ಮನೆ ಸುದ್ದಿ ಜಾಲ ಉಕ್ರೇನ್‌ನ ಶಿಶುವಿಹಾರದ ಮೇಲೆ ರಷ್ಯಾ ದಾಳಿ

ಉಕ್ರೇನ್‌ನ ಶಿಶುವಿಹಾರದ ಮೇಲೆ ರಷ್ಯಾ ದಾಳಿ

0

ನ್ಯೂಯಾರ್ಕ್‌: ಉಕ್ರೇನ್‌ನಲ್ಲಿರುವ ಕಿಂಡರ್‌ಗಾರ್ಟನ್‌ (ಶಿಶುವಿಹಾರ) ಮೇಲೆ ರಷ್ಯಾ ಗುರುವಾರ ಫಿರಂಗಿ ದಾಳಿ ನಡೆಸಿದೆ.

ಉಕ್ರೇನ್‌ನ ನಿಯಂತ್ರಣಕ್ಕೆ ಒಳಪಟ್ಟಿರುವ ಡಾನ್‌ಬಾಸ್‌ ಎಂಬಲ್ಲಿನ ಶಿಶುವಿಹಾರದ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿದೆ. ಘಟನೆಯಲ್ಲಿ ಇಬ್ಬರು ಶಿಕ್ಷಕರು ಗಾಯಗೊಂಡಿದ್ದಾರೆ. ಹೀಗಾಗಿ ಹಳ್ಳಿಯಲ್ಲಿ ವಿದ್ಯುತ್‌ ಕಡಿತಗೊಂಡಿದೆ.

ಈ ನಡುವೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ‘ಮುಂಬರುವ ದಿನಗಳಲ್ಲಿ ರಷ್ಯಾ ತನ್ನ ನೆರೆಯ ರಾಷ್ಟ್ರದ ಮೇಲೆ ಮೇಲೆ ಆಕ್ರಮಣ ಮಾಡಲು ಆದೇಶಿಸಬಹುದು’ ಎಂದು ಗುಪ್ತಚರ ಇಲಾಖೆಯ ಮಾಹಿತಿಯಿಂದ ಗೊತ್ತಾಗಿದೆ ಎಂದು ಹೇಳಿದ್ದಾರೆ.

‘ಉಕ್ರೇನ್‌ ಮೇಲೆ ಯುದ್ಧ ಮಾಡುವುದಿಲ್ಲ ಎಂದು ರಷ್ಯಾ ಯಾವುದೇ ಇಬ್ಬಂದಿತನವಿಲ್ಲದೇ, ಅಚಲವಾಗಿ ಇಂದು ಘೋಷಿಸಬೇಕು. ಅದನ್ನು ಸ್ಪಷ್ಟವಾಗಿ, ಸರಳವಾಗಿ ಜಗತ್ತಿಗೆ ತಿಳಿಸಬೇಕು,’ ಎಂದು ಆಗ್ರಹಿಸಿದ್ದಾರೆ.

‘ನಿಮ್ಮ ಸೇನಾ ಪಡೆಗಳು, ನಿಮ್ಮ ಟ್ಯಾಂಕ್‌ಗಳು, ನಿಮ್ಮ ವಿಮಾನಗಳನ್ನು ಮರಳಿ ಅವುಗಳ ಶಾಶ್ವತ ನೆಲೆಗಳಿಗೆ ಕಳಿಸಬೇಕು. ನಿಮ್ಮ ರಾಜತಾಂತ್ರಿಕರನ್ನು ಸಂಧಾನಕ್ಕೆ ಕಳುಹಿಸುವ ಮೂಲಕ ಯುದ್ಧ ಮಾಡುವುದಿಲ್ಲ ಎಂಬ ಬದ್ಧತೆಯನ್ನು ಪ್ರದರ್ಶಿಸಬೇಕು,’ ಎಂದು ಅವರು ಒತ್ತಾಯಿಸಿದ್ದಾರೆ.

ಇದರಿಂದಾಗಿ ರಷ್ಯಾ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿಲ್ಲ ಎಂಬ ವಾದವನ್ನು ಅಮೆರಿಕ ಮತ್ತಷ್ಟು ಪ್ರಬಲವಾಗಿ ಮಂಡಿಸುತ್ತಿದ್ದು, ಉಕ್ರೇನ್‌ ಮೇಲೆ ಭಾರಿ ಮಿಲಿಟರಿ ದಾಳಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದೆ. ಅಲ್ಲದೇ, ರಷ್ಯಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಉಕ್ರೇನ್‌ ಮೇಲೆ ಯುದ್ಧ ಮಾಡುವ ಮನಸ್ಸಿಲ್ಲ ಎಂದು ರಷ್ಯಾ ಪ್ರತಿಪಾದಿಸುತ್ತಲೇ ಬಂದಿದೆ. ಆದರೆ, ಪೂರ್ವ ಯೂರೋಪ್‌ನಿಂದ ನ್ಯಾಟೋ ಮತ್ತು ಅಮೆರಿಕ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂಬ ತನ್ನ ಬೇಡಿಕೆ ಈಡೇರದೇ ಹೋದರೆ, ‘ಮಿಲಿಟರಿ – ತಾಂತ್ರಿಕ ಕ್ರಮ’ಗಳನ್ನು ಕೈಗೊಳ್ಳುವುದಾಗಿ ರಷ್ಯಾ ಹೇಳಿದೆ.

ಹಿಂದಿನ ಲೇಖನಐಎಂಎ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಜೀಪ್ ನಿಂದ ಗುದ್ದಿ ತಾಯಿಯನ್ನೇ ಹತ್ಯ ಮಾಡಿದ ಮಗ