ಮನೆ ದೇವಸ್ಥಾನ ಕರುನಾಡ ಕೊಲ್ಹಾಪುರ ದೊಡ್ಡ ಗದ್ದವಳ್ಳಿ

ಕರುನಾಡ ಕೊಲ್ಹಾಪುರ ದೊಡ್ಡ ಗದ್ದವಳ್ಳಿ

0

ಹಾಸನದಿಂದ 16 ಕಿಲೋ ಮೀಟರ್ ದೂರದಲ್ಲಿರುವ ಪುಣ್ಯಕ್ಷೇತ್ರ ದೊಡ್ಡಗದ್ದವಳ್ಳಿ. ಕರುನಾಡ ಕೊಲ್ಹಾಪುರವೆಂದೇ ಖ್ಯಾತವಾದ ಈ ಊರಿನ ಲಕ್ಷ್ಮೀದೇವಾಲಯದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಮಹಾಲಕ್ಷ್ಮಿಯಂತೆಯೇ ನಿಂತಿರುವ ಜತುರ್ಭಜ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಲಾಗಿದೆ.

ಅಭಿನವ ಕೊಲ್ಹಾಪುರ ಎಂದೂ ಖ್ಯಾತವಾದ ಈ ಊರಿನಲ್ಲಿ, ದಕ್ಷಿಣ ಕೊಲ್ಲಾಪುರದಮ್ಮ ಎಂದೇ ಕರೆಸಿಕೊಳ್ಳುವ ಮಹಾಲಕ್ಷ್ಮಿಯ ಸುಂದರ ದೇವಾಲಯವಿದೆ. ನಾಲ್ಕು ಗೋಪುರಗಳ ಚತುಷ್ಕೂಟ ದೇವಾಲಯವನ್ನು ಹೊಯ್ಸಳರ ದೊರೆ ವಿಷ್ಣುವರ್ಧನ ಕಾಲದಲ್ಲಿ ರಾಹುತ ಹಾಗೂ ಆತನ ಧರ್ಮಪತ್ನಿ ಸಹಜಾದೇವಿ ಅವರು 1113ರಲ್ಲಿ ನಿರ್ಮಿಸಿದರೆಂದು ತಿಳಿದುಬರುತ್ತದೆ.

118 ಅಡಿ ಉದ್ದ ಹಾಗೂ 112 ಅಡಿ ಅಗಲ ಇರುವ ಅಂಗಳದ ಮಧ್ಯದಲ್ಲಿ ಇರುವ ದೇವಾಲಯಕ್ಕೆ ಎರಡು ಮಹಾದ್ವಾರ ಮಂಟಪಗಳಿವೆಯಾದರೂ ಪಶ್ಚಿಮ ದ್ವಾರ ಮಂಟಪ ಮಾತ್ರವೇ ಚೆನ್ನಾಗಿದೆ.  ದೇವಾಲಯದ ಹೊರ ಭಿತ್ತಿಗಳಲ್ಲಿ ಸೂಕ್ಷ್ಮ ಶಿಲಾಲಂಕರಣ, ಕೆತ್ತನೆಗಳಿಲ್ಲದಿದ್ದರೂ ನಾಲ್ಕು ಗೋಪುರಗಳೂ ಒಂದಕ್ಕಿಂತ ಒಂದು ಮನಮೋಹಕವಾಗಿವೆ. ಲಕ್ಷ್ಮೀಗುಡಿಯ ಶಿಖರ ಚಾಲುಕ್ಯ ಶೈಲಿಯಲ್ಲಿದ್ದರೆ, ಉಳಿದ ಮೂರು ಶಿಖರಗಳು ಕದಂಬ ನಾಗರ ಶೈಲಿಯಲ್ಲಿವೆ ಎಂದು ತಜ್ಞರು ಹೇಳುತ್ತಾರೆ.

7 ಅಡಿ ಎತ್ತರದ ಪ್ರಾಕಾರವಿದೆ. ಜಾಲಂದ್ರ ಸಹಿತವಾದ ಹೊರಭಿತ್ತಿಗಳಲ್ಲಿ ಅರೆ ಗೋಪುರಗಳ ಕೆತ್ತನೆ ಇದೆ. ಪಶ್ಚಿಮ ದ್ವಾರ ಮಂಟಪದಲ್ಲಿ 16 ಕಂಬಗಳಿವೆ. ನುಣುಪಾದ ಬಳಪದ ಕಲ್ಲಿನ ಕಂಬಗಳಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ನೋಡಲು ಅಂದವಾಗಿವೆ. ಇಲ್ಲಿ 9 ಭುವನೇಶ್ವರಿಗಳಿದ್ದು, ಅವುಗಳಲ್ಲಿ  ತಾಂಡವೇಶ್ವರ ಮತ್ತು ಅಷ್ಟದಿಕ್ಪಾಲಕ ವಿಗ್ರಹಗನ್ನು ಕೆತ್ತಲಾಗಿದೆ.

