ಮನೆ ಸುದ್ದಿ ಜಾಲ ಬರಹಗಾರ ಮನುಷ್ಯ, ಮನುಷ್ಯರ ನಡುವಿನ ಗೋಡೆ ಒಡೆಯಬೇಕು:ರಾಗೌ

ಬರಹಗಾರ ಮನುಷ್ಯ, ಮನುಷ್ಯರ ನಡುವಿನ ಗೋಡೆ ಒಡೆಯಬೇಕು:ರಾಗೌ

0

ಮೈಸೂರು(Mysuru):  ಮನುಷ್ಯ ಮನುಷ್ಯನ‌ ನಡುವೆ ಉಂಟಾಗಿರುವ ಗೋಡೆಗಳನ್ನು ಒಡೆಯಬೇಕಾದ ಕೆಲಸವನ್ನು ಬರಹಗಾರರ ಮಾಡಬೇಕೆಂದು ವಿದ್ವಾಂಸ ಪ್ರೊ.ರಾಮೇಗೌಡ (ರಾಗೌ)(Prof.Ramegowda) ತಿಳಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ವಾಚಸ್ಪತಿ ಪ್ರಕಾಶನದ ವತಿಯಿಂದ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ನಡೆದ ಪ್ರೊ.ಸಿ.ಪಿ.ಸಿದ್ಧಾಶ್ರಮ(Prof.Siddashrama) ಅವರ ನಾಲ್ಕು ಕೃತಿಗಳ ಬಿಡುಗಡೆ(Book Release) ಸಮಾರಂಭದಲ್ಲಿ ಮಾತನಾಡಿದರು.

ನುಡಿದಂತೆ ಬದುಕಬೇಕು. ಬರೆದಂತೆ ಜೀವಿಸಬೇಕು.ಬರವಣಿಗೆ ಬದುಕಾಗಬೇಕು ಎಂಬುದು ಪ್ರೊ.ಸಿ.ಪಿ.ಸಿದ್ಧಾಶ್ರಮ ಅವರ ನಿಲುವಾಗಿತ್ತು. ಸಾಹಿತ್ಯ ವಲಯವನ್ನು ವಿಸ್ತರಿಸಿಕೊಂಡೇ ವಿಮರ್ಶೆ ಕ್ಷಿತಿಜವನ್ನು ಅವರು ದಾಟಿದ್ದಾರೆ.‌  ತಮ್ಮ45 ವರ್ಷ ಸಾಹಿತ್ಯ ಕಾರ್ಯದಲ್ಲಿ 28 ಕೃತಿ‌ಗಳನ್ನು ಪ್ರಕಟಿಸಿದ್ದಾರೆ. ಸಿದ್ಧಾಶ್ರಮ ಅವರು ಇಚ್ಛಾಶಕ್ತಿಯಿಂದ ಮೇಲೆ ಬಂದರು. ಜೀವನವನ್ನು ಪ್ರೀತಿಯಿಂದ ಬದುಕು ರೂಪಿಸಿಕೊಂಡರು. ಕನ್ನಡದ ಪ್ರಮುಖ ಬರಹಗಾರರು, ಉತ್ತಮ ವಿದ್ವಾಂಸರು ಹಾಗೂ ಕವಿಯಾಗಿಯೂ ಇವರು ಚಿರಪರಿಚಯ ಆಗಿದ್ದಾರೆ ಎಂದರು.

