ಸ್ವಾಯಂಭುಮನುವು ವಂಶಾವಳಿಯಲ್ಲಿ ತುಂಬು ಚಂದಿರನಾಗಿ ಪ್ರಿಯವ್ರತ ಮಹಾರಾಜನಿಗೆ ನಾಲ್ಕನೆಯ ಪೀಳಿಗೆಯಲ್ಲಿ ಜನಿಸಿದ ಭರತನು ನಾಭಿ ಖಂಡವನ್ನು ಸರ್ವಜನರಂಜಕವಾಗಿ ಪರಿಪಾಲಿಸಿದನು. ಕಾಲವು ಕಳೆದು ಜೀವನದ ಚರಮ ಸಂಧ್ಯ ಸಮೀಪಿಸುತ್ತಿರುವ ಸಮಯದಲ್ಲಿ ಅವನಿಗೆ ಐಹಿಕ ಸುಖಭೋಗಗಳ ಮೇಲೆ ಬಯಕೆಯು ತೊಲಗಿ ವೈರಾಗ್ಯೋದಯವುಂಟಾಯಿತು. ಕಾಮನೆಗಳು ನಶಿಸಿ ಅದ್ವಿತೀಯವಾದ ಆತ್ಮಜ್ಞಾನವನ್ನು ಹೊಂದಿದ ನಂತರ ತನಗಿನ್ನು ಕರ್ತವ್ಯ ಕರ್ಮಗಳಿಲ್ಲವೆಂದು ಗುರ್ತಿಸಿ ಮಗನಿಗೆ ರಾಜ್ಯವನ್ನು ಒಪ್ಪಿಸಿ ಮಹಾನದಿ ಪರಿಸರಗಳಲ್ಲಿರುವ ಸಾಲಿಗ್ರಾಮ ತೀರ್ಥಯಾತ್ರೆಗೆಂದು ಹೊರಟು ಹೋದನು. ಅನಾತ್ಮ ವಿಷಯಗಳಾದ ಸರ್ವ ಕ್ರಿಯೆಗಳನ್ನು ಪರಿತ್ಯಾಗ ಮಾಡಿ, ನಿವೃತ್ತಿ ಮಾರ್ಗವನ್ನು ಅನುಸರಿಸಿದ ಭರತನಿಗೆ ಸಾಲಿಗ್ರಾಮದ ತೀರ್ಥದಲ್ಲಿ ಚಿತ್ತಶಾಂತಿಯು ಲಭಿಸಿತು. ನಿರಂತರವೂ ಶ್ರೀ ಹರಿ ಧ್ಯಾನದಲ್ಲಿ ನಿಮಗ್ನನಾಗಿ ಆತ್ಮತೇಜಸ್ಸನ್ನು ಉದ್ದೀಪನ ಮಾಡಿದನು. ಜಾಗ್ರತ್ ಸ್ವಪ್ನಾವಸ್ಥೆದಲ್ಲಿಯೂ ಸಹ ಆತನ ತುಟಿಗಳಿಂದ ನಾರಾಯಣ ನಾಮಸ್ಮರಣೆಯೇ ಕೇಳಿಸುತ್ತಿತ್ತು. ಯಜ್ಞೀಶಾ! ಅಚ್ಯುತಾ! ಗೋವಿಂದಾ! ಮಾಧವಾ! ಅನಂತಾ! ಕೇಶವಾ! ಶ್ರೀಕೃಷ್ಣಾ! ಹೃಷೀಕೇಶಾ!” ಎಂದು ಮೈಮರೆತು ಪರವಶದೊಂದಿಗೆ ಶ್ರೀ ಮಹಾವಿಷ್ಣುವಿನ ನಾಮ ಸಂಕೀರ್ತನೆಯನ್ನು ಮಾಡತೊಡಗಿದನು. ಭರತನು ಕ್ರಿಯಾಚರಣೆಯು ನಿಂತು ಹೋದ ಮೇಲೆ ನೈಮಿತ್ತಿಕ ಅನುಷ್ಠಾನಗಳನ್ನು ಸಹ ಬಿಟ್ಟುಬಿಟ್ಟನು. ಫಲ, ಪುಷ್ಪ, ತೃಣ ಮುಂತಾದ ಕೈಗೆ ಸಿಕ್ಕಿದವುಗಳನ್ನೇ ತಿಂದು ಕೃಷ್ಣಾರ್ಪಣವೆಂದುಕೊಳ್ಳುತ್ತಿದ್ದನು. ಕೇಶವ ನಾಮಗಳನ್ನು ಪಾರಾಯಣ ಮಾಡುವುದನ್ನು ಹೊರತುಪಡಿಸಿದರೆ ಬೇರೆ ಧ್ಯಾನವೇ ಇಲ್ಲ.
