ಮನೆ ಕ್ರೀಡೆ ಜೂನ್ – ಡಿಸೆಂಬರ್: ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ ಮಾಹಿತಿ ಇಲ್ಲಿದೆ

ಜೂನ್ – ಡಿಸೆಂಬರ್: ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ ಮಾಹಿತಿ ಇಲ್ಲಿದೆ

0

16ನೇ ಆವೃತ್ತಿಯ ಐಪಿಎಲ್ ​ಗೆ ಅದ್ಧೂರಿ ತೆರೆಬಿದ್ದಿದೆ. ಕಳೆದ ಎರಡು ತಿಂಗಳಿನಿಂದ ಇಡೀ ಕ್ರಿಕೆಟ್ ಜಗತ್ತನ್ನು ರಂಜಿಸಿದ ಈ ಬಾರಿಯ ಐಪಿಎಲ್ ಹಲವು ನೂತನ ದಾಖಲೆಗಳಿಗೂ ಸಾಕ್ಷಿಯಾಯಿತು. ಭಾನುವಾರ ಆರಂಭವಾಗಿ ಸೋಮವಾರ ಮುಗಿದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.

Join Our Whatsapp Group

ಇದೀಗ ಎಲ್ಲರ ಕಣ್ಣು ವಿಶ್ವ ಕ್ರಿಕೆಟ್‌ ನತ್ತ ನೆಟ್ಟಿದೆ. ಏಕೆಂದರೆ ಈ ವರ್ಷ ಹಲವು ದೊಡ್ಡ ಐಸಿಸಿ ಟೂರ್ನಿಗಳು ನಡೆಯಲಿವೆ. ಇದೇ ವರ್ಷದಲ್ಲಿ ಡಬ್ಲ್ಯುಟಿಸಿ, ಆಶಸ್ ಸರಣಿ, ಏಕದಿನ ವಿಶ್ವಕಪ್ ಕೂಡ ನಡೆಯಲಿದೆ.

ಟೆಸ್ಟ್ ಕ್ರಿಕೆಟ್ ವೇಳಾಪಟ್ಟಿ ಹೀಗಿದೆ

ಐಪಿಎಲ್ ಮುಗಿದ ಬೆನ್ನಲ್ಲೇ ಇದೀಗ ಜೂನ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನಡೆಯಲಿದೆ. ಜೂನ್ 7 ರಿಂದ ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ಈ ಎರಡು ತಂಡಗಳು ಟೆಸ್ಟ್ ವಿಶ್ವಕಪ್ ಗೆಲ್ಲುವ ಸಲುವಾಗಿ ಮುಖಾಮುಖಿಯಾಗಲಿವೆ. ಜೂನ್ 11ರವರೆಗೆ ಈ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನ ಜೂನ್ 1ರಿಂದ 4ರವರೆಗೆ ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವೆ ಟೆಸ್ಟ್ ಪಂದ್ಯ ನಡೆಯಲಿದೆ. ನಂತರ ಜೂನ್ 14 ರಿಂದ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವೆ ಟೆಸ್ಟ್ ಪಂದ್ಯ ನಡೆಯಲಿದೆ.

ಈ ಪಂದ್ಯದ ಮಧ್ಯೆ, ಟೆಸ್ಟ್ ಕ್ರಿಕೆಟ್‌ನ ಅತಿದೊಡ್ಡ ಪೈಪೋಟಿಗಳಲ್ಲಿ ಒಂದಾದ ಆಶಸ್ ಸರಣಿಯು ಪ್ರಾರಂಭವಾಗಲಿದೆ. ಈ ಸರಣಿಯು ಜೂನ್ 16 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಇದಾದ ಬಳಿಕ ಜೂನ್ 28ರಿಂದ ಜುಲೈ 2ರವರೆಗೆ ಎರಡನೇ ಪಂದ್ಯ ಲಾರ್ಡ್ಸ್​ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಜುಲೈ 6 ರಿಂದ 10 ರವರೆಗೆ ಲೀಡ್ಸ್‌ನಲ್ಲಿ ನಡೆಯಲಿದೆ. ನಾಲ್ಕನೇ ಟೆಸ್ಟ್ ಜುಲೈ 19 ರಿಂದ 23 ರವರೆಗೆ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಕೊನೆಯ ಮತ್ತು ಐದನೇ ಪಂದ್ಯ ಜುಲೈ 27 ರಿಂದ 31 ರವರೆಗೆ ಓವಲ್‌ನಲ್ಲಿ ನಡೆಯಲಿದೆ.

