ಮನೆ ಯೋಗಾಸನ ಕಪಿಂಜಲಾಸನ

ಕಪಿಂಜಲಾಸನ

0

       ‘ಕಪಿಂಜಲ’ ವೆಂದರೆ  ಕೌಜುಗನ ಹಕ್ಕಿ, ಜಾತಕಪಕ್ಷಿಗೂ ಈ ಹೆಸರುಂಟು ಜಾತಕ ಪಕ್ಷಿಯು ಮಳೆಯ ನೀರಹನಿಯನ್ನೋ, ಇಲ್ಲವೇ ಇಬ್ಬನ್ನಿಯನ್ನೋ ಕುಡಿದು ಜೀವಿಸುವಂತದ್ದು.

Join Our Whatsapp Group

       ಈ ಬಂಗಿಯು ‘ವಶಿಷ್ಠಾನ’ ಮತ್ತು ‘ಪಾದಾಂಗುಷ್ಠ ದಂಡಾಸನ ’ ಇವೆರಡನ್ನು ಒಳಗೊಂಡಿದೆ. ಇದರಲ್ಲಿ ನೈಪುಣ್ಯವನ್ನು ಸಾಧಿಸಲು ಬಹುಕಷ್ಟ ಸಾಧ್ಯ.

 ಅಭ್ಯಾಸ ಕ್ರಮ :

1. ಮೊದಲು ‘ತಾಡಾಸನ’ದಲ್ಲಿ ನಿಲ್ಲಬೇಕು. ಬಳಿಕ, ಮುಂಭಾಗಿ ಅಂಗೈಗಳನ್ನು ನೆಲದಮೇಲೂರಿ, ‘ಆಧೋಮುಖ  ಶ್ವಾನಾಸನ’ವನ್ನು ಅಭ್ಯಸಿಸುವ ಬಗೆಯಲ್ಲಿ ಕಾಲುಗಳನ್ನು ನಾಲ್ಕು ಐದು ಅಡಿಗಳಷ್ಟು ದೂರ ಹಿಂಭಾಗಕ್ಕೆ ಸರಿಸಬೇಕು.

2. ಬಳಿಕ, ಇಡೀ ದೇಹವನ್ನು ಬಲಪಕ್ಕಕ್ಕೆ ತಿರುಗಿಸಿ ಅದನ್ನು ಬಲದಂಗೈ ಬಲಗಾಲುಗಳ ಆಧಾರದಮೇಲೆ ಸಮತೋಲಿಸಬೇಕು. ಅಲ್ಲದೇ ಬಲಪಾದದ ಹೊರಬದಿಯನ್ನು ನೆಲದ ಮೇಲೆ ಚೆನ್ನಾಗಿ ಊರಬೇಕು.

3. ಆಮೇಲೆ ಎಡಪಾದವನ್ನು ಬಲಪದಾದ ಮೇಲಿರಿಸಿ, ಎಡದಂಗೈಯನ್ನು ಎಡ ಟೊಂಕದ ಮೇಲಿರಿಸಿ ದೇಹವನ್ನು ಅಲುಗಿಸದಂತೆ  ಸಮತೋಲಿಸಬೇಕು. ದೇಹದ ಬಲಪಕ್ಕವು ಈಗ ‘ವಸಿಷ್ಠಾಸನ’ದ ಭಂಗಿಯಲ್ಲಿರುತ್ತದೆ .

4. ಅನಂತರ ಉಸಿರನ್ನು ಹೊರ ಬಿಟ್ಟು, ಎಡಗಾಲನ್ನು ಮಂಡಿಯಲ್ಲಿ ಭಾಗಿಸಿ, ಎಡಗಾಲಿನುಂಗುಟವನ್ನು ಎಡಗೈ ಹೆಬ್ಬೆರಳು, ತೋರುಬೆರಳು ಮತ್ತು ಉಂಗುರದ ಬೆರಳು ಇವುಗಳಿಂದ ಹಿಡಿದುಕೊಳ್ಳಬೇಕು .

5. ಆ ಬಳಿಕ, ಎಡಮೋಣಕೈ ಮತ್ತು ಎಡಭುಜವನ್ನು ಗುಂಡಗೆ ಸುತ್ತಿಸಿ ಎಡ ದುಂಗುಟದ ಮೇಲಣ ಕೈ ಬಿಗಿತವನ್ನು ಸಡಿಲಿಸಿದಂತೆ  ಎಡತೋಳನ್ನೂ ಎಡಗಲನ್ನೂ ಬೆನ್ನಹಿಂದೆ ಹಿಗ್ಗಿಸಿ ಬಿಲ್ಲಿನಂತೆ ಬಗ್ಗಿಸಿಡಬೇಕು.ಈಗ ಎಡ ತೋಳು,ಎಡಗಾಲು ‘ಪಾದಾಂಗುಷ್ಠ ಧನುರಾಸನ’ದ ಭಂಗಿಯಲ್ಲಿರುತ್ತದೆ.

