ಬೆಂಗಳೂರು: “ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಅಗತ್ಯತೆ ನಮಗಿಲ್ಲ, ಇದೆಲ್ಲಾ ಕಾಂಗ್ರೆಸ್ ನಾಯಕರ ಭ್ರಮೆ, ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡು ಈಗ ವಿಪಕ್ಷಗಳ ಮೇಲೆ ಆರೋಪ ಮಾಡುತ್ತಿದ್ದಾರೆ” ಎಂದು ಕೈ ನಾಯಕರ ಆರೋಪಗಳಿಗೆ ಜೆಡಿಎಸ್ ಶಾಸಕರು ತಿರುಗೇಟು ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, “ಸಿದ್ದರಾಮಯ್ಯ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಇಲ್ಲ ಎಂದು ಹೇಳುತ್ತಾರೆ. ಆದರೆ ಸದನದಲ್ಲಿ ಹಗರಣಗಳ ಆರೋಪಗಳ ಬಗ್ಗೆ ಚರ್ಚೆಗೆ ಬಾರದೆ ಕಲಾಪ ಮೊಟಕು ಮಾಡಿ ಹೋದರು. ಅಲ್ಲಿಂದ ಅನುಮಾನ ಹುಟ್ಟಿದೆ. ತಪ್ಪಿಲ್ಲ ಎಂದರೆ ರಾಜ್ಯದ ಜನರಿಗೆ ತಿಳಿಸಿ. ಮುಡಾ ವಿಚಾರದಲ್ಲಿ ಸಾಕಷ್ಟು ಅನುಮಾನ ಇದೆ. ಆದ್ದರಿಂದಲೇ ರಾಜ್ಯಪಾಲರು ಪ್ರಾಸಿಕ್ಯುಷನ್ಗೆ ಅನುಮತಿ ನೀಡಿದ್ದಾರೆ”.
“ಟೆಲಿಪೋನ್ ಕದ್ದಾಲಿಕೆ ಹಗರಣ ಆರೋಪ ಬಂದಾಗ ಅಂದು ಸಿಎಂ ಆಗಿದ್ದ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದ್ದರು. ಸರ್ಕಾರ ಅಸ್ಥಿರ ಮಾಡಲು ಯಾಕೆ ಹೋಗುತ್ತೇವೆ, ತಪ್ಪು ಮಾಡಿ ಸಿಕ್ಕಾಕಿಕೊಂಡಿದ್ದಾರೆ. ಸರ್ಕಾರದ ಹಣ ಬಳಸಿ ಐಷಾರಾಮಿ ವಾಹನ ಖರೀದಿ ಮಾಡಿದ್ದಾರೆ. ಇದನ್ನೆಲ್ಲ ನೋಡಿಯೂ ವಿಪಕ್ಷ ಸುಮ್ಮನೆ ಕೂರಬೇಕಾ?. ಬಂದಿರುವ ಆರೋಪಕ್ಕೆ ಸರಿಯಾದ ಉತ್ತರ ನೀಡಿ, ದಾಖಲೆಕೊಟ್ಟು ತಪ್ಪಿತಸ್ಥ ಅಲ್ಲ ಎಂದಾದರೆ ಮತ್ತೆ ಸಿಎಂ ಆಗಲಿ” ಎಂದು ಹೇಳಿದರು.
