ಡಿಕೆಶಿ ಹಾಗೂ ಎಲ್.ಆರ್.ಎಸ್. ಪ್ರತಿಕೃತಿಗೆ ಪೊರಕೆ ಸೇವೆ
ಮಂಡ್ಯ:ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಬೇಡ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ ಚ್ಯುತಿ ತರಲು ಮುಂದಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್.ಎಂ.ವಿ.ಪ್ರತಿಮೆ ಎದುರು ಪ್ರತಿಭಟನಾ ಧರಣಿ ನಡೆಸಿದ ಪಕ್ಷದ ಕಾರ್ಯಕರ್ತರು “ರಾಜಕೀಯ ಶಿಖಂಡಿ” ಹಾಗೂ ಸಿಡಿ ಮಾಸ್ಟರ್ ಬಿತ್ತಿ ಪತ್ರ ಪ್ರದರ್ಶಿಸಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್.ಆರ್.ಶಿವರಾಮೇಗೌಡ ಪ್ರತಿಕೃತಿಗೆ ಪೊರಕೆ ಸೇವೆ ಮಾಡಿದರು.
ಇದೇ ವೇಳೆ ಪೊಲೀಸರು ಡಿ.ಕೆ.ಶಿವಕುಮಾರ್ ಪ್ರತಿಕೃತಿಯನ್ನು ಒತ್ತೊಯ್ದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು,ತರುವಾಯ ಜೆಡಿಎಸ್ ಕಾರ್ಯಕರ್ತರು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪೆನ್ ಡ್ರೈವ್ ಹಂಚಿಕೆ ಮಾಡಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬಕ್ಕೆ ಕಳಂಕ ತರಲು ಕಾಂಗ್ರೆಸ್ ನಾಯಕರು ಷಡ್ಯಂತ್ರ ರೂಪಿಸಿದ್ದಾರೆ, ಪೆನ್ ಡ್ರೈವ್ ಹಿಂದಿನ ರಾಜಕೀಯ ದುರುದ್ದೇಶ ಬಯಲಾಗಿದೆ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್.ಆರ್. ಶಿವರಾಮೇಗೌಡ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರು ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿ ಅವರ ಕುಟುಂಬಕ್ಕೆ ಚ್ಯುತಿ ತರಲು ಮುಂದಾಗಿದ್ದು,ಬೀದಿ ಬೀದಿಯಲ್ಲಿ ಪೆನ್ ಡ್ರೈವ್ ಹಂಚಿಕೆ ಮಾಡುವ ಮೂಲಕ ಮಹಿಳೆಯರ ಮಾನಹಾನಿ ಮಾಡಲಾಗಿದೆ, ಪೆನ್ ಡ್ರೈವ್ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ,ಇದರ ಸತ್ಯಾಸತ್ಯತೆ ಹೊರ ಬರಬೇಕಾಗಿದೆ,ರಾಜ್ಯದ ಕಾಂಗ್ರೆಸ್ ಸರ್ಕಾರ ವಿಶೇಷ ತನಿಖಾ ತಂಡದ ಮೇಲೆ ಪ್ರಭಾವ ಬೀರುತ್ತಿರುವುದು ಬೆಳಕಿಗೆ ಬರುತ್ತಿದೆ, ಎಸ್ಐಟಿ ತನಿಖೆ ಕೈ ಬಿಟ್ಟು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪ್ರಜ್ವಲ್ ರೇವಣ್ಣ ವಿರುದ್ಧ ಪೆನ್ ಡ್ರೈವ್ ಹಂಚಿಕೆ ಮಾಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಕಳಂಕ ತರಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.ಪೆನ್ ಡ್ರೈವ್ ಹಿಂದಿನ ರಾಜಕೀಯ ದುರುದ್ದೇಶ ಬಯಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಎಲ್. ಆರ್. ಶಿವರಾಮೇಗೌಡ ಸೇರಿದಂತೆ ಕಾಂಗ್ರೆಸ್ ನ ಹಲವು ನಾಯಕರು ಈ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಹೇಳಿದರು.
