ಕಂದವೆಂದರೆ ಗಡ್ಡೆ. ಬೇರು,ಗಂಟು ‚ಹಠಯೋಗ ಪ್ರದೀಪಿಕೆ’ಯು ‘ಕಂದ’ದ ವಿಷಯವನ್ನು ಕುರಿತು ಈ ಬಗೆಯ ವಿವರಣೆ ಕೊಟ್ಟಿದೆ ;
ಕಂದೋರ್ಧ್ವಂ ಕುಂಡಲೀಶಕ್ತಿಃ ಸುಪ್ತಾ ಮೋಕ್ಷಾಯ ಯೋಗಿನಾಮ್ |
ಬಂಧನಾಯ ಚ ಮೂಢಾನಾಂ ಯಸ್ತಾಂ ವೇತ್ತಿ ಸ ಯೋಗವಿತ್ ||
ಎಂದರೆ ಕುಂಡಲಿನೀ ಶಕ್ತಿಯು ಈ ‘ಕಂದ’ದ (ಅಂದರೆ ನಾಡಿಗಳೆಲ್ಲವೂ ಒಟ್ಟು ಸೇರಿ ಮತ್ತೆ ಬೇರ್ಪಡಿಸುವ ನಾಭಿಸ್ತಾನ) ಮೇಲ್ಭಾಗದಲ್ಲಿ ನಿದ್ರಿಸುತ್ತಿರುತ್ತದೆ. ಯೋಗಿಗಳು ಇದನ್ನು ಎಬ್ಬಿಸುವುದರ ಅಂದರೆ ಚಲನಸ್ಥಿತಿಗೆ ತರುವುದರ ಮೂಲಕ ಮೋಕ್ಷನ್ನುಗಳಿಸುತ್ತಾರೆ.ಆದರೆ ಕುಂಡಲಿನೀ ಶಕ್ತಿಯ ವಿಷಯವನ್ನರಿಯದ ಮೂಢರು ಜನನ ಮರಣವೆಂಬ ಸಂಸಾರದ ಬಂಧನಕ್ಕೆ ಒಳಗಾಗುತ್ತಾರೆ.ಯಾವನು ಈ ಕುಂಡಲಿನೀಶಕ್ತಿಯ ರಹಸ್ಯವನ್ನ ರಿಯುತ್ತಾನೋ ಅವನೇ ಯೋಗ ರಹಸ್ಯವನ್ಯರಿಯುವನೆಂದು ತಿಳಿಯಬೇಕು. ಸಮಸ್ತ ಯೋಗ ತಂತ್ರಗಳೂ ಈ ಕುಂಡಲಿನೀಶಕ್ತಿಯನ್ನೇ ಆಶ್ರಯಿಸಿರುತ್ತಾದೆ ಎಂಬುದೇ ಇದರ ತಾತ್ವರ್ಯ.
ಊರ್ಧ್ವಂ ವಿತಸ್ತಿಮಾತ್ರಂ ತು ವಿಸ್ತಾರಂ ಚತುರಂಗುಳಮ್|
ಮೃದುಳಂ ಧವಳಂ ಪ್ರೋಕ್ತಂ ವೇಷ್ಟಿತಾಂಬರಲಕ್ಷಣಮ್ ||
ಎಂದರೆ ‘ಕಂದ’ ಸಂಪೀಡನದಿಂದ ಶಕ್ತಿಚಾಲವುಂಟಾಗುವುದೆಂಬುದನ್ನು ಹೇಳಬಯಸಿ ಮೊದಲು ‘ಕಂದಸ್ತಾನ’ ಮತ್ತು ಅದರ ಸ್ವರೂಪವನ್ನು ಕುರಿತು ಈ ಶ್ಲೋಕವನ್ನು ವಿವರಿಸಿದೆ. ‘ಮೂಲ’ಸ್ಥಾನದಿಂದ 12 ಬೆಟ್ಟುಗಳಷ್ಟು ಮೇಲ್ಗಡೆ ಈ ‘ಕಂದ’ವಿದ್ದು ಸುಮಾರು 4 ಅಂಗುಲಗಳಷ್ಟು ಎರಡು ಕಡೆಗೂ ಹಬ್ಬಿರುತ್ತದೆ. ಈ ಸ್ಥಾನದ ವಿಷಯದಲ್ಲಿ ‘ಗೋರಕ್ಷ ಶತಕ’ದಲ್ಲಿ ಮತ್ತು ‘ಯಾಜ್ಞವಲ್ಕ್ಯ ಸೃತಿ’ಯಲ್ಲಿ ಹೀಗೆ ಹೇಳಿದೆ :
ಊರ್ಧ್ವಂ ಮೇಡ್ರಾದಧೋ ನಾಭೇಃ ಕಂದ ಯೋನಿಃ ಖಗಾಂಡವತ್ |
ತತ್ರ ನಾಡ್ಯಃ ಸಮುತ್ವನ್ನಾಃ ಸಹಸ್ರಾಣಾಂ ದ್ವಿಸಪ್ತತಿಃ ||