6. ಬಳಿಕ, ಬಲತೋಳು, ಬಲಗಾಲುಗಳನ್ನು ಬಗ್ಗದಂತೆ ಸೆಳೆದಿಟ್ಟು ಎಡಗಾಲುಂಗುಟ್ಟದ ಮೇಲಿನ ಎಡಗೈ ಬೀತವನ್ನು ಹಾಗೆಯೇ ನಿಲ್ಲಿಸಿ ಕೆಲವು ಸೆಕೆಂಡುಗಳ ಕಾಲ ಸಮತೋಲನ ಸ್ಥಿತಿಯಲ್ಲಿರಿಸಬೇಕು. ಈ ಭಂಗಿಯಲ್ಲಿ ಬೆನ್ನುಹುರಿ, ಎದೆ ಕತ್ತು ಮತ್ತು ಹೆಗಲುಗಳು ಇವು ಪೂರಾ ಹೀಗ್ಗುವುದರಿಂದಲೂ,ಕಿಬ್ಬೊಟ್ಟೆಯು ಕುಗ್ಗುವುದರಿಂದಲೂ ಉಸಿರಾಟದಲ್ಲಿ ಶ್ರಮ ತೋರುತ್ತದೆ.

7. ಈಗ ಎಡದುಂಗುಟದ ಮೇಲಣ ಬಿಗಿತವನ್ನು ಸಡಿಲಿಸಿ, ಎಡಗಾಲನ್ನು ನೇರ ಮಾಡಿ, ಎಡಪಾದವನ್ನು ಬಲ ಪಾದದ ಮೇಲಿಟ್ಟು ಎಡಗೈಯನ್ನು ಎಡಟೊಂಕದ ಮೇಲಿರಿಸಬೇಕು ಆಮೇಲೆ ಎರಡು ಅಂಗೈ, ಅಂಗಾಲುಗಳನ್ನು ಮೇಲಿನ ಒಂದನೆಯದರ ಸ್ಥಿತಿಯಲ್ಲಿ ನೆಲದಮೇಲೆ ಊರಬೇಕು. ಆ ಬಳಿಕ ಇದೇ ಭಂಗಿಯನ್ನು ಇನ್ನೊಂದು ಕಡೆಯೂ ಮಾಡಿ, ಅದರಲ್ಲಿ ಅಷ್ಟೇ ಕಾಲ ನೆಲೆಸಬೇಕು. ಈಗ ದೇಹದ ಎಡಪಕ್ಕವು ‘ವಸಿಷ್ಠಾಸನ’ಭಂಗಿಯಲ್ಲಿರುತ್ತದೆ ಮತ್ತು ಬಲಪಕ್ಕವು ‘ಪಾದಂಗುಷ್ಠಧನುರಾಸನ’ದಲ್ಲಿರುತ್ತದೆ ಮೇಲಿನ ಅಭ್ಯಾಸಕ್ರಮದಲ್ಲಿ ‘ಎಡ’ ‘ಬಲ ‘ ಪಾದಗಳಿದ್ದೆಡೆ ‘ಬಲ’ ‘ಎಡ’ ಪಾದಗಳನ್ನು ಕ್ರಮವಾಗಿ ಅಳವಡಿಸಿ ಅದರಂತೆ ಅಭ್ಯಸಿಸಬೇಕು.

 ಪರಿಣಾಮಗಳು  :

        ಈ ಆಸನದಲ್ಲಿ ಕೈ ಮಣಿಕಟ್ಟುಗಳು ಶಕ್ತಗೊಳ್ಳುವವು. ಅಲ್ಲದೆ ಹೆಗಲಿನೆಲುಬುಗಳು ಒಳ್ಳೆಯ ಅಂಗಮರ್ಧನವನ್ನು ಪಡೆದು, ಭುಜಗಳ ಕೀಲುಗಳ ಪಡುಸತನವು ಈ ಅಭ್ಯಾಸದಿಂದ ಮಾಯವಾಗುವವು. ಜೊತೆಗೆ ಕಾಲುಗಳು ಹುರುಪುಗೊಂಡು ಇಡೀ ಬೆನ್ನುದಂಡಿಯಲ್ಲಿನ  ಎಲುಬಿನ ಶ್ರೇಣಿಗಳು ಇದರಿಂದ ಸಾಕಷ್ಟು ಪ್ರಯೋಜನವನ್ನು ಗಳಿಸುವುವು. ಮತ್ತು ಇದರಲ್ಲಿ ಎದೆಯು ಪೂರಾ ಹಿಗ್ಗಿ, ಕಿಬ್ಬೊಟ್ಟೆಯೊಳಗಿನ  ಮಾಂಸ ಖಂಡಗಳು ಹೆಚ್ಚು ಬಲಗೊಳ್ಳುವು.ಒಟ್ಟಿನಲ್ಲಿ ಇಡೀ ದೇಹವೇ ಇದರಿಂದ ಆರೋಗ್ಯ ಸ್ಥಿತಿಯಲ್ಲಿ ನೆಲೆಸಲು ಹೆಚ್ಚು ಸಹಕಾರವನ್ನು ಪಡೆಯುತ್ತದೆ.