ವರ್ಷಾಂತ್ಯದಲ್ಲಿ ಅಂದರೆ ಡಿಸೆಂಬರ್‌ನಲ್ಲಿ ಪಾಕಿಸ್ತಾನ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಡಿಸೆಂಬರ್ 14 ರಿಂದ 18 ರವರೆಗೆ, ಎರಡನೇ ಪಂದ್ಯ ಡಿಸೆಂಬರ್ 26 ರಿಂದ 30 ರವರೆಗೆ ಮತ್ತು ಮೂರನೇ ಪಂದ್ಯ ಜನವರಿ 3 ರಿಂದ 7 ರವರೆಗೆ ನಡೆಯಲಿದೆ. ಮೊದಲ ಪಂದ್ಯ ಪರ್ತ್‌ ನಲ್ಲಿ, ಎರಡನೇ ಪಂದ್ಯ ಮೆಲ್ಬೋರ್ನ್‌ ನಲ್ಲಿ ನಡೆಯಲಿದ್ದು, ಮೂರನೇ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ.

ಏಕದಿನ ಕ್ರಿಕೆಟ್ ವೇಳಾಪಟ್ಟಿ ವಿವರ ಇಲ್ಲಿದೆ

ಈ ವರ್ಷ ಏಕದಿನ ವಿಶ್ವಕಪ್​ಗೆ ಭಾರತ ಆತಿಥ್ಯ ವಹಿಸಲಿದ್ದು, ಅದರ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ. ಈ ಬಾರಿಯ ವಿಶ್ವಕಪ್ ಅಕ್ಟೋಬರ್ ನಿಂದ ನವೆಂಬರ್​ವರೆಗೆ ನಡೆಯಲಿದ್ದು, ವಿಶ್ವಕಪ್​ನ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ ಈ ಮಹಾಸಮರಕ್ಕೂ ಮುನ್ನ ನಡೆಯಲ್ಲಿರುವ ಏಕದಿನ ಸರಣಿಗಳ ಪಟ್ಟಿಯನ್ನು ನೋಡುವುದಾದರೆ, ಜೂನ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಅಫ್ಘಾನಿಸ್ತಾನ ತಂಡ ಶ್ರೀಲಂಕಾಕ್ಕೆ ತೆರಳಲಿದೆ. ಈ ಸರಣಿಯು ಜೂನ್ 2 ರಿಂದ 7 ರವರೆಗೆ ನಡೆಯಲಿದೆ. ಜೂನ್‌ನಲ್ಲಿ ವೆಸ್ಟ್ ಇಂಡೀಸ್ ತಂಡ ಯುಎಇಗೆ ಭೇಟಿ ನೀಡಲಿದ್ದು, ಜೂನ್ 4 ರಿಂದ 9 ರವರೆಗೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಜುಲೈನಲ್ಲಿ, ಅಫ್ಘಾನಿಸ್ತಾನ ತಂಡವು ಬಾಂಗ್ಲಾದೇಶದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಇದು ಜುಲೈ 5 ರಿಂದ 11 ರವರೆಗೆ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ, ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಉಭಯ ತಂಡಗಳ ನಡುವೆ ಸೆಪ್ಟೆಂಬರ್ 8 ರಿಂದ 15 ರವರೆಗೆ ನಾಲ್ಕು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಇನ್ನು ಸೆಪ್ಟೆಂಬರ್‌ನಲ್ಲಿಯೇ, ಐರ್ಲೆಂಡ್ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಇದು ಸೆಪ್ಟೆಂಬರ್ 20 ರಿಂದ 26 ರವರೆಗೆ ನಡೆಯಲಿದೆ.