ಸೃಜನಶೀಲ, ಸೃಜನಶೀಲಯೇತರ ಎರಡು ವಿಭಾಗದಲ್ಲಿಯೂ ಸಿದ್ಧಾಶ್ರಮ ಅವರು ಕೆಲಸ ಮಾಡಿದ್ದಾರೆ. ಜೀವನದ ಮೌಲ್ಯವನ್ನು ಸಾಹಿತ್ಯ ಮೌಲ್ಯವಾಗಿಸಿಕೊಂಡರು. ಸಾಮಾಜಿಕ, ವೈಚಾರಿಕ ಮನೋಭಾವ ಇವರ ಬರವಣಿಗೆಯಲ್ಲಿ ಕಂಡು ಬರುತ್ತದೆ. ಅರಿವು ಮತ್ತು ಎಚ್ಚರ ಬರವಣಿಗೆಯಲ್ಲಿ‌ ಮನೆ ಮಾಡಿದೆ. ನೇರನಡೆ, ರಾಜಿ ಮಾಡಿಕೊಳ್ಳದ ಧೋರಣೆ, ಸಾಮಾಜಿಕ ಬದ್ಧತೆ,  ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಇವರ ಬರವಣಿಗೆಯಲ್ಲಿ ಕಂಡು ಬರುವ ಪ್ರಮುಖ ಸಂಗತಿಯಾಗಿದೆ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್(Prof.G.Hemanthkumar) ‌ಮಾತನಾಡಿ, ನಾಡಿನ ಮುಖ್ಯ ಸಂಸ್ಕೃತಿ ಚಿಂತಕರಾದ ಸಿದ್ಧಾಶ್ರಮ ಅವರು ನೂರಾರು ವೈಚಾರಿಕ ಲೇಖನಗಳನ್ನು ಪ್ರಕಟಿಸಿ ಮೌಢ್ಯ, ಕಂದಾಚಾರ, ಅಸಮಾನತೆ, ಶೋಷಣೆಯನ್ನು ನಿವಾರಿಸಿ ಸಮಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿಸಿರುವುದು ಶ್ಲಾಘನೀಯ ಸಂಗತಿ. ಹಳೆಗನ್ನಡ, ನಡುಗನ್ನಡ ಸಾಹಿತ್ಯವನ್ನಲ್ಲದೆ ಆಧುನಿಕ ಕಾಲಘಟ್ಟದ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಸಾಹಿತ್ಯ ಪಂಥಗಳ ಎಲ್ಲ ಪ್ರಮುಖ ಸಾಹಿತಿಗಳ ಮುಖ್ಯ ಕೃತಿಗಳನ್ನು ಸಾಮಾಜಿಕ ಕಾಳಜ್ಯ ಮತ್ತು ಸಾಂಸ್ಕೃತಿಕ ಅರಿವಿನೊಂದಿಗೆ ಚಿಕಿತ್ಸೆಗೊಳಪಡಿಸಿದ್ದಾರೆ.

ಕೃತಿಯೊಳಗಿನಿಂದಲೇ – ಮಾನದಂಡಗಳನ್ನು ಶೋಧಿಸಿಕೊಳ್ಳುವುದರ ಮೂಲಕ ಕೃತಿಕಾರರನ್ನು‌ ಮತ್ತು ಕೃತಿಗಳನ್ನು ಬೆಲೆಕಟ್ಟುವ ಸ್ತುತ ಪ್ರಯತ್ನವನ್ನು ಶ್ರದ್ಧೆ ಮತ್ತು ಶುದ್ಧಾಂತಃಕರಣದಿಂದ ಮಾಡಿ ಓದುಗರ ಪ್ರಜ್ಞಾವಲಯವನ್ನು ಸಿದ್ಧಾಶ್ರಮ ಅವರು ವಿಸ್ತರಿಸಿದ್ದಾರೆ ಎಂದರು.

ಹಿಂದಿನ ಲೇಖನಮಹನೀಯರ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಾಗಬಾರದು:ಎಂ.ಶಿವಣ್ಣ ಅಭಿಮತ
ಮುಂದಿನ ಲೇಖನಚುನಾವಣಾ ಬಾಂಡ್: ಪ್ರಕರಣ ಆಲಿಸಲು ಸಮ್ಮತಿಸಿದ ಸಿಜೆಐ ಎನ್ ವಿ ರಮಣ