ಒಮ್ಮೆ ಬೆಳಿಗ್ಗೆ ಭರತನು ಮುಂಜಾನೆಯೇ ಎದ್ದು ಮಹಾ ನದೀ ತೀರಕ್ಕೆ ಹೋದನು. ಆ ಪುಣ್ಯಜಲದಲ್ಲಿ ಸ್ನಾನಮಾಡಿ ಮನಸ್ಸಿನಲ್ಲಿಯೇ ಶ್ರೀಹರಿಯನ್ನು ಸ್ಮರಿಸುತ್ತಾ ತೀರದಲ್ಲಿ ಕಾಲ ಕೃತ್ಯಗಳನ್ನು ಆಚರಿಸುತ್ತಿದ್ದನು. ಅಷ್ಟರಲ್ಲಿ ಒಂದು ಆಶ್ಚರ್ಯಕರವಾದ ಘಟನೆಯು ನಡೆಯಿತು. ಭರತನು ಸ್ನಾನಕ್ಕೆಂದು ಬಂದ ಪ್ರದೇಶದ ಹತ್ತಿರದಲ್ಲಿಯೇ ಗಂಡಕೀ ಮಹಾರಣ್ಯವಿದೆ. ಆ ಅರಣ್ಯದಿಂದ ತುಂಬು ಗರ್ಭಿಣಿಯಾದಂತಹ ಒಂದು ಜಿಂಕೆಯು ಪ್ರಸವ ವೇದನೆಯಿಂದ ಆಯಾಸವಾಗಿ ಬಾಯಾರಿಕೆಯಿಂದ ಬಳಲುತ್ತಾ ಮಹಾನದಿಯಲ್ಲಿ ನೀರನ್ನು ಕುಡಿಯಲಿಕ್ಕೆಂದು ಅಲ್ಲಿಗೆ
ಬಂದಿತು. ಮರಳಿನಲ್ಲಿ ನಡೆದುಕೊಂಡು ಬಂದು ತೇವದ ನೆಲದ ಮೇಲೆ ಮುಂದಿನ ಕಾಲುಗಳನ್ನು ಮಡಚಿ ನೀರಿನಲ್ಲಿ ಬಾಯನ್ನಿಟ್ಟು ನಾಲಿಗೆಯಿಂದ ರುಚಿಯನ್ನು ಕಂಡು ಅಷ್ಟರಲ್ಲಿ ಹೃದಯಬಡಿತವು ನಿಂತು ಹೋಗುವಂತಹ ಭಯಾನಕವಾದ ಒಂದು ಸಿಂಹಘರ್ಜನೆಯು ಕೇಳಿಸಿತು. ಸೃಷ್ಟಿಯ ಪ್ರಳಯವು ಸಂಭವಿಸಿದಾಗ ಪ್ರಳಯಕಾಲ ಘರ್ಜನೆಯ ಶಬ್ದವು ದಿಗಂತಗಳಲ್ಲಿ ಪ್ರತಿಧ್ವನಿಸಿದಂತೆ ಕೇಳಿಸಿದ ಆ ಘೋರ ಶಬ್ದಕ್ಕೆ ನೀರು ಕುಡಿಯುತ್ತಿದ್ದ ಜಿಂಕೆಯು ಗಡಗಡನೆ ನಡುಗಿತು. ಎಲ್ಲಿಂದಲೋ ಬಂದ ಸಿಂಹವು ತನ್ನ ಮೇಲೆ ಎರಗುತ್ತಿದೆಯೆಂಬ ಭಯದಿಂದ ದಿಕ್ಕು ತೋಚದೆ ಉಸಿರನ್ನು ಬಿಗಿಯಾಗಿ ಮಾಡಿಕೊಂಡು ಹಿಂದಕ್ಕೆ ತಿರುಗಿ ನೋಡಿ ಕಾಲುಗಳನ್ನು ಚಾಚಿ ಛಂಗನೆ ಮುಂದಕ್ಕೆ ಹಾರಿತು. ಆ ರೀತಿ ಭಯಪಟ್ಟ ಜಿಂಕೆಯು ಹಿಂದಕ್ಕೆ ತಿರುಗಿ ನೋಡುತ್ತಾ ಜೋರಾಗಿ ಹಾರಿದ್ದಕ್ಕಾಗಿ ಪ್ರಸವ ಸಮಯವು ಸಮೀಪಿಸಿದ್ದರಿಂದ ಗರ್ಭಸ್ಥ ಪಿಂಡವು (ಭ್ರೂಣ) ಹೊಟ್ಟೆಯೊಳಗಿನಿಂದ ಹೊರಗೆ ಬಂದು ನೀರಿನೊಳಕ್ಕೆ ಜಾರಿಬಿದ್ದಿತು. ಮುಂದಕ್ಕೆ ಹಾರಿದ ತಾಯಿ ಜಿಂಕೆಯು ಈ ಹಠಾತ್ ಪರಿಣಾಮಕ್ಕೆ ತಡೆದುಕೊಳ್ಳುವ ಶಕ್ತಿಯಿಲ್ಲದೆ ನೆಲಕ್ಕೆ ಬಿದ್ದು ಮೈಯೆಲ್ಲಾ ಹುಣ್ಣಾದಂತಾಗಿ ಅಲ್ಲೇ ಭಯದಿಂದ ಪ್ರಾಣಬಿಟ್ಟಿತು. ಊಹಿಸದೇ ತನ್ನ ಕಣ್ಣ ಮುಂದೆಯೇ ಕ್ಷಣ ಕಾಲದಲ್ಲಿ ನಡೆದು ಹೋದ ಈ ಆಕಸ್ಮಿಕ ಘಟನೆಯನ್ನು ಕಂಡ ಭರತನ ಹೃದಯವು ತಲ್ಲಣಿಸಿದಂತಾಯಿತು. ಆತನು ಬೇಗನೆ ಓಡಿ ಹೋಗಿ ನೀರಿನ ಮೇಲೆ ಬಿದ್ದ ಗರ್ಭಾಂಡವು ಮುಳುಗಿ ಹೋಗುವಷ್ಟರಲ್ಲಿ ಕೈಗಳನ್ನು ಚಾಚಿ ತೆಗೆದುಕೊಂಡನು. ಅನುರಾಗದಿಂದ ಆಗ ತಾನೇ ಕಣ್ಣುಗಳನ್ನು ತೆಗೆಯುತ್ತಿದ್ದಂತಹ ಆ ಶಿಶುಮರಿಯನ್ನು ಆಪ್ಯಾಯತೆಯಿಂದ ಸ್ಪರ್ಶಿಸಿ ಅದರ ಆಯಾಸವನ್ನು ನಿವಾರಿಸಿದನು. ಸ್ವಲ್ಪ ಹೊತ್ತಿಗೆ ಆ ಜಿಂಕೆಮರಿಯು ಕಣ್ಣುಗಳನ್ನು ತೆಗೆದು ಎದ್ದು ನಡೆದಾಡಲು ಆರಂಭಿಸಿತು. ಆ ಮರಿಯು ತಾಯಿಯ ಹಾಲಿಗಾಗಿ ತಡವರಿಸಿತು. ಹಸಿವಿನಿಂದ ಅದರ ಗಂಟಲು ಒಣಗಿ ಹೋಗುತ್ತಿದ್ದರೆ ಅದನ್ನು ಕಂಡ ಭರತನು ಯಾವ ರೀತಿಯಲ್ಲಾದರೂ ಇದರ ಹಸಿವನ್ನು ತೀರಿಸಬೇಕೆಂದು ನಿಶ್ಚಯಿಸಿದನು.
