ಮನೆ ಮನರಂಜನೆ ಕಾಂತಾರ ಚಾಪ್ಟರ್‌ – 1 ಟ್ರೈಲರ್‌ ರಿಲೀಸ್ – ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್‌...

ಕಾಂತಾರ ಚಾಪ್ಟರ್‌ – 1 ಟ್ರೈಲರ್‌ ರಿಲೀಸ್ – ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್‌ ಶೆಟ್ಟಿ

0

ಉಡುಪಿ : ಕಾಂತಾರ ಚಾಪ್ಟರ್‌ 1 ಟ್ರೈಲರ್‌ ಬಿಡುಗಡೆ ಬೆನ್ನಲ್ಲೇ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಮಾಡಿದ್ದಾರೆ. ಪತ್ನಿ ಪ್ರಗತಿ ಜೊತೆಗೆ ಕೊಲ್ಲೂರು ದೇಗುಲಕ್ಕೆ ತೆರಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಂತಾರ ಸಿನಿಮಾ ಯಶಸ್ಸಿಗಾಗಿ ನಟ ಪ್ರಾರ್ಥಿಸಿದ್ದಾರೆ.

ಬಹುನಿರೀಕ್ಷಿತ ಕಾಂತಾರ ಚಾಪ್ಟರ್‌ 1 ಸಿನಿಮಾದ ಟ್ರೈಲರ್‌ ಅನ್ನು ನವರಾತ್ರಿ ದಿನ ಬಿಡುಗಡೆ ಮಾಡಲಾಯಿತು. ಟ್ರೈಲರ್‌ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ರಿಲೀಸ್‌ ಆದ ದಿನವೇ 55 ಮಿಲಿಯನ್‌ಗೆ ಹೆಚ್ಚು ವೀಕ್ಷಣೆಯನ್ನು ಟ್ರೈಲರ್‌ ಪಡೆದುಕೊಂಡಿದೆ.

ಟ್ರೈಲರ್‌ ರಿಲೀಸ್‌ ಬಳಿಕ ಸಂಜೆ ಕಾಂತಾರ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ ಸಿನಿಮಾದ ಬಗ್ಗೆ ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿತು. ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಸಿನಿಮಾ ನಿರ್ಮಾಣದಲ್ಲಿನ ಶ್ರಮ ಹಾಗೂ ತಂಡದ ಜವಾಬ್ದಾರಿಯುತ ಕೆಲಸದ ಬಗ್ಗೆ ಮಾತನಾಡಿದರು. ನಟಿ ರುಕ್ಮಿಣಿ ವಸಂತ್‌, ನಿರ್ಮಾಪಕ ವಿಜಯ್‌ ಕಿರಗಂದೂರು, ರಿಷಬ್‌ ಪತ್ನಿ ಪ್ರಗತಿ ಶೆಟ್ಟಿ ಕೂಡ ಸುದ್ದಿಗೋಷ್ಠಿಯಲ್ಲಿ ಸಿನಿಮಾ ಕುರಿತು ಮಾತನಾಡಿದರು.

ಕಾಂತಾರ ಚಾಪ್ಟರ್‌ 1 ಇದೇ ಅಕ್ಟೋಬರ್‌ 2 ರಂದು ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ದೇಶ-ವಿದೇಶಗಳಲ್ಲೂ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲೂ ಸಿನಿಮಾ ರಿಲೀಸ್‌ ಆಗಲಿದೆ.