ದೇವಾಲಯದಲ್ಲಿರುವ ನಾಲ್ಕು ಗರ್ಭಗೃಹಗಳ ಪೈಕಿ ಪೂರ್ವದಿಕ್ಕಿನ ಗರ್ಭಗುಡಿಯಲ್ಲಿ, ನಿಂತಿರುವ ಚತುರ್ಭುಜ ಲಕ್ಷ್ಮೀ ವಿಗ್ರಹವಿದೆ. 1.3 ಮೀಟರ್ ಎತ್ತರ ಇರುವ ಲಕ್ಷ್ಮೀ ತನ್ನ ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ ಹಾಗೂ ಜಪಮಾಲೆಯನ್ನು ಧರಿಸಿದ್ದಾಳೆ.

ಉಳಿದ ಮೂರು ಗರ್ಭಗೃಹಗಳ ಪೈಕಿ ಪಶ್ಚಿಮದ ಗರ್ಭಗುಡಿಯಲ್ಲಿ ಭೂತನಾಥಲಿಂಗ, ದಕ್ಷಿಣದ ಗರ್ಭಗೃಹದಲ್ಲಿ ಭೈರವ ವಿಗ್ರಹ, ಉತ್ತರದ ಗರ್ಭಗೃಹದಲ್ಲಿ ಸುಖಾಸನದಲ್ಲಿ ಕುಳಿತ ಅಷ್ಟಭುಜದ ಸುಂದರವಾದ ಕಾಳಿಯ ವಿಗ್ರಹವಿದೆ.

ಕಾಳಿಯ ವಿಗ್ರಹ ಭೀಕರ ಸ್ವರೂಪದ್ದಾಗಿದ್ದು,  ಎಡ ಬಲಗಳಲ್ಲಿ ಅಸ್ತಿಪಂಜರದಂತಿರುವ ಬೇತಾಳ ವಿಗ್ರಹಗಳಿವೆ.  ಕಾಳೀ ದೇವಾಲಯದ ಹಿಂಬದಿಯ ಗೋಡೆಯಲ್ಲಿ ಕಾಳಿಯ ಉಬ್ಬುಶಿಲ್ಪವಿದೆ. ಕಾಳಿ ಗುಡಿಯ ಮಗ್ಗುಲಲ್ಲಿ ಭೈರವ ಮಂದಿರವಿದೆ. ಬಾಗಿಲಿನ ಪಟ್ಟಿಕೆಯಲ್ಲಿ ದಕ್ಷಿಣಾಮೂರ್ತಿ ಹಾಗೂ ಮೋಹಿನಿಯ ವಿಗ್ರಹಗಳಿವೆ. ಒಟ್ಟು ಒಂಬತ್ತು ಶಿಖರಗಳಿಂದ ಕೂಡಿದ ಈ ದೇವಾಲಯವನ್ನು ವಾಸ್ತುಶಿಲ್ಪರತ್ನ ಎಂದೇ ಕರೆಯುತ್ತಾರೆ.

ಲಕ್ಷ್ಮಿ  ದೇವಾಲಯದ ಪೂರ್ವಭಾಗದಲ್ಲಿ ಪುಷ್ಕರಿಣಿಯಿದೆ. ಅಪರೂಪದ ವಾಸ್ತು ವಿನ್ಯಾಸವುಳ್ಳ  ಈ ದೇವಾಲಯವನ್ನು  ಕೇಂದ್ರ ಪುರಾತತ್ವ ಸರ್ವೇಕ್ಷಣ ಇಲಾಖೆ ಜೀರ್ಣೋದ್ಧಾರ ಮಾಡಿದ್ದು, ದೇವಾಲಯದ ಹೊರ ಆವರಣದಲ್ಲಿ ಹುಲ್ಲು ಹಾಸು ಬೆಳೆಸಲಾಗಿದೆ. ಇದು ಸಂರಕ್ಷಿತ ದೇವಾಲಯವಾಗಿದೆ.

ಹೋಗುವುದು ಹೇಗೆ : ಹಾಸನದಿಂದ ಬೇಲೂರಿಗೆ ಹೋಗುವ ಮಾರ್ಗದಲ್ಲಿ ಕಲ್ಕೆರೆ ಕ್ರಾಸ್ ಬಳಿ ತಿರುಗಿ 3 ಕಿಲೋ ಮೀಟರ್ ಒಳ ಹೋದರೆ ದೊಡ್ಡಗದ್ದವಳ್ಳಿ ತಲುಪುತ್ತೇವೆ

ಸಂಪರ್ಕ: ಉಪ ನಿರ್ದೇಶಕರು ಮತ್ತು ಅಧ್ಯಕ್ಷರು, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ, ಹಾಸನ, ದೂರವಾಣಿ 08172-267345. ಅಥವಾ ಸಹಾಯಕ ನಿರ್ದೇಶಕರು, ಪ್ರದಾಶಿಕ ಪ್ರವಾಸೋದ್ಯಮ ಅಧಿಕಾರಿಗಳ ಕಾರ್ಯಾಲಯ, ಹಾಸನ. 08172-268862.

ಹಿಂದಿನ ಲೇಖನಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಕರ್ನಾಟಕ ನೆನಪಾಗಿದೆ: ಕಾಂಗ್ರೆಸ್‌
ಮುಂದಿನ ಲೇಖನಜನರ ಸುಲಿಗೆಗೆ ಮುಂದಾದ ಬಿಜೆಪಿ ಸರ್ಕಾರ: ಎಂ.ಲಕ್ಷ್ಮಣ್