ರಾಜಯೋಗಿ ಪ್ರವರನಾಗಿ ಭವಬಂಧಗಳನ್ನು ತ್ಯಜಿಸಿ, ಮೋಕ್ಷ ದ್ವಾರದಲ್ಲಿ ನಿಂತಿರುವ ಭರತನಿಗೆ ಆ ವಿಧವಾಗಿ ವಿನೂತ್ನ ಜೀವಿಯ ಮೇಲೆ ಮಮತೆಯು ಮೊಳಕೆಯೊಡೆದು ಅದು ಪುಷ್ಪ ಪಲ್ಲವ ಫಲೋಪೇತವಾದ ಮಹಾವೃಕ್ಷವಾಗಿ ಬೆಳೆಯಿತು.
ಆ ಜಿಂಕೆಮರಿಯನ್ನು ಪ್ರಾಣರಕ್ಷಣೆ ಮಾಡಬೇಕೆಂಬ ಸಂಕಲ್ಪವು ಉದಯಿಸುತ್ತಲೇ ಭರತನು ಆ ಪರಿಸರಗಳಲ್ಲಿರುವ ತರುಲತೆಗಳನ್ನು, ಮೃದುಪತ್ರಗಳನ್ನು ಕಿತ್ತು ತಂದು ಮೆತ್ತನೆಯ ಹೊದಿಕೆಯನ್ನು ತಯಾರಿಸಿದನು. ನದೀ ತೀರದಲ್ಲಿ ಲಭಿಸಿದ ಜಿಂಕೆ ಮರಿಯನ್ನು ತನ್ನ ಕೈಗಳಿಂದ ಲಾಲನೆ ಮಾಡುತ್ತಾ ಅದನ್ನು ಆ ಹೊದಿಕೆಯ ಮೇಲೆ ಮಲಗಿಸಿದನು. ನಂತರ ಅದನ್ನು ಎತ್ತಿ ತನ್ನ ಹೃದಯಕ್ಕೆ ಅಪ್ಪಿಕೊಂಡು ತನ್ನ ಆಶ್ರಮಕ್ಕೆ ತೆಗೆದುಕೊಂಡು ಹೋದನು
ಜಿಂಕೆಮರಿಯೂ ಭರತನ ಲಾಲನೆಯಲ್ಲಿ ತುಂಬಾ ಪ್ರೀತಿ ಆಪ್ಯಾಯತೆಗಳೊಂದಿಗೆ ಬೆಳೆಯಿತು. ಸಾಲಿಗ್ರಾಮ ತೀರ್ಥದಲ್ಲಿನ ಸಾರವಾದ ಭೂಭಾಗದಲ್ಲಿ ಮೊಳಕೆಯೊಡೆದ ಬಾಲ ತೃಣಕಾಂಡಗಳನ್ನು ಮಧುರ ಭಕ್ಷಗಳನ್ನು ಕಿತ್ತು ತಂದು, ಆ ಮರಿಯ ಹಸಿವನ್ನು ನೀಗಿಸಲು ತಾನೇ ಕೈಯಿಂದ ನಿಧಾನವಾಗಿ ತಿನ್ನಿಸಿ ಸಂತೋಷಿಸುತ್ತಿದ್ದನು. ಈ ರೀತಿಯಾಗಿ ಆತನ ಪ್ರೀತಿಯ ಅಮೃತವನ್ನು ಸವಿದು ಆ ಜಿಂಕೆಮರಿಯು ವಿಧ ವಿಧಗಳಿಂದ ಆಟವಾಡುತ್ತಾ ಆತನ ಸಮ್ಮುಖದಲ್ಲಿ ಛಂಗ ಛಂಗನೆ ಕುಣಿದು ಕುಪ್ಪಳಿಸುತ್ತಾ ಮುದ್ದು ಮುದ್ದಾಗಿ ತನ್ನ ಬಾಲಕ್ರೀಡೆಗಳನ್ನು ಮಾಡಿ ತೋರಿಸುತ್ತಿತ್ತು. ಎಂದಾದರೂ ಅದು ಹೊಲಗಳಲ್ಲಿ ಹುಲ್ಲನ್ನು ಮೇಯುತ್ತಾ ಹೋಗಿ ಸಮಯಕ್ಕೆ ಸರಿಯಾಗಿ ಬರದೇ ಹೋದಲ್ಲಿ ಯಾವ ಕ್ರೂರ ಮೃಗವು ಅದನ್ನು ಸಾಯಿಸಿ ತಿಂದು ಬಿಟ್ಟಿದೆಯೋ ಎಂದು ಭಾವಿಸಿ ಭರತನು ತಡವರಿಸುತ್ತಿದ್ದನು. ಅಷ್ಟರಲ್ಲಿಯೇ ಅದು ತನ್ನ ಕಾಲುಗಳಿಂದ ಸ್ಪರ್ಶಿಸುತ್ತಾ, ನಾಲಿಗೆಯಿಂದ ಪಾದಗಳನ್ನು ಚೀಪುತ್ತಾ ತನ್ನ ಕಣ್ಣೆದುರು ಪ್ರತ್ಯಕ್ಷವಾಗುವಷ್ಟರಲ್ಲಿ ಅದಕ್ಕಾಗಿ ಕಾದು ಕಾದು ಸುಸ್ತಾದ ಆತನ ಕಣ್ಣುಗಳಲ್ಲಿ ಮತ್ತೆ ಜೀವ ಕಳೆಯು ತುಂಬಿಕೊಳ್ಳುತ್ತಿತ್ತು. ಆ ಮರಿಯು ಶುಕ್ಲಪಕ್ಷದ ಚಂದ್ರನಂತೆ ದಿನೇ ದಿನೇ ಅಭಿವೃದ್ಧಿಯನ್ನು ಹೊಂದುತ್ತಿದ್ದರೆ ಆತನಿಗೆ ಅದರೊಂದಿಗೇನೇ ಜೀವನವನ್ನು ರೂಪಿಸಿಕೊಂಡು ಅದಿಲ್ಲದೇ ಜೀವಿಸಲಾರದ ಸ್ಥಿತಿಗೆ ಅದರ ಮೇಲೆ ಪ್ರೀತಿ ಮಮತೆಗಳನ್ನು ಬೆಳೆಸಿಕೊಂಡನು. ಕಾಲ ಕಳೆಯುತ್ತಿದ್ದಂತೆ ಆ ಜಿಂಕೆಮರಿಯು ಬೆಳೆದು ದೊಡ್ಡದಾಯಿತು. ಫಲವತ್ತಾದ ಆ ಪ್ರದೇಶದಲ್ಲಿನ ಫಲಪಾಕಗಳಿಂದ ಚಿನ್ನದ ಬಣ್ಣಕ್ಕೆ ತಿರುಗಿ ತಳತಳನೆ ಹೊಳೆಯುತ್ತಿತ್ತು. ಎಳೆ ಕೊಂಬುಗಳು ಮೊಳಕೆಯೊಡೆದು ಅದರ ಮುಖದಲ್ಲಿ ವಿಚಿತ್ರ ಸೌಂದರ್ಯವು ಪ್ರವೇಶಿಸಿತು. ಅದು ಮೆತ್ತನೆಯ ಶೃಂಗಗಳಿಂದ ಸವರುತ್ತಾ ತುಂಟಾಟವಾಡುತ್ತಿದ್ದರೆ ಭರತನಿಗೆ ಪುಳಕಿತವಾಗುತ್ತಿತ್ತು. ಆತನು ಯೋಗಾಸನಕ್ಕೆ ಕುಳಿತು ಧ್ಯಾನಧಾರಣೆಗೆ ಉಪಕ್ರಮಿಸುವ ಸಮಯಕ್ಕೆ ಅದೂ ಸಹ ಬಂದು ತನ್ನ ಮಡಿಲಲ್ಲಿ ಮಲಗುತ್ತಿತ್ತು. ಅದರ ಲಾಲನೆ ಪಾಲನೆಯೆಲ್ಲಾ ತಾನೇ ಆಗಿರುವುದರಿಂದ ಅದಕ್ಕೆ ನಿದ್ರಾಭಂಗವಾಗದಂತೆ ಮೈಯನ್ನು ಸವರುತ್ತಾ ಶೈತ್ಯೋಪಚಾರಗಳನ್ನು ಮಾಡುತ್ತಾ ಯುಗಗಳು ಕ್ಷಣದಲ್ಲಿ ಉರುಳಿ ಹೋಗುತ್ತಿದ್ದವು.
ಒಮ್ಮೆ ಆ ಜಿಂಕೆಮರಿಯು ಇನ್ನೂ ಬೆಳಕು ಹರಿಯುವುದಕ್ಕೂ ಮೊದಲೇ ಹಸಿವಿನಿಂದ ಎದ್ದು ತೃಣಾಗ್ರಗಳನ್ನು ಮೇಯುತ್ತಾ ಮುಂದೆ ನಡೆದು ಹಾಗೆಯೇ ಅರಣ್ಯದೊಳಕ್ಕೆ ಹೊರಟು ಹೋಯಿತು. ನಂತರ ಅದು ದಾರಿತಪ್ಪಿ ಎಷ್ಟು ಹೊತ್ತಾದರೂ ಆಶ್ರಮಕ್ಕೆ ವಾಪಸ್ಸು ಬರಲಿಲ್ಲ.
