ಮನೆ ರಾಜಕೀಯ 74 ಕೇಂದ್ರ ಮತ್ತು ರಾಜ್ಯ ಅಧಿನಿಯಮಗಳ ಕನ್ನಡ ಆವೃತ್ತಿ ಲೋಕಾರ್ಪಣೆ

74 ಕೇಂದ್ರ ಮತ್ತು ರಾಜ್ಯ ಅಧಿನಿಯಮಗಳ ಕನ್ನಡ ಆವೃತ್ತಿ ಲೋಕಾರ್ಪಣೆ

ಕೇಂದ್ರ/ರಾಜ್ಯ ಅಧಿನಿಯಮಗಳ ಭಾಷಾಂತರ ಕರ್ನಾಟಕದಲ್ಲಿ ವಿಶೇಷ ಒತ್ತು:ಸಚಿವ ಜೆ.ಸಿ.ಮಾಧುಸ್ವಾಮಿ

0

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರದ ಕಾಯ್ದೆ ಮತ್ತು ಕಾನೂನುಗಳು ಜನಸಾಮಾನ್ಯರಿಗೆ ಸ್ಥಳೀಯ ಭಾಷೆಯಲ್ಲಿ ಒದಗಿಸುವ ಮೂಲಕ ಕಾನೂನಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಸಿದ್ದಪಡಿಸಲಾದ 42 ಕೇಂದ್ರ ಅಧಿನಿಯಮಗಳು ಹಾಗೂ 32 ರಾಜ್ಯ ಅಧಿನಿಯಮಗಳ ಕನ್ನಡ ಆವೃತ್ತಿಗಳನ್ನು ಕಾನೂನು,ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸೋಮವಾರ ಲೋಕಾರ್ಪಣೆ ಮಾಡಿದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ರಾಜಭಾಷಾ(ವಿಧಾಯೀ) ಆಯೋಗ ಹಾಗೂ ಭಾಷಾಂತರ ನಿರ್ದೇಶನಾಲಯದಿಂದ ಈ ಅಧಿನಿಯಮಗಳ ಕನ್ನಡ ಆವೃತ್ತಿ ಸಿದ್ದಪಡಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿನ ಅನುಷ್ಠಾನ ಮತ್ತು ಪಾಲನೆ ಮಾಡಬೇಕಾದರೇ ಅದರ ಅರಿವು ಬಹಳ ಮುಖ್ಯ; ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಸ್ಥಳೀಯ ಭಾಷೆಯಲ್ಲಿ ಒದಗಿಸಿ ಅರ್ಥೈಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿನಿಯಮಗಳನ್ನು ಕನ್ನಡಕ್ಕೆ ಭಾಷಾಂತರಗೊಳಿಸಲಾಗಿದೆ ಎಂದರು.

ಜನಸಾಮಾನ್ಯರಿಗೆ ತಮ್ಮ ಸ್ಥಳೀಯ ಭಾಷೆಗಳಲ್ಲಿ ಕಾನೂನುಗಳನ್ನು ತಿಳಿದುಕೊಳ್ಳಲು ಹಾಗೂ ನ್ಯಾಯಾಲಯಗಳಲ್ಲಿ,ನ್ಯಾಯಾಧೀಕರಣಗಳಲ್ಲಿ ಸರಕಾರದ ಕಚೇರಿಗಳಲ್ಲಿ ಕನ್ನಡದ ಬಳಕೆಯನ್ನು ಸುಗಮಗೊಳಿಸಲು ಈ ಅಧಿನಿಯಮಗಳು ತುಂಬಾ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಚಿವ ಮಾಧುಸ್ವಾಮಿ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿನಿಯಮಗಳನ್ನು ಭಾಷಾಂತರಿಸುವ ಕೆಲಸ ವ್ಯಾಪಕವಾಗಿ ಆಗಬೇಕಿದೆ ಎಂದರು.

ಕೇಂದ್ರ ಮತ್ತು ರಾಜ್ಯದ ಅಧಿನಿಯಮಗಳನ್ನು ಭಾಷಾಂತರಿಸುವುದಕ್ಕೆ ಕರ್ನಾಟಕದಲ್ಲಿ ವಿಶೇಷ ಒತ್ತು ನೀಡಲಾಗಿದ್ದು,ಕೇಂದ್ರ ಸರಕಾರವೇ ಶ್ಲಾಘಿಸಿದೆ ಎಂದರು.

