ಮನೆ ದೇವಸ್ಥಾನ ಭೃಗು ಮಹರ್ಷಿಗಳು ಪ್ರತಿಷ್ಠಾಪಿಸಿದ ಮಂಗಳ ಮೂರ್ತಿ ವೆಂಕಟೇಶನ ಸನ್ನಿಧಿ

ಭೃಗು ಮಹರ್ಷಿಗಳು ಪ್ರತಿಷ್ಠಾಪಿಸಿದ ಮಂಗಳ ಮೂರ್ತಿ ವೆಂಕಟೇಶನ ಸನ್ನಿಧಿ

0

ಕರಿಘಟ್ಟ, ಆದಿ ರಂಗನಾಥ ನೆಲೆಸಿಹ ಶ್ರೀರಂಗಪಟ್ಟಣದಿಂದ ಕೇವಲ 4 ಕಿಲೋ ಮೀಟರ್ ದೂರದಲ್ಲಿರುವ ಶ್ರೀನಿವಾಸನ ನೆಲೆವೀಡು.

ಸ್ಥಳ ಪುರಾಣದ ಪ್ರಕಾರ, ಸೀತಾಪಹರಣ ಮಾಡಿದ್ದ ಲಂಕೇಶನ ಸಂಹರಿಸಲು ಸಮುದ್ರಕ್ಕೆ ಸೇತುವೆ ಕಟ್ಟಲು ಶ್ರೀರಾಮಚಂದ್ರ ತೀರ್ಮಾನಿಸಿದಾಗ, ಆಂಜನೇಯ, ಸುಗ್ರೀವ, ಅಂಗದನೇ ಮೊದಲಾದ ವಾನರ ಶ್ರೇಷ್ಠರು ದೊಡ್ಡ ದೊಡ್ಡ ಬೆಟ್ಟಗಳನ್ನೇ ಕಿತ್ತು ರಾಮೇಶ್ವರಕ್ಕೆ ಹೊತ್ತೊಯ್ದರಂತೆ. ಆಗ ಸುಗ್ರೀವ ಕೂಡ ತಿರುಮಲೆಯ ಗಿರಿಶ್ರೇಣಿಯಲ್ಲಿದ್ದ ನೀಲಾಚಲವೆಂಬ ಬೆಟ್ಟ ಕಿತ್ತು ಹೊತ್ತೊಯ್ಯುತ್ತಿದ್ದಾಗ, ಲೋಕಪಾವನಿ ಮತ್ತು ಕಾವೇರಿಯ ಸಂಗಮ ಸ್ಥಳ (ಈಗಿನ ಕರಿಘಟ್ಟ)ದಲ್ಲಿ ತಪಸ್ಸು ಆಚರಿಸುತ್ತಿದ್ದ ಋಷಿ ಮುನಿಗಳು, ಇದು ನೀಲಾಚಲ ಇದು ಶ್ರೇಷ್ಠ ಗಿರಿ ಇದನ್ನು ಸೇತುವೆ ನಿರ್ಮಾಣಕ್ಕೆ ಬಳಸುವುದು ಸೂಕ್ತವಲ್ಲ ಎಂದರಂತೆ. ಆಗ ಸುಗ್ರೀವ ಬೆಟ್ಟವನ್ನು ಅಲ್ಲಿಯೇ ಬಿಟ್ಟು ಹೋದನಂತೆ ಅದುವೇ ಕರಿಘಟ್ಟ ಬೆಟ್ಟ ಎಂದು ಹೇಳಲಾಗುತ್ತದೆ.