ಭರತನು ಜಿಂಕೆಮರಿಯು ದಾರಿತಪ್ಪಿ ಹೋಗಿ ಸಾಯಂಕಾಲದವರೆಗೂ ವಾಪಸ್ಸು ಬರದೇಯಿದ್ದುದಕ್ಕೆ ಅಪಾರವಾದ ದುಖದಿಂದ ಶೋಕಸಮುದ್ರದಲ್ಲಿ ಮುಳುಗಿ ಕಣ್ಣೀರು ಸುರಿಸಿದನು. ಜಿಂಕೆಮರಿಯನ್ನು ಯಾವ ತೋಳವು ತಿಂದುಬಿಟ್ಟಿತೋ, ಯಾವ ಹುಲಿಯು ನುಂಗಿತೋ ಎಂದು ವಿಲವಿಲನೆ ಒದ್ದಾಡಿದನು. ಇಷ್ಟು ದಿನಗಳಿಂದಲೂ ತಾನೇ ತಂದೆತಾಯಿಯಾಗಿ ಅದನ್ನು ಬೆಳೆಸಿ ದೊಡ್ಡದು ಮಾಡಿದ ಜಿಂಕೆಮರಿಯು ಕಾಣಿಸಲಿಲ್ಲವೆಂದು ಮತ್ತಷ್ಟು ಕೊರಗಿ ಕೊರಗಿ ಕುಗ್ಗಿಹೋದನು. ಅವನಿಗೆ ಎಲ್ಲಿ ನೋಡಿದರೂ ಯಾವುದನ್ನೂ ಕಂಡರೂ ಆ ಜಿಂಕೆಮರಿಯ ರೂಪವೇ ಕಾಣಿಸತೊಡಗುತ್ತಿತ್ತು. ಕೊನೆಗೆ ತನ್ನ ಆಶ್ರಮದಲ್ಲಿ ಬೆಳೆದ ಎಳೆಹುಲ್ಲು ಸಹ ಆತನಿಗೆ ಸಾಮವೇದವನ್ನು ಸ್ವರಯುಕ್ತವಾಗಿ ಗಾನ ಮಾಡುತ್ತಿರುವ ಬಾಲವಟುವರಂತೆ ಅನಿಸಿ, ಈ ಆಶ್ರಮ ಪರಿಸರಗಳಲ್ಲಿಯೇ ಇಷ್ಟು ಸಮೃದ್ಧವಾದ ಹಸಿ ಹುಲ್ಲು ಲಭಿಸುತ್ತಿದ್ದರೆ ಎಲ್ಲಿಗೋ ಹೋಗಬೇಕಾದ ಅವಶ್ಯಕತೆ ಆ ಜಿಂಕೆ ಮರಿಗೆ ಏನಿದೆ? ನನ್ನನ್ನು ಬಿಟ್ಟು ಅದು ಒಂದು ಕ್ಷಣವಾದರೂ ಇರುವುದಿಲ್ಲವೇ? ಎಲ್ಲಿ ಯಾವ ಆಪತ್ತಿಗೆ ಸಿಕ್ಕಿಕೊಂಡಿದೆಯೋ ಎಂದು ನೋವನ್ನು ಅನುಭವಿಸಿದನು. ಅದು ಹೋದ ಕಡೆಗೇ ಹೋಗುತ್ತಾ ಅದರ ಹೆಜ್ಜೆಯ ಗುರುತುಗಳನ್ನಿಡಿದು ಅದರ ಸುಳಿವನ್ನು ಕಂಡುಹಿಡಿಯಬೇಕೆಂದು ವಿಫಲ ಪ್ರಯತ್ನ ಮಾಡಿದನು. ತನ್ನ ಹತ್ತಿರಕ್ಕೆ ಯಾವುದೇ ಪ್ರಾಣಿ ಬಂದರೂ, ಗಾಳಿಗೆ ಜೋರಾಗಿ ನೆಲದ ಮೇಲಿನ ಧೂಳು ಎದ್ದರೂ ತನ್ನ ಜಿಂಕೆಮರಿ ಬರುತ್ತಿದೆಯೇನೋ ಎಂದು ಕನವರಿಸುತ್ತಾ ತಹ ಒದ್ದಾಡುತ್ತಿದ್ದನು.
ಸ್ವಲ್ಪ ದಿನಗಳ ಬಳಿಕ ಆ ಜಿಂಕೆಮರಿಯೇ ತನ್ನ ದಾರಿಯನ್ನು ಕಂಡುಕೊಂಡು ಅರಣ್ಯದಿಂದ ಆಶ್ರಮಕ್ಕೆ ವಾಪಸ್ಸು ಬಂದು ಭರತನ ಬಳಿಯಲ್ಲಿ ನಿಂತಿತು. ಆ ರೀತಿಯಾಗಿ ಭರತನು ಮೋಹಪಾಶದಲ್ಲಿ ಸಿಕ್ಕಿಕೊಂಡನು. ಸಮಸ್ತ ಭೂಮಂಡಲವನ್ನು ಒಂದೇ ಸೂರಿನೆಡೆಗೆ ತಂದು ಧರ್ಮ ಮಾರ್ಗದಲ್ಲಿ ಪರಿಪಾಲಿಸಿದವನು ಪ್ರಾಪ್ತವಾದ ಇಷ್ಟ ಭೋಗಗಳನ್ನು ಸಂಪೂರ್ಣವಾಗಿ ಸಂಪ್ರಾಪ್ತಿಸಿದ ಮೇಲೆ ಸಂಸಾರ ಬಂಧನಗಳಿಂದ ವೈರಾಗ್ಯವುಂಟಾಗಿ ತುರೀಯಾಶ್ರಮವನ್ನು ಸ್ವೀಕರಿಸಿದ ಮಹಾತ್ಮನು. ಕೈವಲ್ಯಪದವನ್ನು ಆಕಾಂಕ್ಷಿಸಿ, ಅನಂತವಾದ ಭೋಗಭಾಗ್ಯಗಳನ್ನು, ಪತ್ನಿಪುತ್ರರನ್ನು, ಬಂಧುಮಿತ್ರರನ್ನು ಪರಿತ್ಯಜಿಸಿ, ಸಾಲಿಗ್ರಾಮ ತೀರ್ಥವನ್ನು ತಲುಪಿದ ಮುಕ್ತಿ ಪುರುಷನಾದ ಭರತನು ಕರ್ಮವಶಾತ್ ಮತ್ತೆ ಜಿಂಕೆಯ ರೂಪದಲ್ಲಿ ರಕ್ಷಿಪಥದೊಳಕ್ಕೆ ಹೆಜ್ಜೆ ಇಟ್ಟನು.