ಜೆಡಿಎಸ್ ಶಾಸಕ ಎ. ಮಂಜು ಮಾತನಾಡಿ, “ರಾಜ್ಯ ಸರ್ಕಾರವನ್ನು ಅಸ್ಥಿರ ಮಾಡುವಂತಹ ಪ್ರಶ್ನೆಯೇ ನಮಗೆ ಇಲ್ಲ, ಕುಮಾರಸ್ವಾಮಿ ಅವರಿಗೂ ಕೂಡ ಆ ರೀತಿ ಮಾಡುವ ಅಗತ್ಯವಿಲ್ಲ. ಎಲ್ಲಾ ಕಾಂಗ್ರೆಸ್ ನಾಯಕರ ಭ್ರಮೆ, ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧತೆ ಮಾಡಿಕೊಳ್ಳಬೇಕು. ಸಿಎಂ ಬೇರೆಯವರ ನೈತಿಕತೆ ಬಗ್ಗೆ ಮಾತನಾಡುತ್ತಾರೆ. ಈಗ ಅವರೇ ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕು. ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯುಷನ್ ಕೊಟ್ಟಾಗ ಯಾರ ಸರ್ಕಾರ ಇತ್ತು?. ಆಗ ಅನುಮತಿ ಕೊಟ್ಟಿರಲಿಲ್ವಾ?. ಯಡಿಯೂರಪ್ಪ ಅವರ ಚೆಕ್ ಪ್ರಕರಣದ ಹಾಗೆ ಇವರದ್ದು 14 ಸೈಟ್ ಗಳನ್ನು ಪಡೆದಿದ್ದು ಕಣ್ಮುಂದೆ ಇದೆ. 62 ಕೋಟಿಯನ್ನು ಇವರೇ ಕೇಳಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು?” ಎಂದು ಪ್ರಶ್ನಿಸಿದರು.
“ಪ್ರಾಸಿಕ್ಯುಷನ್ಗೆ ಅನುಮತಿ ಕೊಟ್ಟಾಗ ರಾಜೀನಾಮೆ ನೀಡಬೇಕು ಎಂದು ಕಾನೂನಿನಲ್ಲಿ ಇಲ್ಲ. ಆದರೆ ನೈತಿಕತೆಯಿಂದ ರಾಜೀನಾಮೆ ನೀಡಬೇಕು. ರಾಜೀನಾಮೆ ಕೊಡೊದೇ ಇಲ್ಲಾ ಅಂದರೆ ಕಾನೂನಿದೆ. ಕುಮಾರಸ್ವಾಮಿ ಸೇರಿದಂತೆ ಉಳಿದವರಿಗೆ ಪ್ರಾಸಿಕ್ಯುಷನ್ಗೆ ಅನುಮತಿ ಕೊಡಲು ಪ್ರಕರಣ ಸುಪ್ರೀಂ ಕೋರ್ಟ್ ಸ್ಟೇ ಇದೆ. ಇದನ್ನೆಲ್ಲ ಅಧಿಕಾರದಲ್ಲಿ ಇದ್ದವರು ನೋಡಿಕೊಳ್ಳಬೇಕು. ಸಿಎಂ ಮುಡಾದಲ್ಲಿ ಬದಲಾವಣೆ ಸೈಟ್ ತಗೊಂಡಿದ್ದಾರೆ. ಇದನ್ನು ಅವರೇ ಒಪ್ಪಿಕೊಂಡಿರುವಾಗ ಬೇರೆಯವರ ಬಗ್ಗೆ ಪ್ರಶ್ನೆ ಏಕೆ?. ಕುಮಾರಸ್ವಾಮಿ ಒತ್ತಡ ಹಾಕಿಸಿದ್ದಾರೆ ಎನ್ನುವುದು ಅವರ ಭ್ರಮೆ. ಜನ ಅಧಿಕಾರ ಕೊಟ್ಟಿದ್ದಾರೆ, ವಾಲ್ಮೀಕಿ ಹಗರಣ, ಮುಡಾ ಸೈಟ್ ಹಗರಣ ಮಾಡಿ ಎಂದು ಬಿಜೆಪಿ, ಕುಮಾರಸ್ವಾಮಿ ಹೇಳಿದ್ದಾರಾ?. ಸಿಎಂ ರಾಜೀನಾಮೆ ಕೊಡಲ್ಲ ಎಂದು ಹಠ ಹಿಡಿಯಬಾರದು. ನಿರ್ದೋಷಿ ಎಂದು ಪ್ರೂವ್ ಆದರೆ ಮತ್ತೆ ಸಿಎಂ ಆಗಲಿ ಸಿದ್ದರಾಮಯ್ಯ ನಾನೊಬ್ಬ ಲಾಯರ್ ಎನ್ನುತ್ತಾರೆ. ಈಗ ರಾಜೀನಾಮೆ ಕೊಟ್ಟು ಮಾದರಿಯಾಗಿ” ಎಂದರು.