ಮನೆ ಅಪರಾಧ ಕಲಬುರಗಿ : ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಇರಿದು ಹತ್ಯೆಗೈದ ಪತಿ

ಕಲಬುರಗಿ : ಪತ್ನಿಯ ಶೀಲ ಶಂಕಿಸಿ ಚಾಕುವಿನಿಂದ ಇರಿದು ಹತ್ಯೆಗೈದ ಪತಿ

0

ಕಲಬುರಗಿ : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತ ಘಟನೆ ಎನ್ನುವಂತೆ ಕಲಬುರಗಿಯಲ್ಲಿ ನಡು ರಸ್ತೆಯಲ್ಲೇ ಪತ್ನಿಯ ಶೀಲ ಶಂಕಿಸಿ ಪತಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಕಲಬುರ್ಗಿಯ ಶಹಾಬಜಾರ್ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ.

ಕೊಲೆಯಾದ ಮಹಿಳೆಯನ್ನು ಕಲಬುರಗಿ ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದ ರೂಪ (32) ಎಂದು ಗುರುತಿಸಲಾಗಿದೆ. ಪತಿ ವೆಂಕಟೇಶ್ ಪತ್ನಿ ರೂಪ ಶೀಲ ಶಂಕಿಸಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.

ಕಳೆದ 10 ವರ್ಷದ ಹಿಂದೆ ವೆಂಕಟೇಶ್ ರೂಪಳನ್ನು ಮದುವೆಯಾಗಿದ್ದನು. ಮೂರು ತಿಂಗಳಿನಿಂದ ಪತ್ನಿ ರೂಪ ಶೀಲ ಶಂಕಿಸಿ ಪತಿ ವೆಂಕಟೇಶ್ ಪ್ರತಿನಿತ್ಯ ಜಗಳ ಮಾಡುತ್ತಿದ್ದನು. ಇದರಿಂದ ಬೇಸತ್ತ ರೂಪಾ ಪತಿಯನ್ನು ಬಿಟ್ಟು ತನ್ನ ಮಕ್ಕಳೊಂದಿಗೆ ಶಹಾಬಜಾರ್ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದಳು.

ಜೀವನ ನಿರ್ವಹಣೆಗಾಗಿ ಹೋಟೆಲ್‌ನಲ್ಲಿ ಸಮೋಸ ಮಾಡುತ್ತಿದ್ದ ರೂಪಾ, ಮಂಗಳವಾರ ಬೆಳಗ್ಗೆ 8:30ರ ಆಸುಪಾಸಿನಲ್ಲಿ ನಡೆದುಕೊಂಡು ಹೋಟೆಲ್‌ಗೆ ತೆರಳುತ್ತಿದ್ದಾಗ ಅಲ್ಲಿಗೆ ಬಂದ ಆಕೆಯ ಪತಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ವೆಂಕಟೇಶ್, ಪತ್ನಿಗೆ ಚಾಕು ಇರಿದು ಬೈಕ್‌ನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಯ ಆಧಾರದ ಮೇಲೆ ವೆಂಕಟೇಶ್ ವಿರುದ್ಧ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.