ನೋಡನೋಡುತ್ತಲೇ ಕಾಲವು ಕಳೆದುಹೋಗಿ ಆತನಿಗೆ ವಾರ್ಧಕ್ಕವು ಸಂಪ್ರಾಪ್ತಿಸಿ ಮೃತ್ಯುವು ಪ್ರಾಪ್ತಿಯಾಯಿತು. ಭರತನು ಸಾಯುವಾಗ ಅತಿದಾರುಣವಾದ ನೋವನ್ನು ಅನುಭವಿಸಿದನು. ತಾನು ಸತ್ತ ಮೇಲೆ ತಾನೇ ಪೋಷಿಸಿ ಬೆಳೆಸಿದ ಜಿಂಕೆಯು ಏನಾಗುತ್ತದೆಯೋ ಎಂಬ ಭಯದಿಂದ ಅವನ ಮನಸ್ಸು ಚಂಚಲವಾಯಿತು. ಆ ಜಿಂಕೆಮರಿಯೂ ಸಹ ಆತನ ಅವಸ್ಥೆಯನ್ನು ಗುರ್ತಿಸಿ ದುಃಖದಿಂದ ಕಣ್ಣೀರು ಹಾಕಿತು. ತನ್ನ ಯಜಮಾನ ಪ್ರಾಣವಾತ, ಸರ್ವಸ್ವವೂ ಆಗಿದ್ದ ಆತನು ತನ್ನಿಂದ ದೂರವಾಗುತ್ತಿದ್ದಾನೆಂದು ಗ್ರಹಿಸಿ, ಅದು ತಂದೆಯ ಅಂತಿಮ ಸಮಯವನ್ನು ನೋಡುತ್ತಲೇ ನಿಸ್ಸಹಾಯನಾಗಿ ನಿಂತ
ಪುತ್ರನಂತೆ ಶೋಕಿಸಿತು. ಅದರ ಮುಖರೇಖೆಗಳಲ್ಲಿಯೇ ತನ್ನ ನೋಟವನ್ನು ಕೇಂದ್ರೀಕರಿಸಿ, ಅದರ ಕಣ್ಣುಗಳಲ್ಲಿಯೇ ತನ್ನ ಕಣ್ಣುಗಳನ್ನಿಟ್ಟು ಅದರ ಆಲೋಚನೆಗಳೊಂದಿಗೇ ಚಿಂತಾವ್ಯಾಕುಲಿತ ಚಿತ್ತನಾಗಿ ಪ್ರಾಣ ಬಿಡಲಾರದೆ, ಇಷ್ಟವಿಲ್ಲದೇ ಅದರ ಮೇಲಿನ ಮಮತೆಯನ್ನು ಸಾಯಿಸಿಕೊಳ್ಳಲಾರದೇ ಭರತನು ತನ್ನ ಪ್ರಾಣವನ್ನು ತ್ಯಜಿಸಿದನು.
ಈ ರೀತಿಯಾಗಿ ಮೃಗ ಶಾಬಕ ಸಂಗದೋಷದಿಂದ ಭರತನು ಉತ್ತರ ಜನ್ಮದಲ್ಲಿ ಕಾಲಂಜರ ಪರ್ವತಗಳ ಸಮೀಪದಲ್ಲಿನ ಜಂಬೂಮಾರ್ಗ ವನದಲ್ಲಿ ಜಿಂಕೆಯಾಗಿ ಹುಟ್ಟಿದನು. ಹರಿಣವಾಗಿ ಜನಿಸಿದರೂ ದೈವಕೃಪೆಯಿಂದ ಪೂರ್ವ ಜನ್ಮಗಳಲ್ಲಿನ ಉತ್ತಮ ಸಂಸ್ಕಾರಗಳು ಭರತನಿಗೆ ವಾಸನಾರೂಪದಲ್ಲಿ ಬಂದಿತು. ಆ ಪುಣ್ಯಫಲದಿಂದ ಆತನು ತನ್ನ ತಾಯಿಯನ್ನು ಬಿಟ್ಟು ಮತ್ತೆ ಸಾಲಿಗ್ರಾಮ ತೀರ್ಥಕ್ಕೆ ಬಂದು ತಲುಪಿದನು. ಅತ್ಯಂತವಾದ ಕರ್ಮಶಮನದ ಮೇಲೆಯೇ ದೃಷ್ಟಿಯನ್ನು ಸಾರಿಸಿ, ದೇಹಧಾರಣೆಯ ನಿಮಿತ್ತವಾಗಿ ಆ ಪರಿಸರಗಳಲ್ಲಿನ ಜೀರ್ಣತೃಣಗಳನ್ನು ಒಣಎಲೆಗಳನ್ನು ತಿಂದು ಸಂತೃಪ್ತಿ ಪಡುತ್ತಾ ಚಿತ್ತಶಾಂತಿಯೊಂದಿಗೆ ಜೀವನವನ್ನು ಕಳೆದನು. ತನ್ನ ಪೂರ್ವಜನ್ಮಾರ್ಜಿತವಾದ ಜ್ಞಾನಸಂಪತ್ತನ್ನೆಲ್ಲಾ ಸ್ವಯಂಪ್ರಕಾಶಮಾನವನ್ನಾಗಿ ಭಾವಿಸಿ, ಆತನು ಆ ಹರಿಣ ದೇಹದಲ್ಲಿ ಕರ್ಮ ಪರಿಭುಕ್ತವಾಗುವವರೆಗೂ ಜೀವದನು.
