ರಾಂಚಿ (Ranchi): ಜಾರ್ಖಂಡ್‌ನ ಧನಬಾದ್‌ನಲ್ಲಿ ನಡೆದಿದ್ದ ನ್ಯಾಯಾಧೀಶ ಉತ್ತಮ್ ಆನಂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ರಿಕ್ಷಾ ಚಾಲಕ ಹಾಗೂ ಆತನ ಸಹಚರನನ್ನು ದೋಷಿ ಎಂದು ಜಾರ್ಖಂಡ್‌ನ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾಗಿದ್ದ ಆನಂದ್ ಹತ್ಯೆ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕ ಲಖನ್ ವರ್ಮಾ ಮತ್ತು ಆತನ ಸಹಚರ ರಾಹುಲ್ ವರ್ಮಾ ತಪ್ಪಿತಸ್ಥರೆಂದು ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ರಜನಿಕಾಂತ್ ಪಾಠಕ್ ತೀರ್ಪು ನೀಡಿದ್ದು, ಇಬ್ಬರು ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ 6 ರಂದು ಪ್ರಕಟಿಸಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ:
49 ವರ್ಷದ ನ್ಯಾಯಾಧೀಶ ಆನಂದ್ ಅವರನ್ನು ಕಳೆದ ವರ್ಷ ಜುಲೈ 28 ರಂದು ಜಾಗಿಂಗ್ ಮಾಡುತ್ತಿದ್ದಾಗ ಆಟೋ ರಿಕ್ಷಾದಿಂದ ಗುದ್ದಿ ಕೊಲ್ಲಲ್ಲಾಗಿತ್ತು. ನ್ಯಾಯಾಧೀಶ ಆನಂದ್ ಹತ್ಯೆ ಪ್ರಕರಣದ ವಿಚಾರಣೆ ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭವಾಗಿತ್ತು. ಧನ್‌ಬಾದ್‌ನ ರಣಧೀರ್ ವರ್ಮಾ ಚೌಕ್‌ನಲ್ಲಿ ನ್ಯಾಯಾಧೀಶರು ರಸ್ತೆಯ ಒಂದು ಬದಿಯಲ್ಲಿ ಜಾಗಿಂಗ್ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಆಟೋ ರಿಕ್ಷಾ ಡಿಕ್ಕಿ ಹೊಡೆದು ಪರಾರಿಯಾಗಿರುವುದು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ದಾಖಲಾಗಿತ್ತು. ಪ್ರಕರಣವನ್ನು ಜಾರ್ಖಂಡ್ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಿತ್ತು.
ನ್ಯಾಯಾಧೀಶ ಉತ್ತಮ್ ಆನಂದ್ ಹೈಪ್ರೊಫೈಲ್ ಕೇಸ್ವೊಂದರ ವಿಚಾರಣೆ ನಡೆಸಿದ್ದರು. ಅದರಲ್ಲಿ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಇದೇ ಸಿಟ್ಟಿಗೆ ಹತ್ಯೆ ಮಾಡಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಮಾಜಿ ಶಾಸಕರ ಆಪ್ತರಾಗಿದ್ದ ರಂಜಯ್ ಕೊಲೆ ಪ್ರಕರಣದಂತಹ ಹಲವಾರು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಿದ್ದರು. ಅಲ್ಲದೇ ಆರೋಪಿಗೆ ಜಾಮೀನು ಮಂಜೂರು ಮಾಡಲು ನಿರಾಕರಿಸಿದ್ದರು. ಹೀಗಿರುವಾಗಲೇ ಈ ಘಟನೆ ಸಂಭವಿಸಿತ್ತು. ಆಟೋ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ ಎಂದು ಮೃತ ನ್ಯಾಯಾಧೀಶರ ತಂದೆ ಸದಾನಂದ್ ಪ್ರಸಾದ್ ಆರೋಪಿಸಿದ್ದರು.