ಬೀದಿ ಬೀದಿಯಲ್ಲಿ ಪೆನ್ ಡ್ರೈವ್ ಹಂಚಿಕೆ ಮಾಡುವ ಮೂಲಕ ಮಹಿಳೆಯರ ಮಾನ ಹಾನಿ ಮಾಡಲಾಗಿದೆ. ಪೆನ್ ಡ್ರೈವ್ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ.ಇದರ ಸತ್ಯಾಸತ್ಯತೆ ಹೊರ ಬರಲು ರಾಜ್ಯದ ಕಾಂಗ್ರೆಸ್ ಸರ್ಕಾರ ವಿಶೇಷ ತನಿಖಾ ತಂಡದ ಮೇಲೆ ಪ್ರಭಾವ ಬೀರುತ್ತಿರುವುದು ಬೆಳಕಿಗೆ ಬರುತ್ತಿದೆ.ಈ ಹಿನ್ನಲೆಯಲ್ಲಿ ಎಸ್‌ಐಟಿ ತನಿಖೆ ಕೈ ಬಿಟ್ಟು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.
ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ,ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ.ಆದರೆ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿರುವ ಮಹಿಳೆಯರ ಮಾನ, ಪ್ರಾಣ ಕಾಪಾಡಬೇಕಿತ್ತು.ಆದರೆ ಸರ್ಕಾರ ಒಂದು ಚುನಾವಣೆ ಗೆಲ್ಲಲು ಸಾವಿರಾರು ಹೆಣ್ಣುಮಕ್ಕಳ ಮಾನವನ್ನು ಬೀದಿಗೆ ತಂದಿದೆ.ಇದು ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ಎಂದು ಕಿಡಿ ಕಾರಿದರು.
ರಾಹುಲ್ ಗಾಂಧಿಯವರು ಪ್ರಧಾನಿ ಅಭ್ಯರ್ಥಿ. ಅವರು ಪ್ರಜ್ವಲ್ ರೇವಣ್ಣ 400 ಅತ್ಯಾಚಾರ ಮಾಡಿದ್ದಾರೆ ಎಂದು ಹೇಳುವ ಮೂಲಕ ಎಸ್‌ಐಟಿ ತನಿಖೆ ನಡೆಯುವ ಹಂತದಲ್ಲೇ ಮಾತನಾಡಿದ್ದಾರೆ. ಇವರಿಗೆ ತನಿಖೆ ನಡೆಯುವ ಮುನ್ನವೇ ಈ ರೀತಿ ಮಾತನಾಡಲು ಅಧಿಕಾರ ಕೊಟ್ಟವರಾರು. ಪ್ರಧಾನಿ ಮೋದಿಯವರಿಗೆ ಮುಜುಗರ ಉಂಟು ಮಾಡಲು ಕಾಂಗ್ರೆಸ್ ಈ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ. ಇದು ನಾಚಿಕೆಗೇಡಿನ ಸಂಗತಿ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಟಿ. ಮಂಜು,ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ,ಕೆ.ಸುರೇಶ ಗೌಡ,ಕೆ.ಟಿ.ಶ್ರೀಕಂಠೇಗೌಡ,ಜೆಡಿಎಸ್ ಮುಖಂಡರಾದ ಬಿ.ಆರ್. ರಾಮಚಂದ್ರು,ಅಮರಾವತಿ ಚಂದ್ರಶೇಖರ್,ಪಕ್ಷದ ಜಿಲ್ಲಾಧ್ಯಕ್ಷ ಡಿ. ರಮೇಶ್, ಮನ್ ಮುಲ್ ಉಪಾಧ್ಯಕ್ಷ ರಘುನಂದನ್,ನಿರ್ದೇಶಕರಾದ ನೆಲ್ಲಿಗೆರೆ ಬಾಲು,ಕೋಟಿ ರವಿ,ಡಾಲು ರವಿ,ತಾಪಂ ಮಾಜಿ ಸದಸ್ಯ ಬಸರಾಳು ತಿಮ್ಮೇಗೌಡ, ಪುಟ್ಟಸ್ವಾಮಿ,ಸಾತನೂರು ಜಯರಾಮು ಸೇರಿದಂತೆ ಇತರರು ಭಾಗವಹಿಸಿದರು.