ಮುಜುಗರ ತಪ್ಪಿಸಿಕೊಳ್ಲಲು ಇಲ್ಲವೇ ವೃತ್ತಿ ಜೀವನದ ಭವಿಷ್ಯ ಕಾಪಾಡಿಕೊಳ್ಳಲು ಕೆಲವೊಮ್ಮೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಮುಗ್ಧ ವ್ಯಕ್ತಿಗಳನ್ನು ಅಪರಾಧಿಯನ್ನಾಗಿಸುತ್ತಿದ್ದು ಹೀಗೆ ಸುಳ್ಳೇ ವಿಚಾರಣೆಗೆ ಒಳಗಾದವರಿಗೆ ಪರಿಹಾರ ನೀಡಲು ಕಾನೂನು ಜಾರಿಗೆ ತರುವಂತೆ ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
2009ರಲ್ಲಿ ತನ್ನ ಪತ್ನಿ ಹತ್ಯೆಗೈದ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬನನ್ನು ಖುಲಾಸೆಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮತ್ತು ಸೈಯದ್ ಕಮರ್ ಹಸನ್ ರಿಜ್ವಿ ಅವರು ಈ ವಿಚಾರ ತಿಳಿಸಿದ್ದಾರೆ.
ಸುಮಾರು 13 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದ ವ್ಯಕ್ತಿಗೆ ಭಾರೀ ಪರಿಹಾರ ನೀಡಬೇಕಿದೆಯಾದರೂ ಅಂತಹ ಪರಹಾರ ನೀಡುವುದಕ್ಕೆ ಅಗತ್ಯವಾದ ಕಾನೂನು ಜಾರಿಯಲ್ಲಿಲ್ಲ ಎಂದು ನ್ಯಾಯಾಲಯ ಹೇಳಿತು.
ಉನ್ನತ ನ್ಯಾಯಾಲಯಗಳ ಭಯದಿಂದಾಗಿ ವಿಚಾರಣಾ ನ್ಯಾಯಾಲಯಗಳು ಘೋರ ಅಪರಾಧ ಪ್ರಕರಣಗಳಲ್ಲಿ ದೋಷಮುಕ್ತರಾಗುವ ಸ್ಪಷ್ಟ ಅವಕಾಶಗಳಿದ್ದರೂ ಆರೋಪಿಗಳಿಗೆ ಶಿಕ್ಷೆ ವಿಧಿಸುತ್ತಿರುವ ಹಿನ್ನೆಲೆಯಲ್ಲಿ (ಪರಿಹಾರ ಹಕ್ಕುಗಳಿಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸುವುದು ಸೇರಿದಂತೆ, ತಪ್ಪಾದ ಕಾನೂನು ಕ್ರಮಕ್ಕೆ ಪರಿಹಾರ ನೀಡಲು ಕಾನೂನು ಜಾರಿಗೆ ಆಗ್ರಹಿಸುವ) ಕಾನೂನು ಆಯೋಗದ 277ನೇ ವರದಿಯನ್ನು ಸರ್ಕಾರ ಅಂಗೀಕರಿಸಬೇಕು. ಅಂತಹ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಉನ್ನತ ನ್ಯಾಯಾಲಯಗಳ ಕ್ರೋಧಕ್ಕೆ ಹೆದರಿ ತಮ್ಮ ವೈಯಕ್ತಿಕ ಪ್ರಖ್ಯಾತಿ ಮತ್ತು ವೃತ್ತಿ ಭವಿಷ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಅಂತಹ ತೀರ್ಪು ಮತ್ತು ಶಿಕ್ಷೆಯ ಆದೇಶ ರವಾನಿಸುತ್ತಾರೆ ”ಎಂದು ನ್ಯಾಯಾಲಯ ಹೇಳಿತು.
ಸರ್ಕಾರ ಕಾರ್ಯನಿರ್ವಹಿಸಲು ವಿಫಲವಾದ ಕಾರಣ, ತಪ್ಪಾಗಿ ವಿಚಾರಣೆಗೆ ಒಳಗಾದ ವ್ಯಕ್ತಿಗಳಿಗೆ ಸಂವಿಧಾನದ 14 (ಸಮಾನತೆಯ ಹಕ್ಕು) ಮತ್ತು 21ನೇ (ಜೀವನ ಮತ್ತು ಸ್ವಾತಂತ್ರ್ಯ) ವಿಧಿಯಡಿ ಒದಗಿಸಲಾದ ಹಕ್ಕುಗಳ ಉಲ್ಲಂಘನೆ ಅವ್ಯಾಹತವಾಗಿ ಮುಂದುವರೆಯುತ್ತದೆ ಎಂದು ನ್ಯಾಯಾಲಯ ಅಕ್ಟೋಬರ್ 25ರ ತೀರ್ಪಿನಲ್ಲಿ ಹೇಳಿದೆ.