ಈ ರೀತಿಯಾಗಿ ಜೀವನದ ಶೇಷ ಕಾಲವನ್ನು ಕಳೆದು ಭರತನು ಆ ಜನ್ಮದಲ್ಲಿ ದೇಹಯಾತ್ರೆಯನ್ನು ನಿಲ್ಲಿಸಿ ನಂತರದ ಜನ್ಮದಲ್ಲಿ ಉತ್ತಮ ಬ್ರಾಹ್ಮಣ ವಂಶದಲ್ಲಿ ಜನಿಸಿದನು. ಪೂರ್ವಜನ್ಮಗಳ ಪುಣ್ಯಗಳೆಲ್ಲವೂ ಫಲಿಸಿ ಭರತನಿಗೆ ಆ ಜನ್ಮದಲ್ಲಿ ಅಪಾರವಾದ ಬ್ರಹ್ಮಜ್ಞಾನವು ಸಿದ್ಧಿಸಿತು. ಅವನು ಬಾಲ್ಯ ವಯಸ್ಸಿನಲ್ಲಿಯೇ ವೇದಶಾಸ್ತ್ರಗಳನ್ನು ಚೆನ್ನಾಗಿ ಅಭ್ಯಸಿಸಿ, ಕುಲಾಚಾರ ಸಂಪ್ರದಾಯಗಳನ್ನು ನೈಷ್ಟಿಕತೆಯಿಂದ ಆಚರಿಸಿ ಧರ್ಮ ಮಾರ್ಗದಲ್ಲಿ ನಡೆದು ಮೋಕ್ಷ ವಿದ್ಯೆಯನ್ನು ಕರತಲಾಮಲಕವನ್ನಾಗಿಸಿಕೊ೦ಡ ವಿಪೋತ್ತಮನಾಗಿ ವರ್ತಿಸುತ್ತಿದ್ದನು. ಉಪನಯನ ವಾಗುತ್ತಲೇ ಅವನಿಗೆ ಗುರುಮುಖೇನ ವೈದಿಕ ವಿದ್ಯೆಗಳನ್ನು ಕಲಿಸಬೇಕೆಂದು ತಂದೆತಾಯಿಯರು ತುಂಬಾ ಪ್ರಯತ್ನಿಸಿದರು. ಆದರೆ ಶಬ್ದ ಪ್ರಾಮಾಣ್ಯದಿಂದ ಅಧಿಗಮಿಸುವಂತಹ ತತ್ತ್ವಸಾರವನ್ನು ತನ್ನ ಹುಟ್ಟಿಗೂ ಮೊದಲೇ ತಿಳಿದುಕೊಂಡ ಭರತನು ನಿರುಪಯೋಗಕರವಾದ ಬೋಧನೆಗಳನ್ನು ತಿರಸ್ಕರಿಸಿದನು. ಕರ್ಮಪರರ ಆಜ್ಞಾನದೊಳಕ್ಕೆ ಪ್ರವೇಶಿಸುತ್ತಾರೆಂದು, ಅನಾತ್ಮ ಭಾವನೆಯು ತೊಲಗಿ ಹೋಗಿ ಆತ್ಮಜ್ಞಾನವನ್ನು ಸಿದ್ದಿಸುವುದೇ ಜೀವನದ ಪರಮಾರ್ಥವೆಂದು ಗುರ್ತಿಸಿದನು. ಕರ್ಮಾರಂಭದಿಂದ ತಾನು ಮತ್ತೆ ಮೋಹವರ್ತದಲ್ಲಿ ಸಿಲುಕುತ್ತೇನೆಂದು ಗ್ರಹಿಸಿ ನಿರ್ಮೋಹತ್ವವನ್ನು ತಾಳಿದನು. ಪೂರ್ವ ಜನ್ಮದಲ್ಲಿ ತಾನು ಮಾಡಿದ ತಪ್ಪುಗಳಿಂದ ಗುಣ ಪಾಠವನ್ನು ಕಲಿತ ಭರತನು ಆ ಜನ್ಮದಲ್ಲಿ ಮತ್ತೆ ಬಂಧನಗಳಿಗೆ ಒಳಗಾಗಲಿಲ್ಲ. ಅಭೀಷ್ಟ ವಸ್ತುಗಳ ಬಗ್ಗೆಯೇ ನಿರಂತರವೂ ಚಿಂತಿಸುತ್ತಾ ಇದ್ದುದರಿಂದ ಕಾಮವು ಉದ್ದೀಪನೆಯಾಗಿ ಶೋಕಮೋಹಗಳು
ಉಂಟಾಗುತ್ತಿವೆಯೆಂದು, ಆ ಜನ್ಮದಲ್ಲಿ ವಿಷಯಾಸಕ್ತಿಯನ್ನು ತ್ಯಜಿಸಿದನು. ಯೋಗ ಮಾರ್ಗದೊಳಕ್ಕೆ ಹೆಜ್ಜೆಯನ್ನಿಟ್ಟ ಸರ್ವಸಂಗ ಪರಿತ್ಯಾಗಿಗಳು ಪ್ರಚ್ಚನ್ನ ವೇಷದಲ್ಲಿಲ್ಲದೇ ಹೋದರೆ ಅವರ ತತ್ವ ಚಿಂತನೆಗೆ ಅಡ್ಡಿಯುಂಟಾಗುತ್ತದೆಂದು ಹಿರಿಯರು ಹೇಳಿದ ಉಪದೇಶವನ್ನು ಪಾಲಿಸಿ, ಒರಟನ ರೂಪವನ್ನು ತಾಳಿ ಮೂರ್ಖನಂತೆ ವರ್ತಿಸತೊಡಗಿದನು.
