ಪ್ರಯಾಣಿಕರು ರೈಲಿನಲ್ಲಿ ಸಂಚರಿಸುವಾಗ ಅವರ ವಸ್ತುಗಳು ಕಳವಾದರೆ ಅದನ್ನು ರೈಲ್ವೆಯ ಸೇವಾ ನ್ಯೂನತೆ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ .
[ಸ್ಟೇಷನ್ ಮೇಲ್ವಿಚಾರಕರು ಮತ್ತು ಇತರರು ವರ್ಸಸ್ ಸುರೇಂದರ್ ಭೋಲಾ].
ರೈಲಿನಲ್ಲಿ ಪ್ರಯಾಣಿಕರು ತಮ್ಮ ಯಾವುದೇ ವಸ್ತುಗಳನ್ನು ಕಳೆದುಕೊಂಡರೆ ಅದಕ್ಕಾಗಿ ಹಣ ಮರುಪಾವತಿಯನ್ನು ಭಾರತೀಯ ರೈಲ್ವೆಯಿಂದ ಕೇಳಲಾಗದು ಎಂದು ನ್ಯಾಯಮೂರ್ತಿಗಳಾದ ವಿಕ್ರಂ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ಹೇಳಿದೆ.
ರೈಲ್ವೆ ಪ್ರಯಾಣದ ಸಂದರ್ಭದಲ್ಲಿ ₹1 ಲಕ್ಷ ರೂಪಾಯಿ ಕಳೆದುಕೊಂಡಿದ್ದ ವ್ಯಕ್ತಿಗೆ ಹಣ ಮರಳಿಸುವಂತೆ ಆದೇಶ ಮಾಡಿದ್ದ ಗ್ರಾಹಕರ ವ್ಯಾಜ್ಯ ಆಯೋಗದ ಆದೇಶವನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
“ಕಳವನ್ನು ರೈಲ್ವೆಯ ಸೇವಾ ನ್ಯೂನತೆ ಎಂದು ಅರ್ಥ ಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರು ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅದಕ್ಕೆ ರೈಲ್ವೇಯನ್ನು ಹೊಣೆ ಮಾಡಲಾಗದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉತ್ತರ ಪ್ರದೇಶದ ಪ್ರಯಾಣಿಕರೊಬ್ಬರು ರೈಲ್ವೇ ಪ್ರಯಾಣದ ವೇಳೆ ಸೊಂಟದ ಸುತ್ತ ಧರಿಸಿದ್ದ ಬೆಲ್ಟ್ ಗೆ ಆತುಕೊಂಡಂತೆ ರೂ. 1 ಲಕ್ಷ ಹಣ ಇರಿಸಿಕೊಂಡಿದ್ದರು. ಪ್ರಯಾಣದ ವೇಳೆ ಈ ಹಣ ಕಳವಾಗಿತ್ತು. ಈ ಸಂಬಂಧ ಪ್ರಯಾಣಿಕ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಆಲಿಸಿದ್ದ ನ್ಯಾಯಾಲಯವು ಸಂತ್ರಸ್ತ ಪ್ರಯಾಣಿಕನಿಗೆ ಪರಿಹಾರ ನೀಡುವಂತೆ ರೈಲ್ವೇಗೆ ಆದೇಶಿಸಿತ್ತು. ಇದಕ್ಕೆ ಆಕ್ಷೇಪಿಸಿ ರೈಲ್ವೇಯು ಮೇಲ್ಮನವಿ ಅರ್ಜಿ ದಾಖಲಿಸಿತ್ತು. ಈ ಮೇಲ್ಮನವಿಯನ್ನು ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಎತ್ತಿ ಹಿಡಿದಿತ್ತು. ಈ ಆದೇಶವನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವೂ ಪುರಸ್ಕರಿಸಿತ್ತು.
ಆದರೆ, ಇದರ ವಿರುದ್ಧ ಅಂತಿಮವಾಗಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆಯಾಗಿತ್ತು. ಇದೀಗ ಸರ್ವೋಚ್ಚ ನ್ಯಾಯಾಲಯವು ಸಹ ಜಿಲ್ಲಾ ನ್ಯಾಯಾಲಯದ ಅದೇಶವನ್ನು ಬದಿಗೆ ಸರಿಸಿದೆ.