ಎಂದರೆ ಈ ‘ಕಂದ’ವು ಹಕ್ಕಿಯ ಮೊಟ್ಟೆಯಂತೆ, ಮಿಢ್ರದಿಂದ ಮೇಲೆ ನಾಭಿಯ ಕೆಳಗೆ ನೆಲೆಸಿದೆ. ದೇಹದಲ್ಲಿ ಹರಡುವ 22 ಸಹಸ್ರ ನಾಡಿಗಳಿಗೆ ಇದೇ ಉಗಮಸ್ಥಾನ. ಯಜ್ಞವಲ್ಕ್ಯರ ಅಭಿಪ್ರಾಯದಲ್ಲಿ ಈ ಕಂದಸ್ಥಾನವು ಎಂದರೆ ‘ಕಂದ’ವು ಗುದ್ಧಸ್ಥಾನದಿಂದ ಎರಡಂಗುಲದಷ್ಟು ಮೇಲೆ, ಮಧ್ಯೆ ಒಂದಂಗುಲ, ಅದರ ಮೇಲೆ 9ಅಂಗುಲ ಒಟ್ಟು 12 ಅಂಗುಳ ಪ್ರಮಾಣಕ್ಕೆ ‘ವಿತಸ್ತ’ಎಂಬ ಹೆಸರಿಟ್ಟಿದೆ. ಅಲ್ಲದೆ ಈ ‘ಕಂದ’ದ ವಿಸ್ತಾರ ಅಂದರೆ ಉದ್ದಗಲಗಳ ಪ್ರಮಾಣ ನಾಲ್ಕಂಗುಲಗಳ ಹೀಗೆ ಚದುರಂಗುಲ ಪ್ರಮಾಣದ ಕಂದವು ಮೊಟ್ಟೆ ಆಕಾರವನ್ನು ಹೊಂದಿ ಕೋಮಲವಾದ ಮತ್ತು ಬಿಳಿಯ ಬಣ್ಣದಿಂದ ಅಲಂಕೃತವಾಗಿದೆಯೋ ಎಂಬಂತಿರುತ್ತದೆ ಎಂದು ಯೋಗಿಗಳು ಇದನ್ನು ವರ್ಣಿಸಿದ್ದಾರೆ.
ಅಭ್ಯಾಸ ಕ್ರಮ :
1. ಮೊದಲು, ಅಭ್ಯಾಸಿಯು ನೆಲದಮೇಲೆ ಕುಳಿತು ಕಾಲುಗಳನ್ನು ಮುಂಗಡೆಗೆ ನೀಳವಾಗಿ ಚಾಚಬೇಕು. ಬಳಿಕ ಮಂಡಿಗಳನ್ನು ಬಾಗಿಸಿ ತೊಡೆಗಳನ್ನಗಲಿಸಿ ಪಾದಗಳನ್ನು ಮುಂದಗಡೆ ಗೆಳೆದು ಹಿಮ್ಮಡಿಗಳನ್ನು ಗುದಗುಹ್ಯ ಸ್ಥಾನಗಳ ನಡು ತಾಣಕ್ಕೆ ಬರುವಂತೆ ಮಾಡಿ ಮಂಡಿಗಳನ್ನು ನೆಲದ ಮೇಲೆ ಊರಿಡಬೇಕು. ಈ ಭಂಗಿಯು ‘ಬದ್ಧ ಕೋನಾಸನ’ವನ್ನು ಹೋಲುತ್ತದೆ.
2. ಆಮೇಲೆ,ಬಲದಂಗೈಯಿಂದ ಬಲಪಾದವನ್ನೂ ಎಡದಂಗೈಯಿಂದ ಎಡಪಾದವನ್ನೂ ಹಿಡಿದುಕೊಳ್ಳಬೇಕು.
3. ಅನಂತರ, ಕೈಗಳ ನೆರವಿನಿಂದ ಪಾದಗಳನ್ನು ಮುಂಡದ ಕಡೆಗೆ ಎಳೆದು ಕಾಲ್ಗಿಣ್ಣುಗಳೆರಡನ್ನೂ ತಲೆ ಕೆಳಗುಮಾಡಿ ಮಂಡಿಗಳನ್ನೂ ತೊಡೆಗಳನ್ನು ಬಳಿಕ ಹಿಮ್ಮಡಿಗಳನ್ನು ಮತ್ತು ಪಾದಗಳ ಹೊರಬದಿಗಳನ್ನೂ ಹೊಕ್ಕಳು ಮತ್ತು ಎದೆ ಭಾಗಗಳನ್ನು ಮುಟ್ಟುವಂತೆ ಇರಿಸಬೇಕು ಮೊದಮೊದಲು ಪಾದಗಳು ಜಾರಿ ಬೀಳಬಹುದು ಆದರೆ ಕಾಲುಗಳನ್ನು ಬಿಗಿಯಾಗಿ ಹಿಡಿದು ಎದೆಯ ಮೇಲೆ ಬಲತ್ಕಾರವಾಗಿ ನಿಲ್ಲಿಸುವ ಅಭ್ಯಾಸವನ್ನು ಕೆಲವು ವಾರಗಳು ನಡೆಸಿದರೆ ಆ ಭಂಗಿಯು ಕೈವಶವಾಗುವುದರಲ್ಲಿ ಸಂಶಯವಿಲ್ಲ.