ಬಾಹಿರವಾದ ವೇಷ ಭಾಷೆಗಳ ಮೇಲೆ ಶ್ರದ್ಧಾಸಕ್ತಿಗಳು ಕ್ಷೀಣಿಸಿ ಸ್ನಾನಸಂಧ್ಯಗಳನ್ನೂ, ಪೂಜಾ ಪುರಸ್ಕಾರಗಳನ್ನು ತ್ಯಜಿಸಿದನು. ಹುಚ್ಚನಂತೆ ಬೀದಿ
ಬೀದಿಗಳನ್ನು ಸುತ್ತುತ್ತಾ ಮೈಯೆಲ್ಲಾ ಮಣ್ಣನ್ನು ಎರಚಿಕೊಂಡು ಮಲಿನ ದೇಹದೊಂದಿಗೆ ಕಾಣಿಸುತ್ತಿದ್ದನು. ಜೋರಾಗಿ ಕೇಕೆಗಳನ್ನು ಹಾಕುತ್ತಾ ಬಾಯಿಗೆ ಬಂದಂತೆ ಕಟುವಾದ
ಅಪಭ್ರಂಶ ಮಾತುಗಳನ್ನಾಡುತ್ತಿದ್ದರೆ ಜನರು ಅವನನ್ನು ಅಸಹ್ಯಿಸಿಕೊಂಡು ನೋಡುತ್ತಲೇ ದೂರ ಸರಿಯುತ್ತಿದ್ದರು. ಒಮ್ಮೊಮ್ಮೆ ತುಂಟ ಮಕ್ಕಳು ಓದುವುದನ್ನು ಬಿಟ್ಟು ತನ್ನ ಬಳಿಗೆ ಬಂದರೆ ಭರತನು ಅವರೊಂದಿಗೆ ಸೇರಿ ವಿಜೃಂಭಿಸಿ ಹುಡುಗಾಟವಾಡುತ್ತಿದ್ದನು.
ಪಾಂಡಿತ್ಯಗಳನ್ನು ಅಭ್ಯಸಿಸಿ ಅವುಗಳ ಸಾರವನ್ನು ಗ್ರಹಿಸಿದ ಪಾಂಡಿತ್ಯರು, ಮಹಾವಿದ್ವಾಂಸರು ಕಾಣಿಸಿದರೆ ಸಗೌರವದಿಂದ ಅವರಿಗೆ ನಮಸ್ಕರಿಸಿ ಸುಮ್ಮನಾಗದೇ ಅವರನ್ನು ತಡೆದು ನಿಲ್ಲಿಸಿ ಅವರೊಂದಿಗೆ ಅಪಹಾಸ್ಯವಾಡಿ ಅಗೌರವಪಡಿಸುತ್ತಿದ್ದನು.
ಪುರಜನರು ಕೋಪದಿಂದ ಅವನನ್ನು ಹೊಡೆದು ಪರಾಭವಗೊಳಿಸಿದರೆ ಅವನು ಇನ್ನೂ ಹೆಚ್ಚಾಗಿ ಹುಚ್ಚು ಹಿಡಿದವನಂತೆ, ಭೂತ; ಪ್ರೇತ ಪಿಶಾಚಿಗಳಿಗಿಂತಲೂ ವಿಕೃತವಾಗಿ ವರ್ತಿಸುತ್ತಿದ್ದನು. ಅವನಿಗೆ ಹಸಿವಾಗಿ ಊಟ, ತಿಂಡಿ ಸಿಗದೇ ಹೋದರೆ ಅರಣ್ಯದಲ್ಲಿ ಲಭಿಸುವ ಗೆಡ್ಡೆ ಗೆಣಸುಗಳನ್ನು ವನ್ಯಫಲಗಳನ್ನು ತಿಂದು ಹಸಿವು ತೀರಿಸಿಕೊಳ್ಳುತ್ತಿದ್ದನು. ಈ ರೀತಿಯಾಗಿ ಮನಸ್ಸನ್ಯಾಸಿಯಾಗಿ ನಿರ್ಲಿಪ್ತವಾಗಿ ಕಾಲ ಕಳೆಯುತ್ತಿದ್ದಂತಹ ಭರತನಿಗೆ
ತನ್ನ ತಂದೆಯು ತೀರಿಹೋದನು. ಅವನನ್ನು ಅಲ್ಲಿಯವರೆಗೂ ಕಣ್ಣಿನ ರೆಪ್ಪೆಯಂತೆ ಕಾಪಾಡಿಕೊಂಡು ಅವನ ಜೀವನಕ್ಕೆ ಆಧಾರವಾಗಿದ್ದ ಆ ಚರಮಬಂಧನವೂ ಸಹ ತೊಲಗಿ ಹೋಯಿತು. ಭರತನಿಗೆ ಬರಬರುತ್ತಾ ಕೆಲಸದ ಒತ್ತಡವು ಹೆಚ್ಚಾಯಿತು. ಅಣ್ಣ ತಮ್ಮಂದಿರು ಬಂಧುಬಳಗದವರು ಅವನಿಂದ ಹೊಲಗದ್ದೆಗಳಲ್ಲಿ ವೃಥಾ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದರು. ಅವನೂ ಸಹ ಫಲಾಪೇಕ್ಷೆಯಿಲ್ಲದಂತೆ ದೇಹಧಾರಣೆಗೆ ಊಟವೊಂದು ಕಳೆದರೆ ಸಾಕೆಂದು ಯದೃಚ್ಚಾ ಲಾಭದಿಂದ ಸಂತೃಪ್ತಿಯನ್ನು ಹೊಂದಿಯಾರೇ ಯಾವುದೇ ಕೆಲಸವನ್ನು ಹೇಳಿದರೂ ಅದನ್ನು ಮಾಡಿ ಮುಗಿಸುತ್ತಿದ್ದನು. ಯಾರಾದರೂ ತನಗೆ ದೇಯಭೃತ್ಯವನ್ನು ಕೊಡಲಿಲ್ಲವೆಂದು ಅವರೊಂದಿಗೆ ವಾದಕ್ಕಿಳಿಯದೇ ನಿಶ್ಚಿಂತೆಯಾಗಿರುತ್ತಿದ್ದನು.