“ಹೆಚ್ಚು ಪ್ರಚಾರದಲ್ಲಿರುವ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ- 2023ರಲ್ಲಿ ಕೂಡ ಇಂತಹ ನತದೃಷ್ಟರಿಗೆ ಸಂವಿಧಾನದ 14 ಮತ್ತು 2 ನೇ ವಿಧಿಗಳಿಗೆ ಅನುಗುಣವಾಗಿ ಯಾವುದೇ ಪರಿಹಾರ ಇಲ್ಲ ” ಎಂದು ಅದು ಹೇಳಿದೆ.
ತಪ್ಪಾಗಿ ಶಿಕ್ಷೆಗೊಳಗಾದ ವ್ಯಕ್ತಿಗಳು ಅಂತಿಮವಾಗಿ ಖುಲಾಸೆಗೊಂಡರೂ ಸಹ, ಅವರು ಸಮಾಜಕ್ಕೆ ಮತ್ತು ತಮ್ಮ ಕುಟುಂಬಗಳಿಗೆ ಮರಳುವುದು ಕಷ್ಟವಾಗುತ್ತದೆ. ಹಾಗಾಗಿ ಸರಿಪಡಿಸುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಪೀಠ ಹೇಳಿತು.
ತನ್ನ ಪತ್ನಿಯನ್ನು ಕೊಂದ ಆರೋಪಕ್ಕೆ ಸಂಬಂಧಿಸಿದಂತೆ 2010ರಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ತಪ್ಪಿತಸ್ಥ ಎಂದಿತ್ತು. ಇದನ್ನು ಪ್ರಶ್ನಿಸಿ ಆತ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವರದಕ್ಷಿಣೆ ಬೇಡಿಕೆ ಇಟ್ಟ, ಹೆಂಡತಿ ಮೇಲೆ ಕ್ರೌರ್ಯ ಎಸಗಿದ ಹಾಗೂ ಇನ್ನಷ್ಟೇ ಹುಟ್ಟಬೇಕಾದ ಮಗುವಿನ ಸಾವಿಗೆ ಕಾರಣವಾದ ಆರೋಪವನ್ನು ವ್ಯಕ್ತಿ ಮೇಲೆ ಹೊರಿಸಲಾಗಿತ್ತು. ಆದರೆ ವರದಕ್ಷಿಣೆ ಸಾವು ಅಥವಾ ಕ್ರೌರ್ಯದ ಆರೋಪಗಳನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿರಲಿಲ್ಲವಾದರೂ ಮೃತ ಹೆಂಡತಿಯ ಗರ್ಭದಲ್ಲಿ ಎರಡು ತಿಂಗಳ ಭ್ರೂಣ ಪತ್ತೆಯಾಗಿದೆ ಎಂಬ ಕಾರಣಕ್ಕಾಗಿ ವಿಚಾರಣಾ ನ್ಯಾಯಾಲಯ ತೀರ್ಪಿನ ಸಮಯದಲ್ಲಿ ಆರೋಪಿಯ ವಿರುದ್ಧ ಕೊಲೆಗೆ ಶಿಕ್ಷೆ ವಿಧಿಸಿತು. ಅಲ್ಲದೆ ಹೊಸದಾಗಿ ಸೇರ್ಪಡೆಗೊಂಡ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ ತನ್ನನ್ನು ಸಮರ್ಥಿಸಿಕೊಳ್ಳಲು ಕೂಡ ವಿಚಾರಣಾ ನ್ಯಾಯಾಲಯ ಅವಕಾಶ ನೀಡಲಿಲ್ಲ ಎಂದು ನ್ಯಾಯಾಲಯ ಹೇಳಿತು.
ಅಂತಿಮವಾಗಿ ಮೇಲ್ಮನವಿದಾರನನ್ನು ನ್ಯಾಯಾಲಯ ಖುಲಾಸೆಗೊಳಿಸಿತಾದರೂ ಯಾವುದೇ ಸೂಕ್ತ ಕಾನೂನು ಇಲ್ಲದಿರುವುದರಿಂದ ಪರಿಹಾರ ನೀಡಲು ಅದು ಆದೇಶಿಸಲಿಲ್ಲ.