ಮನೆ ಅಂತಾರಾಷ್ಟ್ರೀಯ ಹಮಾಸ್‌ ಕಳ್ಳಾಟಕ್ಕೆ ಇಸ್ರೇಲ್‌ ಕೆಂಡ – ಗಾಜಾ ಮೇಲೆ ಮತ್ತೆ ದಾಳಿ

ಹಮಾಸ್‌ ಕಳ್ಳಾಟಕ್ಕೆ ಇಸ್ರೇಲ್‌ ಕೆಂಡ – ಗಾಜಾ ಮೇಲೆ ಮತ್ತೆ ದಾಳಿ

0

ಗಾಜಾ : ಹಮಾಸ್‌ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕೆ ಸಿಟ್ಟಾಗಿರುವ ಇಸ್ರೇಲ್‌ ಭಾರೀ ಪ್ರಮಾಣದಲ್ಲಿ ನಡೆಸಿದ ದಾಳಿಗೆ ಗಾಜಾ ಪಟ್ಟಿಯಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

ಇಸ್ರೇಲ್‌ ಉತ್ತರ ಗಾಜಾದ ಹಲವಾರು ಜಾಗಗಳನ್ನು ಗುರಿಯಾಗಿಸಿ ಇಸ್ರೇಲ್‌ ವಾಯು ದಾಳಿ ನಡೆಸಿದೆ. ಮಧ್ಯ ಗಾಜಾ ಪಟ್ಟಿಯಲ್ಲಿರುವ ಬುರೈಜ್ ನಿರಾಶ್ರಿತರ ಶಿಬಿರದಲ್ಲಿ ಮನೆ ಮೇಲೆ ದಾಳಿ ನಡೆಸಿದ ಐದು ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ನಗರ ಖಾನ್ ಯೂನಿಸ್‌ನಲ್ಲಿ, ಮತ್ತೊಂದು ದಾಳಿಯಲ್ಲಿ ಇಬ್ಬರು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ.

ಉತ್ತರ ಗಾಜಾದ ವೈದ್ಯಕೀಯ ಸೌಲಭ್ಯದ ಬಳಿ ಕನಿಷ್ಠ ಮೂರು ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಅಲ್ ಶಿಫಾ ಆಸ್ಪತ್ರೆಯ ನಿರ್ದೇಶಕ ಡಾ. ಮೊಹಮ್ಮದ್ ಅಬು ಸಲ್ಮಿಯಾ ಹೇಳಿದ್ದಾರೆ. ಹಮಾಸ್ ಒತ್ತೆಯಾಳಿನ ಮೃತದೇಹ ಇರುವ ಶವಪೆಟ್ಟಿಗೆಯನ್ನು ಹಸ್ತಾಂತರಿಸಿತ್ತು. ಆದರೆ ಈ ಶವಪೆಟ್ಟಿಗೆಯಲ್ಲಿ ಈ ಹಿಂದೆ ಮರಳಿಸಿದ ಒತ್ತೆಯಾಳಿನ ಮೃತದೇಹದ ಹೆಚ್ಚಿನ ಭಾಗಗಳಿದ್ದವು ಎಂದು ಇಸ್ರೇಲ್ ಹೇಳಿದೆ.

ಹಸ್ತಾಂತರಿಸಲಾದ ದೇಹದ ಭಾಗಗಳು ಓಫಿರ್ ಝರ್ಫಾಟಿ ಎಂಬವರಿಗೆ ಸೇರಿದೆ ಎನ್ನುವುದು ವಿಧಿವಿಜ್ಞಾನ ಪರೀಕ್ಷೆಗಳಿಂದ ದೃಢಪಟ್ಟಿತ್ತು. ಆದರೆ ಅವರ ಮೃತ ದೇಹವನ್ನು 2023ರ ಕೊನೆಯಲ್ಲಿ ಇಸ್ರೇಲ್‌ ಪಡೆಗಳು ವಶಪಡಿಸಿದ್ದವು. ಈಗ ಕಳುಹಿಸಿದ ಮೃತದೇಹಗಳು ಗಾಜಾದಲ್ಲಿ ಮೃತಪಟ್ಟ 13 ಮೃತ ಒತ್ತೆಯಾಳುಗಳದ್ದಲ್ಲ ಎಂದು ತಿಳಿಸಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದಲ್ಲಿ ಅರಬ್ ರಾಷ್ಟ್ರಗಳ ಸಮ್ಮುಖದಲ್ಲಿ ಕದನ ವಿರಾಮ ಘೋಷಣೆಯಾಗಿತ್ತು. ಈಗ ಬೇರೆ ವ್ಯಕ್ತಿಯ ಮೃತದೇಹವನ್ನು ಕಳುಹಿಸಿ ಹಮಾಸ್‌ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಇಸ್ರೇಲ್‌ ಹೇಳಿದೆ.

ಒತ್ತೆಯಾಳುಗಳನ್ನು ಹತ್ಯೆ ಮಾಡಿ ನಂತರ ಇಸ್ರೇಲ್‌ ದಾಳಿಗೆ ಇವರು ಹತ್ಯೆಯಾಗಿದ್ದಾರೆ ಎಂದು ಹಮಾಸ್‌ ಬಿಂಬಿಸುತ್ತಿದೆ. ಇದಕ್ಕೆ ಸಾಕ್ಷ್ಯವಾಗಿ ಐಡಿಎಫ್‌ ವಿಡಿಯೋ ರಿಲೀಸ್‌ ಮಾಡಿದೆ. ಈ ವಿಡಿಯೋದಲ್ಲಿ ಕಟ್ಟಡದಿಂದ ಇಸ್ರೇಲ್‌ ಒತ್ತೆಯಾಳುವಿನ ಶವವನ್ನು ಎಸೆಯಲಾಗಿದ್ದು ನಂತರ ಅದನ್ನು ಮಣ್ಣಿನಲ್ಲಿ ಹೂಳಲಾಗಿದೆ. ಈ ಎಲ್ಲಾ ದೃಶ್ಯಗಳು ಡ್ರೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹಮಾಸ್‌ ಕಳ್ಳಾಟಕ್ಕೆ ಇಸ್ರೇಲ್‌ ಈಗ ಸಿಟ್ಟಾಗಿದೆ. ಭದ್ರತಾ ಸಮಾಲೋಚನೆಗಳ ನಂತರ ಪ್ರಧಾನಿ ನೆತನ್ಯಾಹು ಅವರು ಗಾಜಾ ಪಟ್ಟಿ ಮೇಲೆ ತಕ್ಷಣವೇ ಪ್ರಬಲ ದಾಳಿಗಳನ್ನು ನಡೆಸುವಂತೆ ಮಿಲಿಟರಿಗೆ ಸೂಚನೆ ನೀಡಿದ್ದರು.