ಸ್ಥಳ ಪುರಾಣದ ರೀತ್ಯ ಬ್ರಹ್ಮಪುತ್ರ ಭೃಗು ಮಹರ್ಷಿಗಳ ಪತ್ನಿ ಖ್ಯಾತಿ ಮಗನ ಮೇಲಿನ ವ್ಯಾಮೋಹದಿಂದ ರಾಕ್ಷಸರ ಬಗ್ಗೆ ಪ್ರೀತ್ಯಾದರಗಳನ್ನು ಹೊಂದಿದ್ದಳಂತೆ. ಇದರಿಂದ ಕುಪಿತನಾದ ವಿಷ್ಣು ಆಕೆಯ ಸಂಹಾರ ಮಾಡಿದನಂತೆ. ಪತ್ನಿ ವಿಯೋಗದಿಂದ ನೊಂದ ಭೃಗು ಮಹರ್ಷಿಗಳು ವಿಷ್ಣುವಿಗೆ ನೀನೂ ಕೂಡ ಭೂಮಿಯಲ್ಲಿ ಹುಟ್ಟಿ, ಪತ್ನಿ ವಿಯೋಗದಿಂದ ಪರಿತಪಿಸು ಎಂದು ಶಾಪ ನೀಡಿದರಂತೆ. ಆ ನಂತರ  ತಮ್ಮ ತಪ್ಪನ್ನು ಅರಿತ ಭೃಗು ಮಹರ್ಷಿಗಳು ಕಾವೇರಿ ಮತ್ತು ಲೋಕಪಾವನಿ ನದಿಗಳ ಸಂಗಮ ಸ್ಥಳವಾದ ಕರಿಘಟ್ಟದಲ್ಲಿ ತಪಸ್ಸು ಆಚರಿಸಿದ್ದರಂತೆ.   ಭೃಗು ಮಹರ್ಷಿಗಳಿಗೆ ನಾರಾಯಣ ಶ್ರೀನಿವಾಸನ ಅಥವಾ ವೆಂಕಟರಮಣನ ರೂಪದಲ್ಲಿ ಈ ಬೆಟ್ಟದ ಮೇಲೆ ದರ್ಶನ ನೀಡಿದನಂತೆ. ಅವರೇ ಬೆಟ್ಟದ ತುದಿಯಲ್ಲಿ ಶ್ರೀನಿವಾಸ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿ, ಈ ಬೆಟ್ಟದಲ್ಲಿ ನೆಲೆಸುವಂತೆ ವಿಷ್ಣುವನ್ನು ಪ್ರಾರ್ಥಿಸಿದರಂತೆ. ಅದಕ್ಕೆ ವಿಷ್ಣು ಒಪ್ಪಿ ಕರಿಘಟ್ಟದಲ್ಲಿ ನೆಲೆಸಿಹ ಎಂದು ತಿಳಿದುಬರುತ್ತದೆ.

ಅತ್ರಿ ಮಹಾಮುನಿಯ ಪುತ್ರ ಚಂದ್ರ ಕೂಡ, ತಾರೆಯನ್ನು ಮೋಹಿಸಿದ ಪಾಪದ ಪ್ರಾಯಶ್ಚಿತ್ತವಾಗಿ ಪಶ್ಚಿಮವಾಹಿನಿಯಲ್ಲಿ ಮಿಂದು ಕರಿಘಟ್ಟ (ನೀಲಾಚಲ) ದರ್ಶನ ಮಾಡಿ ಪಾಪ ಪರಿಹಾರ ಹೊಂದಿದ ಎಂದೂ ಸ್ಥಳ ಪುರಾಣದಲ್ಲಿ ಉಲ್ಲೇಖವಾಗಿದೆ. ಬೋಧಾಯನ ಮಹರ್ಷಿಗಳು ಕೂಡ ಸಂಗಮದಲ್ಲಿ ಮಿಂದು ಗಿರಿಯಲ್ಲಿ ತಪವನ್ನಾಚರಿಸಿ, ಇಲ್ಲಿಯೇ ಬೋಧಾಯನ ಧರ್ಮಸೂತ್ರ ಬರೆದರು. ವೈಖಾನಸ ಮಹಾಮುನಿ 24ನೇ ತ್ರೇತಾಯುಗದಲ್ಲಿ ಇಲ್ಲಿ ಶ್ರೀನಿವಾಸ ದೇವರಿಗೆ ಫಾಲ್ಗುಣ ಶುಭ ನಕ್ಷತ್ರದಲ್ಲಿ ಪ್ರಥಮ ರಥೋತ್ಸವ ನಡೆಸಿದರು ಎಂದೂ ಹೇಳಲಾಗುತ್ತದೆ. ಈಗಲೂ ಫಾಲ್ಗುಣದಲ್ಲಿ ಇಲ್ಲಿ ರಥೋತ್ಸವ ನಡೆಯುತ್ತದೆ.

