ಮನೆ ಕ್ರೀಡೆ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ: ಅತಿ ಹೆಚ್ಚು ಪದಕ ಗೆಲ್ಲುವ ವಿಶ್ವಾಸದಲ್ಲಿ ಭಾರತ

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ: ಅತಿ ಹೆಚ್ಚು ಪದಕ ಗೆಲ್ಲುವ ವಿಶ್ವಾಸದಲ್ಲಿ ಭಾರತ

0

ಬರ್ಮಿಂಗ್‌ಹ್ಯಾಮ್ (Birmingham): ಕಾಮನ್‌ವೆಲ್ತ್ ಕ್ರೀಡಾಕೂಟದ 22ನೇ ಆವೃತ್ತಿಗೆ ಗುರುವಾರ ರಾತ್ರಿ ಅದ್ಧೂರಿ ಚಾಲನೆ ಸಿಕ್ಕಿದೆ. ಇಂಗ್ಲೆಂಡಿನ ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.

ಇಂಗ್ಲೆಂಡ್​ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಅವರು ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎರಡು ಒಲಿಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ಕಾಮನ್‌ವೆಲ್ತ್ ಕ್ರೀಡಾಕೂಟದ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು.

ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 72 ರಾಷ್ಟ್ರಗಳ 5000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುತ್ತಿರುವುದು ವಿಶೇಷ. ಇದರಲ್ಲಿ ಭಾರತದಿಂದ 214 ಸ್ಪರ್ಧಿಗಳು ಕಣಕ್ಕಿಳಿಯುತ್ತಿದ್ದಾರೆ. ಇನ್ನು ಈ ಕ್ರೀಡಾಕೂಟಗಳಲ್ಲಿ 134 ಪುರುಷರ ಪದಕ ಸ್ಪರ್ಧೆಗಳು ಮತ್ತು 136 ಮಹಿಳೆಯರ ಪದಕ ಸ್ಪರ್ಧೆಗಳು ನಡೆಯಲಿವೆ.

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 16 ವರ್ಷಗಳಿಂದ ಪದಕದ ಬರ ಎದುರಿಸುತ್ತಿರುವ ಭಾರತ ಮಹಿಳಾ ಹಾಕಿ ತಂಡವು ಈ ಬಾರಿ ವಿಜಯ ವೇದಿಕೆಯಲ್ಲಿ ಸಂಭ್ರಮಿಸುವ ಛಲದಲ್ಲಿದೆ. ಸವಿತಾ ಪೂನಿಯಾ ನಾಯಕತ್ವದ ತಂಡವು ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ಶುಕ್ರವಾರ ಘಾನಾ ಸವಾಲು ಎದುರಿಸಲಿದ್ದು ಶುಭಾರಂಭದ ನಿರೀಕ್ಷೆಯಲ್ಲಿದೆ.

ಮಾಜಿ ವಿಶ್ವ ಚಾಂಪಿಯನ್, ಭಾರತದ ಶಿವ ಥಾಪಾ ಅವರು ಶುಕ್ರವಾರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆರಂಭವಾಗಲಿರುವ ಪುರುಷರ ಬಾಕ್ಸಿಂಗ್‌ನಲ್ಲಿ ತಮ್ಮ ಅಭಿಯಾನ ಆರಂಭಿಸುವರು. ಇಂದು ನಡೆಯುವ ಲೈಟ್‌ವೆಲ್ಟರ್‌ವೇಟ್ (60–63.5ಕೆ.ಜಿ) ವಿಭಾಗದಲ್ಲಿ ಶಿವ ಥಾಪ ಅವರು ಪಾಕಿಸ್ತಾನದ ಸುಲೇಮಾನ್ ಬಲೂಚ್ ವಿರುದ್ಧ ಕಾದಾಡುವರು.

ಕನ್ನಡಿಗ ಶ್ರೀಹರಿ ನಟರಾಜ್ ಶುಕ್ರವಾರ ಆರಂಭವಾಗಲಿರುವ ಪುರುಷರ ಈಜು ವಿಭಾಗದ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಇವರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಬೆಂಗಳೂರಿನ ಶ್ರೀಹರಿ ಹೋದ ವರ್ಷ ಟೋಕಿಯೊ ಒಲಿಂಪಿಕ್‌ ಕೂಟದಲ್ಲಿಯೂ ಸ್ಪರ್ಧಿಸಿದ್ದರು.

ಹರ್ಮನ್‌ಪ್ರೀತ್ ಪಡೆಗೆ ಶುಭಾರಂಭದ ನಿರೀಕ್ಷೆ: 24 ವರ್ಷಗಳ ಬಳಿಕ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಮರುಸೇರ್ಪೆಯಾಗಿದ್ದು, ಭಾರತ ಮಹಿಳಾ ತಂಡವು ಟಿ20 ಮಾದರಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ. ಎಜ್‌ಬಾಸ್ಟನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇಂದು ನಡೆಯುವ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಗೆಲುವಿನ ಭರವಸೆಯಲ್ಲಿದೆ. 1998ರ ಕ್ವಾಲಾಲಂಪುರ ಕೂಟದಲ್ಲಿ ಪುರುಷರ 50 ಓವರ್‌ಗಳ ಪಂದ್ಯಗಳನ್ನು ಆಡಿಸಲಾಗಿತ್ತು. ಆ ಬಳಿಕ ಕ್ರಿಕೆಟ್‌ ನಡೆದಿರಲಿಲ್ಲ.

ಹಿಂದಿನ ಲೇಖನಸುರತ್ಕಲ್‌ ನಲ್ಲಿ ಯುವಕನ ಹತ್ಯೆ: ಶಾಲಾ-ಕಾಲೇಜುಗಳಿಗೆ ರಜೆ
ಮುಂದಿನ ಲೇಖನನ್ಯಾಯಾಧೀಶರ ಹತ್ಯೆ ಪ್ರಕರಣ: ಆಟೋ ಚಾಲಕ ಸೇರಿದಂತೆ ಇಬ್ಬರು ದೋಷಿ, ಆಗಸ್ಟ್‌ 6ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