ಮನೆ ಅಪರಾಧ ಬಿಹಾರದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಉದ್ಯೋಗಾಂಕ್ಷಿಗಳು

ಬಿಹಾರದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಉದ್ಯೋಗಾಂಕ್ಷಿಗಳು

0

ಬಿಹಾರ: ಬಿಹಾರದಲ್ಲಿ ರೈಲ್ವೆ ನೇಮಕಾತಿ ಮಂಡಳಿಯ ನಾನ್‌ ಟೆಕ್ನಿಕಲ್‌ ಪಾಪ್ಯುಲರ್‌ ಕ್ಯಾಟಗರೀಸ್‌ ಪರೀಕ್ಷೆ ವಿಧಾನದ ವಿರುದ್ಧ ಉದ್ಯೋಗಾಂಕ್ಷಿಗಳು ಬಿಹಾರದಲ್ಲಿ ತಿರುಗಿಬಿದ್ದಿದ್ದು, ರೈಲಿಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಬುಧವಾರ ಪ್ರತಿಭಟನಾಕಾರರ ಗುಂಪು ಗಯಾ ಜಂಕ್ಷನ್​ನಲ್ಲಿ  ನಿಂತಿದ್ದ ಪ್ಯಾಸೆಂಜರ್ ರೈಲಿಗೆ ಬೆಂಕಿ ಹಚ್ಚಿದೆ. ಅದೃಷ್ಟವಶಾತ್​ ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಯಾಗಿಸಿದ್ದಾರೆ. ಜೊತೆಗೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರತಿಭಟನಾನಿರತ ಅಭ್ಯರ್ಥಿಗಳ ‘ದಮನಕಾರಿ‘ ನೀತಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಶಾಂತಿ ಕಾಪಾಡುವಂತೆ ಪ್ರತಿಭಟನಾಕಾರರಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಸರ್ಕಾರವು ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಬೇಕೆಂದು ಸಲಹೆ ನೀಡಿದ್ದಾರೆ. ಬಂಧಿತ ಅಭ್ಯರ್ಥಿಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ರೈಲು ಸಂಚಾರದಲ್ಲಿ ಅಸ್ತವ್ಯಸ್ತ

ಮಂಗಳವಾರ, ಬಿಹಾರದ ಪಾಟ್ನಾ, ನವಾಡ, ಮುಜಾಫರ್‌ಪುರ, ಬಕ್ಸರ್ ಮತ್ತು ಭೋಜ್‌ಪುರ ಜಿಲ್ಲೆಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಪ್ರತಿಭಟನಾಕಾರರು ರೈಲು ಹಳಿಗಳ ಮೇಲೆ ಕುಳಿತು ರೈಲು ಸಂಚಾರಕ್ಕೆ ಅಡ್ಡಿಪಡಿಸಿದರು. ಪರಿಣಾಮವಾಗಿ ಹಲವು ರೈಲುಗಳ ಸಂಚಾರ ರದ್ದುಗೊಂಡಿತು, ಬಹುತೇಕ ರೈಲುಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು.

ಸಾರ್ವಜನಿಕ ಆಸ್ತಿ ಹಾನಿಯಾದರೆ ಕಾನೂನು ಕ್ರಮ

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರು, ಉದ್ಯೋಗಾಕಾಂಕ್ಷಿಗಳಿಗೆ ಸಾರ್ವಜನಿಕ ಆಸ್ತಿಯನ್ನು ನಾಶ ಮಾಡದಂತೆ ಒತ್ತಾಯಿಸಿದರು ಮತ್ತು ಅವರ ಕುಂದುಕೊರತೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ರೈಲ್ವೆ ಇಲಾಖೆಯು ಸಂಬಂಧಪಟ್ಟ ಮುಖ್ಯಮಂತ್ರಿಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಮಸ್ಯೆಯನ್ನು “ಸೂಕ್ಷ್ಮವಾಗಿ” ನಿರ್ವಹಿಸಲಾಗುತ್ತಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು. ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.

ಎನ್‌ಟಿಪಿಸಿ ಪರೀಕ್ಷೆಗಳನ್ನು ಒಂದೇ ಹಂತದಲ್ಲಿ ನಡೆಸುವುದಾಗಿ ರೈಲ್ವೆ ಇಲಾಖೆಯ 2019ರ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಇತ್ತೀಚೆಗೆ ರೈಲ್ವೆ ನೇಮಕಾತಿ ಮಂಡಳಿ ಎರಡು ಹಂತಗಳಲ್ಲಿ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದೆ. ಅಂತಿಮ ಆಯ್ಕೆಗಾಗಿ 2ನೇ ಹಂತದ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (ಸಿಬಿಟಿ)ಯನ್ನು ಎದುರಿಸಬೇಕಿದ್ದು, ಇದು ಆರ್‌ಆರ್‌ಬಿ-ಎನ್‌ಟಿಪಿಸಿಯು (RRB NTPC ) ಮೊದಲ ಹಂತದಲ್ಲಿ ಉತ್ತೀರ್ಣರಾದವರಿಗೆ ಎಸಗಿರುವ ವಂಚನೆ ಎಂದು ಆರೋಪಿಸಿದ್ದಾರೆ. ಲೆವೆಲ್‌ 2-ಲೆವೆಲ್‌ 6ರವರೆಗಿನ ಒಟ್ಟು 35000 ಹುದ್ದೆಗಳಿಗೆ ಒಟ್ಟು 1.25 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.