ಇಷ್ಟು ಪುರಾತನವಾದ ಹಾಗೂ ಪವಿತ್ರವಾದ ಕರಿಘಟ್ಟದಲ್ಲಿದ್ದ ಶ್ರೀನಿವಾಸ ವಿಗ್ರಹಕ್ಕೆ ಜೋಳರಾಜರ ಕಾಲದಲ್ಲಿ ದೇವಾಲಯ ನಿರ್ಮಿಸಲಾಯಿತು ಎಂದು ಇತಿಹಾಸ ಸಾರುತ್ತದೆ. ಮೈಸೂರಿನ ಅರಸರಾಗಿದ್ದ ಚಿಕ್ಕದೇವರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದ್ದು, ಈಗ ದೇವಾಲಯ ದ್ರಾವಿಡ ಶೈಲಿಯಲ್ಲಿದೆ. ಕಾವೇರಿ-ಲೋಕಪಾವನಿ ನದಿಗಳ ಸಂಗಮ ಸ್ಥಳದಿಂದ ಬೆಟ್ಟದ ಮೇಲಿನ ದೇವಾಲಯಕ್ಕೆ ಹೋಗಲು 450 ಮೆಟ್ಟಿಲು ನಿರ್ಮಿಸಲಾಗಿದೆ. ಬೆಟ್ಟ ಹತ್ತುವ ಭಕ್ತರ ಆಯಾಸ ತಣಿಸಲು ಮಧ್ಯದಲ್ಲಿ ಅರವಟ್ಟಿಗೆಗಳನ್ನೂ ನಿರ್ಮಿಸಲಾಗಿದೆ.  

ಪ್ರಧಾನ ಗರ್ಭಗೃಹದಲ್ಲಿ  ಒಂದೂವರೆ ಅಡಿ ಎತ್ತರದ ಪೀಠದ ಮೇಲೆ ಆರೂವರೆ ಅಡಿ ಎತ್ತರದ ಕೃಷ್ಣ ಸಾಲಿಗ್ರಾಮಶಿಲೆಯ ಅತ್ಯಂತ ಸುಂದರವಾದ ಶ್ರೀನಿವಾಸ ದೇವರ  ವಿಗ್ರಹವಿದೆ. ಪೀಠದಲ್ಲಿ ಗರುಡನ ಕೆತ್ತನೆ ಇದೆ. ಶಂಖ, ಚಕ್ರ, ಹಾಗೂ ವರದ ಮುದ್ರೆಯಲ್ಲಿರುವ ಮೂರ್ತಿ ಪುಷ್ಪಾಲಂಕಾರದಲ್ಲಿ ತಿರುಪತಿಯ ತಿಮ್ಮಪ್ಪನನ್ನೇ ನೋಡಿದಂತೆ ಆಗುತ್ತದೆ.  ಮೂಲ ವಿಗ್ರಹದ ಬಲ ಬದಿಯ ಗುಡಿಯಲ್ಲಿ ಯೋಗ ಶ್ರೀನಿವಾಸ ಹಾಗೂ ಎಡ ಭಾಗದಲ್ಲಿ, ಭೋಗ ಶ್ರೀನಿವಾಸನ ವಿಗ್ರಹಗಳಿವೆ.  ಪದ್ಮಾವತಿ ಹಾಗೂ ಲಕ್ಷ್ಮೀ ಅಮ್ಮನವರಿಗೆ ಹಾಗೂ ಆಂಜನೇಯನಿಗೆ ಪ್ರತ್ಯೇಕ ಗುಡಿಯೂ ಇದೆ. ಗರ್ಭಗೃಹದ ಎದುರು ನೇರವಾಗಿ ದೇವಾಲಯದ ಪ್ರವೇಶ ದ್ವಾರದ ಹೊರಗೆ ಬೃಹತ್ ಗರುಡನ ಮೂರ್ತಿಯಿದೆ.

ಕರಿಘಟ್ಟಕ್ಕೆ ಹಿಂದೆ ಕರಿಗಿರಿ ಎಂಬ ಹೆಸರಿತ್ತಂತೆ. ಈ ಬೆಟ್ಟದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಇದ್ದ ಕಾರಣ ಇದಕ್ಕೆ ಕರಿಗಿರಿ ಎಂಬ ಹೆಸರು ಬಂದಿತ್ತು ಎಂದು ಕೆಲವರು ಹೇಳಿದರೆ, ಇಲ್ಲ, ಬೆಟ್ಟದ ಕಬ್ಬರಿಯಲ್ಲಿ ಕರಿಯ ಹುಲ್ಲು ಇರುವ ಕಾರಣ ಇದಕ್ಕೆ ಕರಿಗಿರಿ ಎಂಬ ಹೆಸರಿತ್ತು ಎಂದು ಮತ್ತೆ ಕೆಲವರು ವಾದಿಸುತ್ತಾರೆ. ಸಮುದ್ರ ಮಟ್ಟದಿಂದ 2697 ಅಡಿ ಎತ್ತರ ಇರುವ ಬೆಟ್ಟದ ತುದಿ ನೀಲಾಗಸಕ್ಕೆ ಮುತ್ತಿಡುವಂತೆ ಕಾಣುವ ಕಾರಣ ಇದಕ್ಕೆ ನೀಲಾಚಲ ಎಂಬ ಹೆಸರೂ ಇತ್ತಂತೆ. ಪ್ರಕೃತಿ ರಮಣೀಯವಾದ ಈ ತಾಣದಲ್ಲಿ ಕಾವೇರಿ ಅಂಕುಡೊಂಕಾಗಿ ಹರಿಯುವುದನ್ನು ನೋಡುವುದೇ ಸೊಬಗು. 

