ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆರ್‌ಸಿಬಿ ಐಪಿಎಲ್ ವಿಜಯೋತ್ಸವ ಕಾರ್ಯಕ್ರಮದ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಹನ್ನೊಂದು ಮಂದಿ ಮೃತರಾದ ಘಟನೆಗೆ ಸಂಬಂಧಿಸಿದ ಎಫ್‌ಐಆರ್ ಅನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಇದೀಗ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದೆ.
ಐಪಿಎಲ್ ಟ್ರೋಫಿ ವಿಜೇತ ಆರ್‌ಸಿಬಿ ತಂಡದ ವಿಜಯೋತ್ಸವದ ಅಂಗವಾಗಿ ಸಾವಿರಾರು ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಗೆ ಆಗಮಿಸಿದ್ದರು. ಆದರೆ ಜನಸಾಗರದ ನಿಯಂತ್ರಣ ತಪ್ಪಿ, ಅವ್ಯವಸ್ಥೆಯಾಗಿ, ದುರಂತದಲ್ಲಿ 11 ಜನರು ಮೃತಪಟ್ಟರು ಮತ್ತು ಹಲವರು ಗಾಯಗೊಂಡರು.
ಈ ಕುರಿತು ಆಯೋಜನಾ ದೌರ್ಬಲ್ಯ ಮತ್ತು ಭದ್ರತಾ ನಿರ್ಲಕ್ಷ್ಯದ ಆರೋಪದ ಮೇಲೆ, ಬೆಂಗಳೂರು ನಗರ ಪೊಲೀಸರು ಆರ್‌ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಈಗಾಗಲೇ ಕೆಲವು ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು, ಮುಖ್ಯ ಆರೋಪಿಗಳು ಪರಾರಿಯಾಗಿದ್ದಾರೆ.
ಇದೀಗ ಕೆಎಸ್‌ಸಿಎ ವಿರುದ್ಧ ದಾಖಲಿಸಲಾದ ಎಫ್‌ಐಆರ್ ಅನ್ನು ಪ್ರಶ್ನಿಸಿ ಇಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಹೈಕೋರ್ಟ್ ಮೆಟ್ಟಿಲೇರಿದೆ.