ಜನರು ಕಾಯ್ದೆ,ಕಾನೂನುಗಳನ್ನು ಹೆಚ್ಚೆಚ್ಚು ತಿಳಿದುಕೊಂಡಲ್ಲಿ ಅವುಗಳ ಪರಿಣಾಮಕಾರಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕದ ನ್ಯಾಯಾಲಯಗಳಲ್ಲಿ ಕನ್ನಡದ ತೀರ್ಪುಗಳು ಹೊರಬರಲು ಹಾಗೂ ಆಡಳಿತ ವ್ಯವಹಾರಗಳಲ್ಲಿ ಮತ್ತು ಮೊಕದ್ದಮೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲೂ ಕೂಡ ಕನ್ನಡದ ಬಳಕೆ ಸಮರ್ಪಕವಾಗಿ ಆಗಬೇಕಾಗಿದೆ ಎಂದರು.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸರಕಾರದ ಕಾರ್ಯದರ್ಶಿಗಳು ಹಾಗೂ ರಾಜಭಾಷಾ(ವಿಧಾಯೀ) ಆಯೋಗದ ಅಧ್ಯಕ್ಷರಾದ ಜಿ.ಶ್ರೀಧರ್ ಅವರು ಮಾತನಾಡಿ, ರಾಜಭಾಷಾ(ವಿಧಾಯೀ) ಆಯೋಗವು ಇಲ್ಲಿಯವರೆಗೆ 371 ಕೇಂದ್ರ ಮತ್ತು 219 ರಾಜ್ಯ ಅಧಿನಿಯಮಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ಪ್ರಕಟಿಸಿದೆ. ಭಾರತ ಸಂವಿಧಾನವನ್ನು ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸ್ಥಳೀಯ ಭಾಷೆಯಲ್ಲಿ ಭಾಷಾಂತರಿಸಿ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ನಮ್ಮ ಆಯೋಗಕ್ಕೆ ಸಲ್ಲುತ್ತದೆ ಎಂದರು.

ದೇಶದ ಪ್ರಮುಖ ಕಾನೂನುಗಳಾದ ಭಾರತ ದಂಡ ಸಂಹಿತೆ,ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಭಾರತ ಸಾಕ್ಷ್ಯ ಅಧಿನಿಯಮಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ದ್ವೀಭಾಷೆಯಲ್ಲಿ ಪ್ರಕಟಿಸಲಾಗಿದೆ. ಪರಿಷ್ಕೃತ ಇಂಗ್ಲೀಷ್ ಕನ್ನಡ ಕಾನೂನು ಪದಕೋಶ ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದು,ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ತರಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಈ ರೀತಿಯ  ಕೆಲಸ ಎಲ್ಲ ರಾಜ್ಯಗಳಲ್ಲಾಗಿದ್ದರೇ ಸ್ಥಳೀಯ ಭಾಷೆಯ್ಲಿ ನ್ಯಾಯಾಲಯ ತೀರ್ಪುಗಳನ್ನು ಪ್ರಕಟಿಸಲು ಸಹಾಯಕವಾಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದನ್ನು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವರಾದ ಸಿ.ಎನ್.ಅಶ್ವತ್ ನಾರಾಯಣ,ಶಾಸಕರಾದ ದಿನಕರಶೆಟ್ಟಿ, ಭಾಷಾಂತರ ನಿರ್ದೇಶನಾಲಯದ ನಿರ್ದೇಶಕ ಎಂ.ವೆಂಕಟೇಶ, ರಾಜಭಾಷಾ(ವಿಧಾಯೀ) ಆಯೋಗದ ಸದಸ್ಯರುಗಳು ಇದ್ದರು.

ಪಾಸ್‍’ಪೋರ್ಟ್ ಅಧಿನಿಯಮ 1967,ಕೊಳಗೇರಿಗಳ (ಸುಧಾರಣೆ ಮತ್ತು ತೆರವು)ಅಧಿನಿಯಮ 1956,ಪ್ರಸಾರ ಭಾರತಿ(ಭಾರತ ಪ್ರಸಾರಣ ನಿಗಮ)ಅಧಿನಿಯಮ 1990, ರಾಷ್ಟ್ರೀಯ ಭದ್ರತಾ ಪಡೆ ಅಧಿನಿಯಮ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕಾನೂನು ಮಾಪನ ವಿಜ್ಞಾನ ಅಧಿನಿಯಮ, ಕರ್ನಾಟಕ ಪೊಲೀಸ್ ಅಧಿನಿಯಮ,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ ಸೇರಿದಂತೆ ಅನೇಕ ಪ್ರಮುಖ ಅಧಿನಿಯಮಗಳನ್ನು ಭಾಷಾಂತರಿಸಲಾಗಿದೆ.

ಹಿಂದಿನ ಲೇಖನ ಜನರ ಮನ ಗೆದ್ದ “ದೂರದರ್ಶನ”: ಮಾರ್ಚ್ 3 ರಂದು ಚಿತ್ರ ತೆರೆಗೆ
ಮುಂದಿನ ಲೇಖನಈಗಿನ ಆಸ್ಟ್ರೇಲಿಯಾದ ತಂಡದಲ್ಲಿ ಧಮ್ ಇಲ್ಲ: ಹರ್ಭಜನ್ ಸಿಂಗ್