ಮನೆ ಮನರಂಜನೆ “ಜಲಪಾತ’ ಸಿನಿಮಾ ವಿಮರ್ಶೆ

“ಜಲಪಾತ’ ಸಿನಿಮಾ ವಿಮರ್ಶೆ

0

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಜಲಪಾತ’ ಸಿನಿಮಾ ಈ ವಾರ ಬಿಡುಗಡೆಯಾಗಿ ತೆರೆಗೆ ಬಂದಿದೆ. ಅತ್ತ ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಆಗಿರದೇ, ಇತ್ತ ಸಂಪೂರ್ಣ ಕಲಾತ್ಮಕವಾಗಿಯೂ ಆಗಿದರೆ, ಎರಡನ್ನೂ ಸಮೀಕರಿಸಿ “ಜಲಪಾತ’ ಸಿನಿಮಾವನ್ನು ತೆರೆಮೇಲೆ ತಂದಿರುವುದು ನಿರ್ದೇಶಕ ರಮೇಶ್‌ ಬೇಗಾರ್‌ ಅವರ ಹೆಗ್ಗಳಿಕೆ.

ಸಂಬಂಧಗಳ ಮೌಲ್ಯ, ಪರಿಸರ ಕಾಳಜಿ, ಮಲೆನಾಡ ಬದುಕು ಇಂಥ ವಿಷಯಗಳ ಜೊತೆಗೆ ನವಿರಾದ ಪ್ರೇಮಕಥೆ, ತಿಳಿಹಾಸ್ಯ, ಒಂದೆರಡು ಮೆಲೋಡಿ ಹಾಡುಗಳು, ಅಲ್ಲಲ್ಲಿ ಸಸ್ಪೆನ್ಸ್‌ ಹೀಗೆ ಒಂದಷ್ಟು ಮನರಂಜನಾತ್ಮಕ ಅಂಶಗಳನ್ನು ಇಟ್ಟುಕೊಂಡು, ಹಸಿರ ಹಿನ್ನೆಲೆಯಲ್ಲಿ “ಜಲಪಾತ’ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ಮಲೆನಾಡಿನ ಸುಂದರ ಪರಿಸರದಲ್ಲಿ ತನ್ನದೇ ಆದ ಹತ್ತಾರು ವಿಶೇಷತೆಗಳನ್ನು ಹುದಿಗಿಸಿಟ್ಟುಕೊಂಡಿರುವ ಊರು ಜಲದುರ್ಗ. ಇಂಥ ಊರಿನಲ್ಲಿರುವ ಜನ-ಜೀವನ, ಸಂಬಂಧಗಳು, ಸಮಸ್ಯೆ-ಸವಾಲುಗಳ ಸುತ್ತ “ಜಲಪಾತ’ ಸಿನಿಮಾದ ಕಥೆ ನಿಧಾನವಾಗಿ ತೆರೆದುಕೊಳ್ಳುತ್ತದೆ. ಆಧುನಿಕತೆಯ ಭರಾಟೆ, ಬದುಕಿನ ಸಂದಿಗ್ಧತೆ, ಬದಲಾವಣೆಯ ಅನಿವಾರ್ಯತೆ ಎಲ್ಲದಕ್ಕೂ ಕನ್ನಡಿ ಹಿಡಿಯುವ ಪ್ರಯತ್ನ “ಜಲಪಾತ’ದಲ್ಲಿ ಆಗಿದೆ. ಆದರೆ ಸಿನಿಮಾದಲ್ಲಿ ಬರುವ ಕೆಲ ಸನ್ನಿವೇಶಗಳು, ಭಾಷಣದಂಥ ಸಂಭಾಷಣೆಗಳನ್ನು ಬದಿಗಿಟ್ಟಿದ್ದರೆ, ನೋಡುಗರಿಗೆ ಅಲ್ಲಲ್ಲಿ “ಜಲಪಾತ’ ಡಾಕ್ಯುಮೆಂಟರಿಯಂತೆ ಕಾಣುವುದನ್ನು ತಪ್ಪಿಸಬಹುದಿತ್ತು. ಚಿತ್ರಕಥೆ ಮತ್ತು ನಿರೂಪಣೆಗೆ ಕೊಂಚ ವೇಗ ಸಿಕ್ಕಿದ್ದರೆ, “ಜಲಪಾತ’ ಇನ್ನಷ್ಟು ಪರಿಣಾಮಕಾರಿಯಾಗಿ ಕಾಣುವ ಸಾಧ್ಯತೆಗಳಿದ್ದವು.

ಇಂಥ ಕೆಲ ಅಂಶಗಳನ್ನು ಹೊರತುಪಡಿಸಿ ಹೇಳುವುದಾದರೆ, “ಜಲಪಾತ’ ಒಂದು ಸದಾಶಯ ಮತ್ತು ಸದಭಿರುಚಿಯ ಒಳ್ಳೆಯ ಪ್ರಯತ್ನ ಎನ್ನಲು ಅಡ್ಡಿಯಿಲ್ಲ. ಸಿನಿಮಾದ ಛಾಯಾಗ್ರಹಣ, ಸಂಗೀತ, ಕಲಾವಿದರ ಅಭಿನಯದ ಎಲ್ಲವೂ “ಜಲಪಾತ’ದ ಸೊಬಗನ್ನು ಹೆಚ್ಚಿಸಿದೆ. ಕೆಲ ಹೊತ್ತು “ಜಲಪಾತ’ಕ್ಕೆ ಮುಖ ಮಾಡಿದರೆ ಮಲೆನಾಡಲ್ಲಿ ಒಮ್ಮೆ ತಿರುಗಾಡಿ ಬಂದಂಥ ಅನುಭವವಾಗುವುದಂತೂ ಖಚಿತ ಎನ್ನಬಹುದು.