ನವದೆಹಲಿ: ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಸರ್ವೀಸ್ ದೆಹಲಿ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬಿಬಿಸಿ ಕಚೇರಿಯಲ್ಲಿ ಐಟಿ ಇಲಾಖೆ ಅಧಿಕಾರಿಗಳಿಂದ ತಪಾಸಣೆ ನಡೆಸುತ್ತಿದ್ದು ಸಿಬ್ಬಂದಿಯ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನೌಕರರು ಕೂಡ ಕಚೇರಿ ಬಿಟ್ಟು ಬೇಗ ಮನೆಗೆ ತೆರಳುವಂತೆ ತಿಳಿಸಲಾಗಿದೆ. ಕೆಲವು ದಾಖಲೆಗಳ ಪರಿಶೀಲನೆ ನಡೆಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಬಿಬಿಸಿ ಇತ್ತೀಚೆಗೆ 2022 ರ ಗುಜರಾತ್ ಹಿಂಸಾಚಾರಕ್ಕೆ ಸಂಬಂಧಿಸಿದ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ್ದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಆಪಾದನೆ ಮಾಡಲಾಗಿತ್ತು.
ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ತಡೆ ಹಿಡಿದಿರುವುದಕ್ಕೆ ಕೇಂದ್ರ ಸರ್ಕಾರ ಉಲ್ಲೇಖಿಸಿರುವ ಯಾವ ಕಾರಣವೂ ಸರಿಯಾಗಿಲ್ಲ, ಸಮಂಜಸವಾಗಿಲ್ಲ ಎಂದು ವಿರೋಧ ಪಕ್ಷಗಳು ಹೇಳಿದ್ದವು.
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮಾಹಿತಿ ತಂತ್ರಜ್ಞಾನ ನಿಯಮ– 2021ರ ಅಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿ, ಈ ಸಾಕ್ಷ್ಯಚಿತ್ರವನ್ನು ತಡೆಹಿಡಿಯುವಂತೆ ಯೂಟ್ಯೂಬ್’ಗೆ, ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ವೆಬ್ ಕೊಂಡಿಗಳನ್ನು ತಡೆಹಿಡಿಯುವಂತೆ ಟ್ವಿಟರ್’ಗೆ ಸೂಚನೆ ರವಾನಿಸಿತ್ತು.