ಚಾಮರಾಜನಗರ(Chamarajanagar): ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸಿ.ಟಿ.ರವಿ ಹಗಲು ಕನಸು ಕಾಣುತ್ತಿದ್ದಾರೆ. ಮುಂದೆ ನಾವೇ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಉಚಿತ ಭಾಗ್ಯಗಳನ್ನು ಘೋಷಣೆ ಮಾಡುತ್ತಿಲ್ಲ. ನಾವು ಏನು ಮಾಡುತ್ತೇವೆಯೋ ಅದನ್ನು ಹೇಳುತ್ತಿದ್ದೇವೆ. ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆಯೋ ಅದನ್ನೇ ಹೇಳುತ್ತಿದ್ದೇವೆ ಎಂದು ಉತ್ತರಿಸಿದರು.
ಕೋವಿಡ್ ಸಮಯದಲ್ಲಿ ಹಗರಣ ನಡೆದಿಲ್ಲ. ಸಾಬೀತಾದರೆ ಸಾರ್ವಜನಿಕವಾಗಿ ನೇಣು ಹಾಕಿ ಎಂದು ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನೀಡಿರುವ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,ಆತ ನೇಣುಹಾಕಿಕೊಳ್ಳುವುದೇನೂ ಬೇಡ. ಬದುಕಿರಲಿ ಎಂದು ಹೇಳಿದರು.
ಕೋವಿಡ್ ಸಮಯದಲ್ಲಿ ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೆ 36 ಜನರು ಸತ್ತರು. ಅವರ ಸಾವಿಗೆ ಸುಧಾಕರ್ ಕಾರಣ. 36 ಜನರು ಮೃತಪಟ್ಟರೂ ಮೂವರು ಮೃತಪಟ್ಟರು ಎಂದು ಸುಳ್ಳು ಹೇಳಿದ್ದರು. ಸಚಿವರಾಗಲು ಆತ ಲಾಯಕ್ಕಿಲ್ಲ ಎಂದು ಹೇಳಿದರು.
ಮೊದಲು ಹಗರಣದ ಬಗ್ಗೆ ತನಿಖೆ ಮಾಡಲಿ. ಅವರ ಮೇಲಿನ ಆರೋಪಗಳು ಸಾಬೀತಾಗುತ್ತವೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅವರದ್ದೇ ಸರ್ಕಾರದ ಇದೆ. ತನಿಖೆ ಮಾಡಬೇಕಾಗಿರುವವರೂ ಅವರೇ ಎಂದರು.