ಮೈಸೂರು(Mysuru): ಮಹನೀಯರ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಬಾರದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶಿವಣ್ಣ(M.Shivanna) ತಿಳಿಸಿದರು.
ಡಾ.ಬಾಬೂ ಜಗಜೀವನ್ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ವಿಶೇಷ ಘಟಕ, ಮಹಾರಾಜ ಕಾಲೇಜು ವತಿಯಿಂದ ಡಾ.ಬಾಬೂ ಜಗಜೀವನ್ ಅವರ 115ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ‘ಪುಟವಿಟ್ಟ ಚಿನ್ನ ಬಾಬೂ ಜಗಜೀವನರಾಮ್: ಜೀವನ ವ್ಯಕ್ತಿತ್ವ-ಸಾಧನೆಗಳ ಯಶೋಗಾಥೆ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್(Dr.B.R.Ambedkar) ಹಾಗೂ ಡಾ.ಬಾಬೂ ಜಗಜೀವನ್ ರಾಮ್(Dr.Jag jeevan ram) ಎರಡು ಕಣ್ಣುಗಳಿದ್ದಂತೆ. ಮಹಾನ್ ನಾಯಕರು ಜಯಂತಿಗಳನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಬೇರೆ ಸಮಾಜದವರು ಇದರಲ್ಲಿ ಭಾಗವಹಿಸಬೇಕು. ಇವರ ತತ್ತ್ವವನ್ನು ಎಲ್ಲರೂ ಅನುಸರಿಸಬೇಕು. ಬಾಬೂ ಜಗಜೀವನ್ ರಾಮ್ ಅವರು ನಾಲ್ಕೈದು ಖಾತೆ ನಿಭಾಯಿಸಿ ಉಪಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಯುವಕರು ಅವರ ಆದರ್ಶ ಪಾಲಿಸಬೇಕೆಂದರು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಬಾಬೂಜಿ ಅವರು ತಮ್ಮ ಜೀವಿತಾವಧಿಯವರೆಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಇವರು ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿರುವುದು ಸಾಧನೆಗಳಿಂದ ತಿಳಿದುಬರುತ್ತದೆ. ಅಭಿವೃದ್ಧಿಗೆ ಪ್ರಮುಖ ಯೋಜನೆಗಳು, ಮೀಸಲಾತಿಗಳನ್ನು ಜಾರಿಗೊಳಿಸುವಲ್ಲಿ ಪ್ರಥಮರಾಗಿ ಕಂಡುಬಂದಿದ್ದಾರೆ. ಇವರ ಜೀವನ ಪುಟಗಳನ್ನು ನೋಡಿದಾಗ “ನುಡಿದಂತೆ ನಡೆ” ಎಂಬ ಸಿದ್ಧಾಂತವನ್ನು ಅಳವಡಿಸಿಕೊಂಡಿದ್ದು ತಿಳಿದುಬರುತ್ತದೆ. ಪ್ರಸ್ತುತ ಯುವಜನತೆಯು ಬಾಬೂಜಿಯವರನ್ನು ಮಾದರಿಯಾಗಿ ಅನುಸರಿಸುವ ಮೂಲಕ ದೇಶದ ಅಭಿವೃದ್ಧಿ ಹಾಗೂ ಶ್ರೇಯೋಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದರು.