ಮನೆ ರಾಜ್ಯ ಅದ್ಧೂರಿ ದಸರಾ ಆಚರಣೆಗೆ ಪ್ರಾಯೋಜಕತ್ವ ವಹಿಸುವ ಮೂಲಕ ಕೈಜೋಡಿಸಿ: ಡಿಸಿ ಡಾ.ಬಗಾದಿ ಗೌತಮ್

ಅದ್ಧೂರಿ ದಸರಾ ಆಚರಣೆಗೆ ಪ್ರಾಯೋಜಕತ್ವ ವಹಿಸುವ ಮೂಲಕ ಕೈಜೋಡಿಸಿ: ಡಿಸಿ ಡಾ.ಬಗಾದಿ ಗೌತಮ್

0

ಮೈಸೂರು(Mysuru): ನಾಡಹಬ್ಬ ದಸರಾವನ್ನು ಸಾಂಪ್ರಾದಾಯಿಕವಾಗಿ ಹಾಗೂ ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸುವ ಮೂಲಕ ನಾಡ ಹಬ್ಬ ದಸರಾದಲ್ಲಿ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.
ನಗರದ ಜಿಲ್ಲಾ ಪಂಚಾಯತಿಯ ಆವರಣದಲ್ಲಿರುವ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನವರಾತ್ರಿಯ ದಿನಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸಲು ಆಸಕ್ತಿ ಇರುವ ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಬ್ಯಾಂಕ್‌ಗಳು ಹಾಗೂ ಪ್ರಾಯೋಜಕತ್ವ ವಹಿಸಲು ಆಸಕ್ತಿ ಇರುವ ಇತರೆ ಸಂಸ್ಥೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೋವಿಡ್ ನಿಯಂತ್ರಣದಲ್ಲಿರುವುದರಿಂದ ಎಲ್ಲಾ ಚಟುವಟಿಕೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೀಗಾಗಿ ಈ ಬಾರಿಯ ದಸರಾದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಸೆ.10ರ ಒಳಗೆ ಆಸಕ್ತಿ ತಿಳಿಸಬೇಕು. ನಂತರ ಅಂತಿಮಗೊಳಿಸಲಾಗುವುದು ಎಂದು ಬಗಾದಿ ತಿಳಿಸಿದರು.

ಪ್ರಾಯೋಜಕರಿಗೆ ಪಾಸ್‌ ವಿವರ

ಪಂಜಿನ ಕವಾಯತು ಮತ್ತು ಜಂಬೂಸವಾರಿ ಪಾಸ್₹ 2 ಲಕ್ಷ; ತಲಾ 2 ಪಾಸ್₹ 2ಲಕ್ಷದಿಂದ ₹ 5 ಲಕ್ಷ; ತಲಾ 5 ಪಾಸ್₹ 5ಲಕ್ಷದಿಂದ ₹ 10 ಲಕ್ಷ; ತಲಾ 10 ಪಾಸ್₹ 10ಲಕ್ಷಕ್ಕೂ ಹೆಚ್ಚು; ತಲಾ 20 ಪಾಸ್

ಎರಡು ಕಡೆ ಆಹಾರ ಮೇಳ: ಆಹಾರ ಮೇಳವನ್ನು ಈ ಬಾರಿ ಲಲಿತಮಹಲ್ ಪ್ಯಾಲೇಸ್ ಆವರಣ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆಸಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲೂ ಆರೋಗ್ಯ ಮೇಳ ಇರಲಿದೆ. ಅದರ ಪ್ರಾಯೋಜಕತ್ವವನ್ನೂ ಪಡೆಯಬಹುದು. ಕೈಗಾರಿಕಾ ದಸರಾದಲ್ಲೂ ಅವಕಾಶವಿದೆ. 21 ಕಿ.ಮೀ., 10 ಕಿ.ಮೀ. ಹಾಗೂ 5 ಕಿ.ಮೀ. ಓಟದ ಸ್ಪರ್ಧೆ ಇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು 8 ವೇದಿಕೆಗಳಲ್ಲಿ ನಡೆಯಲಿವೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಆರ್.ಚೇತನ್ ಮಾತನಾಡಿ, ಈ ಬಾರಿಯ ದಸರಾದಲ್ಲಿ ನಡೆಯುವ ಯುವ ದಸರಾ ಹಾಗೂ ಯುವ ಸಂಭ್ರಮದ ಕಾರ್ಯಕ್ರಮದಲ್ಲಿ ಬಾಲಿವುಡ್ ನೈಟ್ ಹಾಗೂ ಸ್ಯಾಂಡಲ್ ವುಡ್ ನೈಟ್ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮದ ಅಂಗವಾಗಿ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಸಂಗೀತಗಾರರನ್ನು ಅಥವಾ ನಟರನ್ನು ಕರೆಸಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ದಸರಾ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳು ನಡೆದರೆ ಅಂತಹ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ಮಾಡಿದರೆ ಅಧಿಕೃತವಾಗಿ ಪ್ರಾಯೋಜಕರು ಎಂದು ಗುರುತಿಸಲಾಗುತ್ತದೆ. ದಸರಾ ಸಂಬಂಧ 16 ಉಪಸಮಿತಿಗಳನ್ನು ರಚಿಸಲಾಗಿದ್ದು, ಈ ಉಪಸಮಿತಿಗಳ ವ್ಯಾಪ್ತಿಯಲ್ಲಿ ಪ್ರತಿದಿನ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಸಭೆಯಲ್ಲಿಯೇ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದಂತೆ ಡಿಆರ್‌ಸಿ ಚಿತ್ರಮಂದಿರದಲ್ಲಿ ಒಂದು ಪರದೆಯನ್ನು ಉಚಿತವಾಗಿ ನೀಡಲು ಚಿತ್ರಮಂದಿರದ ಮಾಲೀಕರು ತಿಳಿಸಿದರು. ಜೊತೆಗೆ ಪ್ರಮುಖ ಜನಪ್ರಿಯ ಕಂಪನಿಗಳಾದ ಕೋಕೋಕೋಲಾ, ಇಸ್ಕಾನ್, ಮುತ್ತೂಟ್ ಫೈನಾನ್ಸ್, ಎಸ್.ಬಿ.ಐ ಸೇರಿದಂತೆ ಅನೇಕ ಕಂಪನಿಗಳು ಪ್ರಾಯೋಜಕತ್ವ ವಹಿಸಲು ಮುಂದಾದವು.
ಈ ಬಾರಿಯ ದಸರಾದಲ್ಲಿ ಯುವ ಸಂಭ್ರಮ, ಯುವ ದಸರಾ, ರೈತ ದಸರಾ, ಕ್ರೀಡಾ ದಸರಾ ಸೇರಿದಂತೆ ಹಲವಾರು ಕಾರ್ಯಕ್ರಮ ಜರುಗಲಿದ್ದು, ಪ್ರಾಯೋಜಕತ್ವ ನೀಡುವವರು ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಅಥವಾ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿ ಡಿ.ಡಿ ಅಥವಾ ಚೆಕ್ ಗಳನ್ನು ನೀಡಿ ಸ್ವೀಕೃತಿ ಪಡೆದುಕೊಳ್ಳಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಇ-ಮೇಲ್ ವಿಳಾಸ  adcmysuru@gmail.com    & dcmysuru@gmail.com    ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಸಿಇಒ ಪೂರ್ಣಿಮಾ, ಡಿಸಿಪಿ ಗೀತಾ ಪ್ರಸನ್ನ, ಸೇರಿದಂತೆ ಅಧಿಕಾರಿಗಳು ಹಾಗೂ ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಜರಿದ್ದರು.