ಸೆಪ್ಟೆಂಬರ್‌ ನಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದ್ದು, ಸೆಪ್ಟೆಂಬರ್ 7 ರಿಂದ 17 ರವರೆಗೆ ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಡಿಸೆಂಬರ್​ ನಲ್ಲಿ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಡಿಸೆಂಬರ್ 3 ರಿಂದ 9 ರವರೆಗೆ ಎರಡೂ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ.

ಇದು ಟಿ20 ಕ್ರಿಕೆಟ್ ವೇಳಾಪಟ್ಟಿ

ಟಿ20 ಕ್ರಿಕೆಟ್ ವಿಚಾರಕ್ಕೆ ಬಂದರೆ ಅಫ್ಘಾನಿಸ್ತಾನ ತಂಡ ಜುಲೈನಲ್ಲಿ ಬಾಂಗ್ಲಾದೇಶಕ್ಕೆ ತೆರಳಿ ಎರಡು ಟಿ20 ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳು ಜುಲೈ 14 ಮತ್ತು 16 ರಂದು ನಡೆಯಲಿದೆ. ನ್ಯೂಜಿಲೆಂಡ್ ತಂಡ ಆಗಸ್ಟ್‌ನಲ್ಲಿ ಯುಎಇ ಪ್ರವಾಸಕ್ಕೆ ತೆರಳಲಿದ್ದು, ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಮೂರು ಪಂದ್ಯಗಳು ಆಗಸ್ಟ್ 17, 19 ಮತ್ತು 20 ರಂದು ನಡೆಯಲಿವೆ. ನ್ಯೂಜಿಲೆಂಡ್ ನಂತರ ಇಂಗ್ಲೆಂಡ್ ಪ್ರವಾಸ ಕೈಗೊಂಡು ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಪಂದ್ಯಗಳು ಆಗಸ್ಟ್ 30, ಸೆಪ್ಟೆಂಬರ್ 1, 3, 5 ರಂದು ನಡೆಯಲಿವೆ.

ಈ ವರ್ಷದಲ್ಲಿ ನಡೆಯುವ ಟಿ20 ಲೀಗ್ ವಿವರ ಹೀಗಿದೆ

ಐಪಿಎಲ್ ನಂತರ ಟಿ20 ಲೀಗ್‌ ಗಳು ಇತರ ಹಲವು ದೇಶಗಳಲ್ಲಿಯೂ ನಡೆಯಲಿವೆ. ವೈಟಾಲಿಟಿ ಬ್ಲಾಸ್ಟ್ ಲೀಗ್ ಮೇ ಮತ್ತು ಜುಲೈನಲ್ಲಿ ನಡೆಯಲ್ಲಿದೆ. ಇನ್ನು ದಿ ಹಂಡ್ರೆಡ್ ಲೀಗ್ ಆಗಸ್ಟ್‌ ನಲ್ಲಿನಡೆದರೆ, ಕೆರಿಬಿಯನ್ ಪ್ರೀಮಿಯರ್ ಲೀಗ್ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ವೆಸ್ಟ್ ಇಂಡೀಸ್‌ ನಲ್ಲಿ ನಡೆಯಲಿದೆ.

ಹಿಂದಿನ ಲೇಖನವರ್ಷದ 365 ದಿನವೂ ತಂಬಾಕು ರಹಿತ ದಿನವಾಗಲಿ: ಡಾ.ಕೆ.ವಿ ರಾಜೇಂದ್ರ
ಮುಂದಿನ ಲೇಖನಕೆರೆಗೆ ಕೊಳಚೆ ನೀರು ಹರಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಈಶ್ವರ ಖಂಡ್ರೆ