ಮನೆ ರಾಜ್ಯ ಅಮಿತ್ ಶಾ ಹೇಳಿಕೆ ಖಂಡಿಸಿ ಕಲಬುರಗಿ ಬಂದ್‌: ಪ್ರಯಾಣಿಕರ ಪರದಾಟ

ಅಮಿತ್ ಶಾ ಹೇಳಿಕೆ ಖಂಡಿಸಿ ಕಲಬುರಗಿ ಬಂದ್‌: ಪ್ರಯಾಣಿಕರ ಪರದಾಟ

0

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆಯನ್ನು ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಕಲಬುರಗಿ ಬಂದ್‌ ಗೆ  ಕರೆ ನೀಡಿವೆ.

Join Our Whatsapp Group

ನಗರದಲ್ಲಿ ಬೆಳ್ಳಂಬೆಳಗ್ಗೆ ಬಸ್, ಆಟೊ ಸಂಚಾರ ಸ್ಥಗಿತವಾಗಿತ್ತು. ರಸ್ತೆಗೆ ಇಳಿದಿದ್ದ ಆಟೊಗಳನ್ನು ಪ್ರತಿಭಟನಾಕಾರರು ತಡೆದು ವಾಪಸ್ ಕಳುಹಿಸಿದರು.

ನಿಲ್ದಾಣದ ಎದುರು ಬ್ಯಾರಿಕೇಡ್‌ಗಳನ್ನು ಹಾಕಿ, ಆಟೊಗಳನ್ನು ನಿಲ್ಲಿಸಿ ಸಂಚಾರ ತಡೆದರು.

ಅಂಗಡಿ–ಮುಂಗಟ್ಟುಗಳನ್ನು ತೆರೆಯದಂತೆ ಮನವಿ ಮಾಡಿದರು. ಕೆಲವೆಡೆ ತೆರೆದಿದ್ದ ಅಂಗಡಿಗಳನ್ನೂ ಬಲವಂತವಾಗಿ ಮುಚ್ಚಿಸಿದರು. ಅನಾಹುತ ನಡೆದರೆ ಹೇಗೆ ಎಂದು ಹೆದರಿ ವ್ಯಾಪಾರಿಗಳು ಅಂಗಡಿಯ ಬಾಗಿಲು ತೆರೆಯದೇ ವಾಪಸ್ ತೆರಳಿದರು.

ಬಂದ್ ಬಗ್ಗೆ ತಿಳಿಯದೆ ಬಂದಿದ್ದ ಪ್ರಯಾಣಿಕರು ಪರದಾಡಿದರು. ನಗರದಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ತೀವ್ರ ತೊಂದರೆ ಅನುಭವಿಸುವಂತಾಯಿತು.

ಹೊರ ರಾಜ್ಯ, ಹೊರ ಊರುಗಳಿಂದ ಬಂದ ಬಸ್‌ಗಳು ರಿಂಗ್‌ ರಸ್ತೆಯಲ್ಲೇ ಪ್ರಯಾಣಿಕರನ್ನು ಇಳಿಸಿ ಹೋದವು. ಅಲ್ಲಿಂದ ಕೇಂದ್ರ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ರೈಲು ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ತೆರಳಿದರು. ಬಸ್ ನಿಲ್ದಾಣಗಳಲ್ಲಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ನಿರಾಸೆಯಿಂದ ರಸ್ತೆ ಬದಿಯಲ್ಲೇ ಕುಳಿತರು.

ಬಸ್ ನಿಲ್ದಾಣದ ಮುಂಭಾಗದಲ್ಲಿ ನಿಂತಿದ್ದ ಪ್ರಯಾಣಿಕರನ್ನು ರಿಂಗ್ ರೋಡ್‌ಗೆ ತೆರಳುವಂತೆ ಪೊಲೀಸರು ಕಳುಹಿಸಿದರು.

ಏಕಾಏಕಿ ಬಸ್ ಓಡಾಟ ಬಂದ್ ಮಾಡಿದರೆ ಮಕ್ಕಳೊಂದಿಗೆ ಬ್ಯಾಗ್ ಹೊತ್ತುಕೊಂಡು ಬಂದವರು ಏನು ಮಾಡಬೇಕು? ರಾತ್ರಿ ಇಡೀ ನಿದ್ರೆ ಇಲ್ಲದೆ ಪುಣೆಯಿಂದ ಬಂದಿದ್ದೇವೆ. ರಿಂಗ್ ರೋಡ್‌ನಿಂದ ಆಟೊದಲ್ಲಿ ಕರೆ ತರುತ್ತಿದ್ದ ಚಾಲಕ ಮಧ್ಯದಲ್ಲಿ ಬಿಟ್ಟು ಹೋದರು. ಬಸ್ ನಿಲ್ದಾಣದವರೆಗು ನಡೆದುಕೊಂಡೇ ಬಂದೆವು. ಆದರೆ, ಬಸ್‌ಗಳ ಸಂಚಾರವೇ ಇಲ್ಲ. ಪೊಲೀಸರು ನೋಡಿದರೆ ಬೇರೆ ಕಡೆ ಹೋಗುವಂತೆ ಕಳುಹಿಸುತ್ತಿದ್ದಾರೆ. ರಾಯಚೂರಿನ ದೇವದುರ್ಗಕ್ಕೆ ಹೋಗಬೇಕು. ಏನು ಮಾಡಬೇಕು ತಿಳಿಯುತ್ತಿಲ್ಲ’ ಎಂದು ದೇವದುರ್ಗದ ತಿಮ್ಮವ್ವ ಅಲವತ್ತುಕೊಂಡರು.

ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ: ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಟೈರ್‌ ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಘೋಷಣೆ ಕೂಗಿದರು. ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.