹಲವು ಕಡೆ ವಿಸ್ತರಣೆ ಮಾಡುತ್ತೇವೆ. ಕೆ.ಆರ್ ಪುರಂ ಆಸ್ಪತ್ರೆಗೂ ವಿಸ್ತರಣೆಯನ್ನ ಮಾಡ್ತೇವೆ ಎಂದು ಹೇಳಿದ್ದಾರೆ.
ಮೂರು ಆಸ್ಪತ್ರೆಗಳಿಗೆ 9 ತಿಂಗಳಿಗೆ 1.45 ಕೋಟಿ ಭರಿಸಬೇಕು. ಈ ಮೂರು ಆಸ್ಪತ್ರೆ ಇಸ್ಕಾನ್ ಸುಪರ್ದಿಗೆ ಕೊಟ್ಟಿದ್ದೇವೆ. ಬಾಣಂತಿಯರು, ಗರ್ಭಿಣಿಯರಿಗೆ ಡಯಟ್ ಪ್ಲಾನ್ ಹಾಗೂ ಮಕ್ಕಳಿಗೆ ಪ್ರತ್ಯೇಕ ಡಯಟ್ ಪ್ಲಾನ್ ಇದೆ. ಇದು ಖಂಡಿತ ಯಶಸ್ಸು ಸಿಗುತ್ತೆ. ಒಂದೇ ತರಹದ ಆಹಾರ ಇರುತ್ತೆ. ಗುಣಮಟ್ಟ ನೋಡಿಕೊಳ್ಳೋದಕ್ಕೆ ಸಾಧ್ಯ ಆಗ್ತಾ ಇರಲಿಲ್ಲ. ಸಾಕಷ್ಟು ದೂರು ಬರ್ತಾ ಇತ್ತು.
ಇಸ್ಕಾನ್ ಅವರಿಗೆ ಬಹಳಷ್ಟು ಅನುಭವ ಇದೆ. ನಮಗೆ ಖರ್ಚು ಕೂಡ ತುಂಬ ಆಗ್ತಾ ಇರಲಿಲ್ಲ. ಮೊಟ್ಟೆ ಬದಲು ಸೋಯಾ ಚಂಕ್ಸ್ ಕೊಡುತ್ತೇವೆ. ಪೂರ್ತಿ ಜವಾಬ್ದಾರಿ ಇಸ್ಕಾನ್ ಆಗಿರುವುದರಿಂದ ಪೌಷ್ಟಿಕಾಂಶ, ಸ್ವಚ್ಛತೆ ಇರಬೇಕು. ವಿತರಣೆ ಸಲಕರಣೆ ಎಲ್ಲಾ ಇಸ್ಕಾನ್ ಅವರದ್ದೇ. ಇಸ್ಕಾನ್ ಇರುವ ಕಡೆ ಈ ವ್ಯವಸ್ಥೆ ಮುಂದುವರಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.














