ಮೈಸೂರು: ತಮಿಳುನಾಡಿಗೆ ಪ್ರತಿನಿತ್ಯ 5000 ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶಿಸಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದು ಪಡಿಸಬೇಕೆಂದು ಒತ್ತಾಯಿಸಿ ಇಂದು ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಕರ್ನಾಟಕ ಸೇನಾಪಡೆ ವತಿಯಿಂದ ಗೋವಿಂದ ಎಂದು ಕೂಗಿ ಗಂಟೆ ಶಂಖ ಬಾರಿಸಿ ಚಳವಳಿಯನ್ನು ನಡೆಸಲಾಯಿತು.
ಕೇಂದ್ರ ಸರ್ಕಾರ ಹಿಂದೆ ತಮಿಳುನಾಡಿನ ನಾಯಕರು ಹಾಗೂ ಸರಕಾರದ ಒತ್ತಡಕ್ಕೆ ಮಣಿದು ಕಾವೇರಿ ನೀರು ನಿರ್ಮಾಣ ಪ್ರಾಧಿಕಾರವನ್ನು ರಚನೆ ಮಾಡಿರುವುದೇ ಅತ್ಯಂತ ಖಂಡನೀಯ ಹಾಗೂ ರಾಜ್ಯಕ್ಕೆ ಮರಣ ಶಾಸನವಾಗಿದೆ. ಮೈಸೂರು ಅರಸರ ಕಾಲದಲ್ಲಿ ಈ ಅಣೆಕಟ್ಟು ನಿರ್ಮಿಸುವಾಗಿನಿಂದ ತಮಿಳುನಾಡು ಸರ್ಕಾರಗಳು ಇಲ್ಲಿಯವರೆಗೂ ನಮ್ಮ ರಾಜ್ಯಕ್ಕೆ ಬಹಳ ತೊಂದರೆ ಕೊಡುತ್ತಿವೆ. ಆಗಿನ ಕಾಲದಿಂದಲೂ ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಲೇ ಇದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈಗ ಇತ್ತೀಚೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿರುವುದೇ ತಮಿಳುನಾಡಿಗಾಗಿ ಅನ್ನುವಂತಿದೆ ಹಾಗೂ ತಮಿಳುನಾಡಿನ ಹಿತ ರಕ್ಷಣೆಗೆ ಇರುವಂತಿದೆ ಈ ಪ್ರಾಧಿಕಾರ. ಸ್ವಾಭಾವಿಕವಾಗಿ ಪ್ರತಿ ವರ್ಷ ಸರಿಯಾಗಿ ಮಳೆಯಾದಲ್,ಲಿ ಕಾವೇರಿ ನೀರು ನಮ್ಮ ರಾಜ್ಯದಿಂದ ತಮಿಳ್ನಾಡಿಗೆ ಪ್ರಮಾಣಕ್ಕಿಂತ ಹೆಚ್ಚಾಗಿಯೇ ಹರಿಸಲಾಗುತ್ತದೆ. ಆದರೆ ಈ ವರ್ಷ ಮಳೆ ಸರಿಯಾಗಿ ಬಾರದೆ, ನಮ್ಮ ರಾಜ್ಯ ಕಷ್ಟದಲ್ಲಿದೆ. ನಮಗೆ ಮುಂದಿನ ದಿನಗಳಲ್ಲಿ ಕುಡಿಯಲು ನೀರು ಸಿಗುವುದಿಲ್ಲ, ಬೆಂಗಳೂರಿನಲ್ಲಂತೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಮ್ಮ ರಾಜ್ಯದ ಜಲಾಶಯಗಳ ವಸ್ತು ಸ್ಥಿತಿ ( ನೀರು ಇದೆಯೇ ಅಥವಾ ಇಲ್ಲವೇ ಎಂದು ಅಧ್ಯಯನ ಮಾಡಿ) ಜಲಾಶಯಗಳ ನೀರಿನ ಮಟ್ಟ ನೋಡಿ ತದನಂತರ ನೀರು ಬಿಡಲು ಆದೇಶಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಕೆ ಆರ್ ಎಸ್ ಡ್ಯಾಮ್ ನಲ್ಲಿ 113 ಅಡಿ ಇದ್ದ ನೀರು 100 ಅಡಿಗೆ ಕುಸಿದಿದೆ. ನಮ್ಮ ರಾಜ್ಯದಲ್ಲಿ ಈಗ 28 ಜನ ಸಂಸದರು, 11 ರಾಜ್ಯಸಭಾ ಸದಸ್ಯರು ಹಾಗೂ ನಾಲ್ಕು ಕೇಂದ್ರ ಮಂತ್ರಿಗಳಿದ್ದಾರೆ. ಇವರುಗಳು ಈ ಕೂಡಲೇ ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಮ್ಮ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಮನವರಿಕೆ ಮಾಡಿಸಿ ನೀರು ಬಿಡದಂತೆ ಹೋರಾಟ ಮಾಡಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಹಿತ ರಕ್ಷಣೆಯನ್ನು ಕಾಪಾಡದೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಜೊತೆ ಸೇರಿ, ಲೋಕಸಭಾ ಚುನಾವಣೆಗಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಈ ಕೂಡಲೇ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತಿದ್ದೇವೆ.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿ, ಗೋಲ್ಡ್ ಸುರೇಶ್, ಜೂ.ವಿಷ್ಣು(ರಘು), ಪ್ರಭುಶಂಕರ, ವಿಜಯೇಂದ್ರ, ಕೃಷ್ಣಯ್ಯ ಸಿ ಹೆಚ್, ಡಾ. ಶಾಂತರಾಜೇಅರಸ್, ಅಂಬಾಅರಸ್, ನೇಹಾ, ಒಲಂಪಿಯ ರವಿ, ಮಿನಿ ಬಂಗಾರಪ್ಪ,, ಎಳನೀರು ರಾಮಣ್ಣ, ದರ್ಶನ್ ಗೌಡ, ರಾಧಾಕೃಷ್ಣ, ಪ್ರಭಾಕರ, ವೆಂಕಟೇಶ್, ಗಣೇಶ್ ಪ್ರಸಾದ್, ರವಿ ನಾಯಕ್, ಶಿವಲಿಂಗಯ್ಯ, ಸ್ವಾಮಿ, ಹನುಮಂತಯ್ಯ ಇನ್ನೂ ಮುಂತಾದವರು ಉಪಸ್ಥಿತರಿದ್ದರು .