ಮನೆ ರಾಜಕೀಯ ಇಂದಿನಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ: ಸದನ ಸಮರಕ್ಕೆ ಸಜ್ಜು

ಇಂದಿನಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ: ಸದನ ಸಮರಕ್ಕೆ ಸಜ್ಜು

0

ಬೆಂಗಳೂರುಇಂದಿನಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭಗೊಳ್ಳಲಿದ್ದು, ಸೆಪ್ಟೆಂಬರ್ 23ರ ತನಕ ಉಭಯ ಸದನಗಳು ಕಾರ್ಯಕಲಾಪ ನಿರ್ವಹಿಸಲಿವೆ.

ಭ್ರಷ್ಟಾಚಾರ, ಬೆಂಗಳೂರು ಮಳೆ, ಕಮಿಷನ್ ಆರೋಪ ಸೇರಿದಂತೆ ಸರ್ಕಾರದ ವಿರುದ್ಧ ಹಣಿಯಲು ವಿಪಕ್ಷ ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದ್ದು, ವಿಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತಾರೂಢ ಬಿಜೆಪಿ ಕೂಡ ಸರ್ವಸನ್ನದ್ಧವಾಗಿದೆ.

ಅಧಿವೇಶನ ಇಂದು ಬೆಳಗ್ಗೆ 11 ಗಂಟೆಗೆ ಆರಂಭಗೊಳಲಿವೆ. ನಿಗದಿತ ಕರ್ಯಕಲಾಪ ಸೂಚಿಯಂತೆ ಬೆಳಗ್ಗೆ ಸಂತಾಪ ಸೂಚನೆಗಳು ಮಂಡನೆಯಾಗಲಿವೆ.

ಕಮಿಷನ್ ಆರೋಪ

ಗುತ್ತಿಗೆದಾರರ ಸಂಘ ಮಾಡಿರುವ ಕಾಮಗಾರಿ ವೆಚ್ಚದಲ್ಲಿ ಶೇಕಡ 40ರಷ್ಟನ್ನು ಲಂಚವಾಗಿ ನೀಡಬೇಕಾಗಿದೆ ಎಂಬ ಆರೋಪ ಕಾಂಗ್ರೆಸ್ ಕೈಯಲ್ಲಿರುವ ಬ್ರಹ್ಮಾಸ್ತ್ರವಾಗಿದೆ. ಇದರ ತನಿಖೆ ಮಾಡಲು ಹಿರಿಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚಿಸುವಂತೆ ಅದು ಒತ್ತಾಯಿಸಬಹುದು. ಪ್ರಮುಖವಾಗಿ ಸಚಿವ ಮುನಿರತ್ನ ಹೆಸರನ್ನು ಪ್ರಸ್ತಾಪಿಸಿ, ಶಿಕ್ಷಣ ಮತ್ತು ಇತರ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಆರೋಪಗಳನ್ನು ವಿರೋಧ ಪಕ್ಷಗಳು ಸದನದಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.

ಪಿಎಸ್ಐ ಹಗರಣದ ವ್ಯಾಪಕ ತನಿಖೆಗೆ ಒತ್ತಾಯ, ಪಠ್ಯಪುಸ್ತಕವನ್ನು ಕೇಸರೀಕರಣ ಮಾಡಲು ಸರ್ಕಾರ ಯತ್ನಿಸಿದೆ ಎಂಬ ಆರೋಪ, ಭಾರಿ ಮಳೆ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ವಿಫಲಗೊಂಡಿದೆ ಎನ್ನುವ ವಿಷಯ, ಕರಾವಳಿಯಲ್ಲಿ ಇತ್ತೀಚೆಗೆ ನಡೆದ ಕೋಮು ಹಿನ್ನೆಲೆಯ ಕೊಲೆಗಳ ವಿಷಯವನ್ನಿಟ್ಟುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆ ಎನ್ನುವುದು ಸೇರಿ ಸರ್ಕಾರದ ಮೇಲೆ ಮುಗಿಬೀಳಲು ಕಾಂಗ್ರೆಸ್ ಬತ್ತಳಿಕೆಯಲ್ಲಿ ಹಲವು ಬಾಣಗಳಿವೆ.

ಇತ್ತೀಚಿನ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿ, ನಗರದ ವಿವಿಧ ಭಾಗಗಳಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿ ಮತ್ತು ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರಿದ ಬೆಂಗಳೂರಿನ ಮೂಲಸೌಕರ್ಯ ಸಂಕಟಗಳು ನಗರದ ಪ್ರಸಿದ್ಧ ಐಟಿ ಉದ್ಯಮವನ್ನು ಎದುರಿಸುತ್ತಿರುವ “ಬ್ರ್ಯಾಂಡ್ ಬೆಂಗಳೂರು” ಗೆ ಹೊಡೆತ ಬಿದ್ದಿದೆ ಎಂದು ಹೇಳಿಕೊಂಡಿದೆ.

ಇದಕ್ಕೆ ಪ್ರತ್ಯಾಸ್ತ್ರಗಳಾಗಿ ಆಡಳಿತ ಪಕ್ಷ ಈಗಾಗಲೇ ಸದನದ ಹೊರಗೆ ಆರೋಪಿಸುತ್ತಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ರೀಡೂ ಪ್ರಕರಣ ಸೇರಿದಂತೆ ಇನ್ನಿತರೇ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸಬಹುದು. ಇವುಗಳ ತನಿಖೆ ಮಾಡಿಸಲು ಸೂಕ್ತ ಸಮಿತಿಯ ರಚನೆ ಘೋಷಣೆಯನ್ನೂ ಸದನದಲ್ಲಿ ಮಾಡುವ ಸಾಧ್ಯತೆಯೂ ಇದೆ.

ಸಭಾಪತಿ ಚುನಾವಣೆ

ವಿಧಾನಪರಿಷತ್‌ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸಬೇಕಿದ್ದು, ಪರಿಷತ್‌ ಸದಸ್ಯ ರಘುನಾಥ ರಾವ್‌ ಮಲ್ಕಾಪುರೆ ಹಂಗಾಮಿ ಸಭಾಪತಿಯಾಗಿದ್ದಾರೆ. ಚುನಾವಣಾ ದಿನಾಂಕ ನಿಗದಿ ಮಾಡಬೇಕಾಗಿದೆ. ಪರಿಷತ್‌ನಲ್ಲಿ ಬಹುಮತ ಪಡೆದಿರುವ ಬಿಜೆಪಿ ಸಭಾಪತಿ ಮತ್ತು ಉಪಸಭಾಪತಿ ಎರಡೂ ಸ್ಥಾನಗಳಿಗೂ ಪಕ್ಷದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಿದೆ ಎಂದು ಮೂಲಗಳು ತಿಳಿಸಿವೆ.