ಬೆಂಗಳೂರು: ರಾಜ್ಯದಲ್ಲಿ ಡಿಜಿಟಲ್ ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಪ್ರಕ್ರಿಯೆ ವೇಗವಾಗಿ ಸಾಗುತ್ತಿದ್ದು, ಇಡೀ ಜಗತ್ತಿನಲ್ಲಿ ಕರ್ನಾಟಕ ಮುಂಚೂಣಿ ಮತ್ತು ಮಾದರಿ ರಾಜ್ಯವಾಗಿ ಹೊರಹೊಮ್ಮಲಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.
ಅತ್ಯಾಧುನಿಕ ಡಿಜಿಟಲ್ ಆರೋಗ್ಯ ಆರೈಕೆ, ನಾವೀನ್ಯತೆ, ಸಂಶೋಧನೆ ಮತ್ತು ಉದ್ಯಮಶೀಲತೆ ಕುರಿತು ಬೆಂಗಳೂರಿನ ಹೊಟೇಲ್ ಚಾನ್ಸರಿ ಪೆವಿಲಿಯನ್ ನಲ್ಲಿ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮ್ಯಾನೇಜ್ ಮೆಂಟ್ [ಐಐಎಚ್’ಎಂಆರ್] ನಿಂದ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ನಂತರ ಭಾರತ ಡಿಜಿಟಲ್ ಆರೋಗ್ಯ ವಲಯದ ಪರಿವರ್ತನೆಯಲ್ಲಿ ಮೊದಲ ಅಗ್ರಗಣ್ಯ ದೇಶವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಡಿಜಿಟಲ್ ಆರೋಗ್ಯ ಅಭಿಯಾನದಲ್ಲಿ ಮಹತ್ವದ ಸಾಧನೆ ಮಾಡುತ್ತಿದ್ದು, ಹಲವಾರು ಜನೋಪಯೋಗಿ ಉಪಕ್ರಮಗಳನ್ನು ದೇಶದಲ್ಲಿಯೇ ಮಾದರಿಯಾಗಿ ಅಳವಡಿಸಿಕೊಂಡಿದೆ. ಇದೀಗ ಖಾಸಗಿ ಆರೋಗ್ಯ ವಲಯ, ವೃತ್ತಿಪರರು ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮದಾಗಬೇಕು. ಖಾಸಗಿ ವಲಯದ ನಾವೀನ್ಯತೆಯ ವಿಶೇಷ ಕ್ರಮಗಳನ್ನು ಸರ್ಕಾರ ಕೂಡ ಅಳವಡಿಸಿಕೊಳ್ಳಲು ಸಿದ್ಧವಿದೆ ಎಂದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಹೊರರೋಗಿ ವಿಭಾಗದಲ್ಲಿ ರೋಗಿಗಳ ಒತ್ತಡವನ್ನು ತಗ್ಗಿಸಲು ಫಾಸ್ಟ್ ಟ್ರ್ಯಾಕ್ ಕೌಂಟರ್ ಗಳನ್ನು ತೆರೆಯಲಾಗುತ್ತಿದೆ. ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವ ರೋಗಿ ಒಪಿಡಿ ಕೇಂದ್ರಗಳಿಗೆ ಬಂದು ಮೊಬೈಲ್ ನಿಂದ ಸ್ಕ್ಯಾನ್ ಮಾಡಿದರೆ ಅವರ ಎಲ್ಲಾ ದಾಖಲೆಗಳು 30 ಸೆಕೆಂಡ್ ಗಳಲ್ಲಿ ದೊರೆಯಲಿದೆ. ಆಭಾ ಕಾರ್ಡ್ ಗಳು ಇಲ್ಲದಿದ್ದರೆ ತಕ್ಷಣವೇ ಕಾರ್ಡ್ ಗಳನ್ನು ಪಡೆಯಲು ಸಹ ವ್ಯವಸ್ಥೆ ಮಾಡಲಾಗಿದೆ. ರೋಗಿ ಸ್ಕ್ಯಾನ್ ಮಾಡಿ ತನ್ನ ಕೌಂಟರ್ ನಲ್ಲಿ ಕುಳಿತರೆ ಟೋಕನ್ ಜನರೇಟ್ ಆಗುತ್ತದೆ. ಚಿಕಿತ್ಸೆಗಾಗಿ ಎಲ್ಲಿಗೆ ತೆರಳಬೇಕು ಎನ್ನುವ ಮಾಹಿತಿಯನ್ನು ಸಹ ನೀಡಲಾಗುತ್ತದೆ. 30 ಸೆಕೆಂಡ್ ಗಳಲ್ಲಿ ಒಪಿಡಿ ಚೀಟಿ ದೊರೆಯಲಿದ್ದು, ಹೆಚ್ಚಿನ ಸಮಯ ಉಳಿಯಲಿದೆ. ಈ ಮಾಸಾಂತ್ಯದ ವೇಳೆಗೆ ರಾಜ್ಯದ 15 ರಿಂದ 20 ಆಸ್ಪತ್ರೆಗಳಲ್ಲಿ ಇಂತಹ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ನಂತರ ಎಲ್ಲಾ ಆಸ್ಪತ್ರೆಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.
ಇದರ ಜೊತೆಗೆ ಆರೋಗ್ಯ ಇಲಾಖೆ ಡಿಜಿಟಲ್ ಸಾಕ್ಷರತೆಗೂ ಸಹ ಹೆಚ್ಚಿನ ಆದ್ಯತೆ ನೀಡಿದ್ದು, ಗ್ರಾಮೀಣ ಮತ್ತು ಸಾಮಾನ್ಯ ಜನರಿಗೆ ಡಿಜಿಟಲ್ ಪರಿಹಾರಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಸರ್ಕಾರದ ಇಂತಹ ಡಿಜಿಟಲ್ ಪರಿವರ್ತನೆಗಳನ್ನು ಖಾಸಗಿ ವಲಯ ಕೂಡ ಬಳಸಿಕೊಳ್ಳಬೇಕು ಎಂದು ಡಿ. ರಂದೀಪ್ ಕರೆ ನೀಡಿದರು.
ಐಐಎಚ್ಎಂಆರ್ ನಿರ್ದೇಶಕರಾದ ಡಾ. ಉಷಾ ಮಂಜುನಾಥ್, ಐಐಎಚ್ಎಂಆರ್ ನ ಹಿರಿಯ ಸಲಹೆಗಾರರಾದ ಡಾ.ಸಿ.ಎಸ್. ಕೇದಾರ್, ಬೆಂಗಳೂರು ಐಐಐಟಿ ಮಾಜಿ ನಿರ್ದೇಶಕ ಪ್ರೊಫೆಸರ್ ಎಸ್. ಸಡಗೋಪನ್ ಹಾಗೂ ಐಐಎಚ್ಎಂಆರ್ ಕಾರ್ಯದರ್ಶಿ ಡಾ. ಎಸ್. ಗುಪ್ತಾ ಉಪಸ್ಥಿತರಿದ್ದರು.