ಮೈಸೂರು: ಹಿಜಾಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶ ಖಚಿತ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮೈಸೂರಿನಲ್ಲಿಂದು ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶವಾಗಲಿದೆ. ಉಡುಪಿಯಿಂದಲೇ ಕಾಂಗ್ರೆಸ್ ಸರ್ವನಾಶದ ಆರಂಭವಾಗಿದೆ ಎಂದು ಹೇಳಿದರು.
ವೋಟ್ ಬ್ಯಾಂಕ್ಗಾಗಿ ಕಾಂಗ್ರೆಸ್ ಮುಖಂಡರು ಹಿಜಾಬ್ ವಿವಾದ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ ಅವರು ಅವರು ಮನಸ್ಸು ಮಾಡಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು. ಆ ಆರು ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ನೀಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ಗೆ ಮುಸ್ಲಿಂ ಮತಗಳೇ ಮುಖ್ಯವಾಗಿವೆ. ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಈ ಹಿಂದೆ ವೀರಶೈವ–ಲಿಂಗಾಯತ ಧರ್ಮ ನಂತರ ಮತಾಂತರದ ವಿಷಯ, ಗೋಹತ್ಯೆ, ಈಗ ಹಿಜಾಬ್ ಅವರ ರಾಜಕೀಯದ ವಿಚಾರವಾಗಿದೆ. ಹಿಂದೂ ಮುಸ್ಲಿಂ ಒಡೆದಿದ್ದು ಕಾಂಗ್ರೆಸ್. ಅಪವಾದ ಮಾತ್ರ ಬಿಜೆಪಿ ಮೇಲೆ ಎಂದು ಪ್ರತಿಪಾದಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಾನು ಎರಡನೇ ಅಂಬೇಡ್ಕರ್ ಅಂತ ಹೇಳಿಕೊಳ್ಳುತ್ತಾರೆ. ಅವರಿಗೆ ಸಂವಿಧಾನ, ಕಾನೂನು ಗೊತ್ತಿಲ್ಲವಾ? ಎಂದು ಪ್ರಶ್ನಿಸಿದರು. ಕೇರಳದ ಹೈಕೋರ್ಟ್ ಹಿಜಾಬ್ ವಿಚಾರದಲ್ಲಿ ಏನು ಹೇಳಿದೆ ಎಂದು ಸಿದ್ದರಾಮಯ್ಯ ಓದಿಕೊಳ್ಳಲಿ. ಸರ್ಕಾರ ಆದೇಶ ಮಾಡಿದೆ ಈ ಬಗ್ಗೆ ಕಾಂಗ್ರೆಸ್ ನಿಲುವನ್ನು ಸ್ಪಷ್ಟಪಡಿಸಬೇಕು. ಕಾನೂನು ಪಾಲನೆ ಮಾಡಬೇಕೋ ಬೇಡವೋ ಸಿದ್ದರಾಮಯ್ಯ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ಹಿಜಾಬ್ ಧರಿಸಿ ಅಧಿವೇಶನಕ್ಕೆ ಬರುವುದಲ್ಲ, ಮೊದಲು ಧಮ್ ಇದ್ದರೆ ಮುಸ್ಲೀಂ ಮಹಿಳೆಯರಿಗೆ ಮಸೀದಿಗೆ ಪ್ರವೇಶ ಕೊಡಿಸಿ. ನಾವು ಶಾಲೆಗೆ ಮಾತ್ರ ಹಿಜಾಬ್ ನಿಷೇಧಿಸಿದ್ದೇವೆ. ಹೊರಗಡೆ ಮಾಡಿಲ್ಲ. ಬೇರೆ ಎಲ್ಲಾ ಕಡೆ ಹಿಜಾಬ್ ಧರಿಸಿಕೊಂಡು ಓಡಾಡಬಹುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.