ಮನೆ ಅಂತರಾಷ್ಟ್ರೀಯ ಇಸ್ರೇಲ್ ವೈಮಾನಿಕ ದಾಳಿಯಿಂದ ಇರಾನ್‌ ಮೇಲೆ ಭೀಕರ ಆಘಾತ: 78 ಮಂದಿ ಸಾವು, 320ಕ್ಕೂ ಹೆಚ್ಚು...

ಇಸ್ರೇಲ್ ವೈಮಾನಿಕ ದಾಳಿಯಿಂದ ಇರಾನ್‌ ಮೇಲೆ ಭೀಕರ ಆಘಾತ: 78 ಮಂದಿ ಸಾವು, 320ಕ್ಕೂ ಹೆಚ್ಚು ಗಾಯ

0

ಟೆಹರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ವಾತಾವರಣ ಮತ್ತಷ್ಟು ತೀವ್ರಗೊಂಡಿದ್ದು, ಇಸ್ರೇಲ್ ನಡೆಸಿದ ತೀವ್ರ ವೈಮಾನಿಕ ದಾಳಿಯಿಂದ ಇರಾನ್‌ನಲ್ಲಿ ಭಾರೀ ಹಾನಿ ಸಂಭವಿಸಿದೆ. ಇಂದು ಮುಂಜಾನೆ ನಡೆದ ಹಠಾತ್ ದಾಳಿಯಲ್ಲಿ ಕನಿಷ್ಠ 78 ಮಂದಿ ಸಾವನ್ನಪ್ಪಿದ್ದು, 320ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ದಾಳಿ ಟೆಹರಾನ್ ಸೇರಿದಂತೆ ವಿವಿಧ ಸ್ತ್ರಾಟೆಜಿಕ್ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ. ಇವುಗಳಲ್ಲಿ ಪ್ರಮುಖ ಮಿಲಿಟರಿ ತಾಣಗಳು ಹಾಗೂ ಪರಮಾಣು ಸಂಶೋಧನಾ ಕೇಂದ್ರಗಳೂ ಸೇರಿವೆ. ಇಸ್ರೇಲ್‌ ವಿಮಾನಗಳು ಈ ದಾಳಿಯನ್ನು ಮುಂಜಾನೆಲೇ ಕೈಗೊಂಡು ಹಲವಾರು ಕಡೆಗಳಲ್ಲಿ ಸ್ಫೋಟಕ್ಕೆ ಕಾರಣವಾಗಿವೆ ಎಂದು ವರದಿಯಾಗಿದೆ.

ಟೆಹರಾನ್‌ನ ಮೆಹ್ರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಈ ಪ್ರದೇಶದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಅಪಾಯದ ಭೀತಿಯಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಇಸ್ರೇಲ್ ದಾಳಿಗೆ ತಕ್ಷಣ ಪ್ರತಿಕ್ರಿಯಿಸಿರುವ ಇರಾನ್, ಇಸ್ರೇಲ್‌ನೊಳಗಿನ ಕೆಲ ಪ್ರದೇಶಗಳಿಗೆ ಡ್ರೋನ್ ಹಾಗೂ ಕ್ಷಿಪಣಿಗಳಿಂದ ಪ್ರತೀಕಾರ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮೂಲಗಳು ತಿಳಿಸಿವೆ. ಹಲವಾರು ಸ್ಥಳಗಳಲ್ಲಿ ಅಪಾರ ಮೌಲ್ಯದ ಹಾನಿ ಸಂಭವಿಸಿದೆ.