ಬೆಟ್ಟದ ಮೇಲೆ ನಿಂತರೆ ಮೈಸೂರು ಚಾಮುಂಡಿ ಬೆಟ್ಟ, ಪಾಂಡವಪುರದ ಕುಂತಿಬೆಟ್ಟ, ಮೇಲುಕೋಟೆಯ ನರಸಿಂಹಸ್ವಾಮಿ ಬೆಟ್ಟ ಕಾಣುತ್ತದೆ. ಕರಿಘಟ್ಟ, ಶ್ರೀನಿವಾಸನ ಗುಡ್ಡ, ಕಾವಲು ಗೋಪುರ ಗುಡ್ಡ ಹಾಗೂ ಚಿನ್ನಾಯಕನಹಳ್ಳಿ ಗುಡ್ಡ ಎಂಬ ಮೂರು ಪುಟ್ಟ ಗುಡ್ಡಗಳನ್ನು ಒಳಗೊಂಡಿದೆ.

ದೇವಾಲಯದ ಪೂರ್ವದಲ್ಲಿ ಗುಡ್ಡ ಹತ್ತಿದರೆ ಟಿಪ್ಪು ಕಟ್ಟಿಸಿದ ಕೋಟೆಯ ಅವಶೇಷಗಳು ಕಾಣುತ್ತವಂತೆ. ಆದರೆ ಇದರ ಚಾರಣ ಅಪಾಯಕಾರಿ ಎಂದು ಎಚ್ಚರಿಕೆಯನ್ನೂ ಸ್ಥಳೀಯರು ನೀಡುತ್ತಾರೆ. ಇದನ್ನು ಕೋಟೆ ಬೆಟ್ಟ, ಕಾವಲು ಗೋಪುರ ಗುಡ್ಡ ಎಂದೂ ಕರೆಯುತ್ತಾರೆ.

ಶ್ರೀರಂಗನಾಥನ ನೆಲೆವೀಡು ಶ್ರೀರಂಗಪಟ್ಟಣಕ್ಕೆ ಕೇವಲ 4 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ. ಮೈಸೂರಿನಿಂದ ಕರಿಘಟ್ಟಕ್ಕೆ 22 ಕಿ.ಮೀ. ಬೆಂಗಳೂರುನಿಂದ ಮೈಸೂರಿಗೆ ಹೋಗುವ ಹೆದ್ದಾರಿಯಲ್ಲಿ ಬನ್ನೂರು ರಸ್ತೆಯಲ್ಲಿ ಎಡಕ್ಕೆ ತಿರುಗಿ ಒಂದು ಕಿಲೋ ಮೀಟರ್ ಸಾಗಿದರೆ ಬೆಟ್ಟಕ್ಕೆ ಹೋಗಬಹುದು..

ಪ್ರತಿ ದಿನ ಈ ದೇವಾಲಯ ಬೆಳಗ್ಗೆ 10ರಿಂದ 2 ಗಂಟೆಯವರೆಗೆ ತೆರೆದಿರುತ್ತದೆ. ರಜಾದಿನಗಳಲ್ಲಿ ಹಾಗೂ ಭಾನುವಾರ ಬೆಳಗ್ಗೆ 9ರಿಂದು ಸಂಜೆ 6ರವರೆಗೆ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗೆ ದೇವಾಲಯದ ಅರ್ಚಕರಾದ ಶ್ರೀ. ಅಭಿ ಅಯ್ಯಂಗಾರ್ ಅವರನ್ನು ದೂರವಾಣಿ ಸಂಖ್ಯೆ 9341198456ರಲ್ಲಿ ಸಂಪರ್ಕಿಸಬಹುದು.