ಹುಬ್ಬಳ್ಳಿ: ಕೋಮು ಭಾವನೆಗೆ ಧಕ್ಕೆ ತರುವ ವಿವಾದಾತ್ಮಕ ಅನಿಮೆಟೆಡ್ ವಿಡಿಯೋವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿಕೊಂಡು ಗಲಭೆಗೆ ಕಾರಣನಾಗಿದ್ದ ಆರೋಪಿ ಅಭಿಷೇಕ ಹಿರೇಮಠಗೆ ನಗರದ ಕೋರ್ಟ್ ಏ. 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಅಭಿಷೇಕ ಪರ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ನಾಳೆ ಸರ್ಕಾರಿ ವಕೀಲರಿಂದ ತಕರಾರು ಅರ್ಜಿ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಮಸೀದಿ ಮೇಲೆ ಭಗವಾಧ್ವಜ ಹಾರಿಸುತ್ತಿರುವಂತೆ ಕಾಣುವ ಎಡಿಟ್ ಮಾಡಿದ ಅನಿಮೇಟೆಡ್ ವಿಡಿಯೊವನ್ನು ಆನಂದನಗರದ ದ್ವಿತೀಯ ಪಿಯು ವಿದ್ಯಾರ್ಥಿ ಅಭಿಷೇಕ ಹಿರೇಮಠ ತನ್ನ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದ.
‘ಹಿಂದೂ ಸಾಮ್ರಾಟ್, ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆವು, ಜೈ ಶ್ರೀರಾಮ್’ ಎಂಬ ಬರಹ ಅದರಲ್ಲಿತ್ತು. ಇದು ವೈರಲ್ ಆಗಿತ್ತು. ಈ ಬಗ್ಗೆ ತಬೀಬ್ ಲ್ಯಾಂಡ್‌ನ ಮೊಹಮ್ಮದ್ ಅಜರ್ ಬೇಲೇರಿ ಶನಿವಾರ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿತ್ತು. ಗಲಭೆ ವಿಷಯ ತಿಳಿಯುತ್ತಿದ್ದಂತೆ, ಆರೋಪಿಯ ಕುಟುಂಬದವರು, ಯಾರ ಸಂಪರ್ಕಕ್ಕೂ ಸಿಗದಂತೆ ಆನಂದನಗರದಲ್ಲಿರುವ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.