4. ಆಮೇಲೆ, ಕೈಗಳನ್ನು ಸಡಿಲಿಸಿ ತೋಳುಗಳನ್ನು ನೀಳಲವಾಗಿ ಚಾಚಿ ಕೈಗಳ ಹಿಂಬದಿಯನ್ನು ಮಂಡಿಗಳ ಮೇಲಿರಿಸಬೇಕು ಇಲ್ಲವೇ ಅಂಗೈಗಳನ್ನು ಜೋಡಿಸಿ ಎದೆಯೆಡೆಗೆ ತಂದಿಡಬೇಕು. ಆ ಬಳಿಕ ಬೆನ್ನನ್ನು ನೆಟ್ಟಗೆ ನಿಲ್ಲಿಸಿ ಆಳವಾಗಿ ಉಸಿರಾಡುತ್ತ ಭಂಗಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ ನೆಲೆಸಬೇಕು.
5. ಈ ಆಸಾನಭ್ಯಾಸದಲ್ಲಿ ಬಹು ಮುಂದುವರಿದವರು ಕೈಗಳನ್ನು ಮೇಲೆತ್ತಿ ತಲೆಯ ಮೇಲ್ಭಾಗದಲ್ಲಿ ಅಂಗೈಗಳನ್ನು ಜೋಡಿಸಬೇಕು. ಆ ಬಳಿಕ ಅಂಗೈಗಳನ್ನು ಬೆನ್ನ ಹಿಂದೆ ಜೋಡಿಸಿ ಸಮತೋಲಿಸಬೇಕು. ಈ ಆಸನಗಳಲ್ಲಿ ಬುಲ್ಲು ಕಷ್ಟವೆನಿಸುವುದೆಂದರೆ ಈ ಭಂಗಿಯೇ.
6. ತರುವಾಯು, ಪಾದಗಳನ್ನು ಕೈಗಳಲ್ಲಿ ಹಿಡಿದುಕೊಂಡು ಅವನ್ನು ನೆಲಕ್ಕಿಳಿಸಿ ವಿಶ್ರಾಂತಿ ಪಡೆಯಬೇಕು.
7. ವಸ್ತಿಕುಹರ ಮತ್ತು ಕಾಲುಗಳ ಇದರ ಕೀಲುಗಳು ಆಸನ ಭಂಗಿಯ ಅಭ್ಯಾಸದಲ್ಲಿ ಸುತ್ತು ತಿರಗಬೇಕಾಗಿರುವುದರಿಂದ ಈ ಭಂಗಿಯಲ್ಲಿ ನೈಪುಣ್ಯವನ್ನು ಗಳಿಸಲು ಬಹುಕಾಲ ಬೇಕು.
ಪರಿಣಾಮಗಳು :
ಈ ಆಸನಾಭ್ಯಾಸದಿಂದ ಹೊಕ್ಕಲಿನ ಕೆಳಭಾಗದ ಪ್ರತಿಮಾಂಸಖಂಡವು ವ್ಯಾಯಾಮನ್ನುಗಳಿಸುತ್ತದೆ. ಈ ಭಂಗಿಯು ಟೊಂಕ, ಮಂಡಿ ಮತ್ತು ಕಾಲಹರಡುಗಳ ಕೀಲುಗಳಲ್ಲಿರುವ ಪೆಡಸುತನವನ್ನು ಕಳೆಯುತ್ತದೆ.ಇದು ಮೈಥುನದ ಬಯಕೆಯನ್ನು ನಿಯಂತ್ರಿಸುತ್ತದೆ.
ಅಲ್ಲದೆ ಈ ಆಸನವು ‘ಸ್ವಾದಿಷ್ಟನ’ ಮತ್ತು ‘ಮಣಿಪೂರ’ವೆಂಬ ದೇಹದಲ್ಲಿಯ ಸೂಕ್ಷ್ಮ ಚಕ್ರಗಳಿಗೆ ಅಂಗಸಾಧನೆಯನ್ನೊದಗಿಸುವುರ ಮೂಲಕ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.