ಮನೆ ಸುದ್ದಿ ಜಾಲ ಕೆಂಪೇಗೌಡರ ಸಾಧನೆ ಎಂದಿಗೂ ಅಮರ: ಪ್ರತಾಪ್ ಸಿಂಹ

ಕೆಂಪೇಗೌಡರ ಸಾಧನೆ ಎಂದಿಗೂ ಅಮರ: ಪ್ರತಾಪ್ ಸಿಂಹ

0

ಮೈಸೂರು:- ಕೆಲವು ಮಹಾನ್ ವ್ಯಕ್ತಿಗಳನ್ನ ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಅವರು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಸಾಧನೆಗಳು ಎಂದಿಗೂ ಅಮರವಾಗಿರುತ್ತವೆ. ಇವರ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡರು ಸೇರುತ್ತಾರೆ ಎಂದು ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರದ ಸದಸ್ಯರಾದ ಪ್ರತಾಪ್ ಸಿಂಹ ಅವರು ತಿಳಿಸಿದರು.

Join Our Whatsapp Group

 ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, 500 ವರ್ಷಗಳ ಹಿಂದೆಯೇ ಒಂದು ಸುಸಜ್ಜಿತವಾದ ನಗರವನ್ನು ಕಟ್ಟಿದರೆಂದರೆ ಅವರ ದೂರದೃಷ್ಟಿ ಹೇಗಿತ್ತೆಂಬುದನ್ನು ನಾವು ಊಹಿಸಲೂ ಸಾಧ್ಯವಿಲ್ಲ. ವಿಜಯನಗರದ ಪಾಳೆಗಾರನೊಬ್ಬ ಬೆಂಗಳೂರಿನoತಹ ಜಾಗವನ್ನು ಆಯ್ಕೆ ಮಾಡಿ ನಗರವನ್ನು ನಿರ್ಮಿಸಿರುವುದರಲ್ಲಿ ಅವರ ಬುದ್ಧಿಮತ್ತೆ ಎದ್ದು ತೋರುತ್ತದೆ ಎಂದರು.

ಬಹುತೇಕ ಬೆಂಗಳೂರಿನ ದೇವಾಲಯಗಳು ಆಗಿನ ಕಾಲದಲ್ಲಿ ನಿರ್ಮಾಣವಾಗಿದ್ದವು. ರಾಜ್ಯದ ಶೇ. 52 ರಷ್ಟು ಆದಾಯ ಬೆಂಗಳೂರಿನಿoದ ಬರುತ್ತಿದೆ. ರಾಜ್ಯದ ಅಭಿವೃದ್ಧಿಗೆ ಬೆಂಗಳೂರಿನ ಆದಾಯ ಮೂಲ ಕಾರಣವಾಗಿದೆ. ಕರ್ನಾಟಕ ರಾಜ್ಯಕ್ಕೆ ಬೆಂಗಳೂರು ಕಾಮಧೇನುವಿನಂತಿದೆ. ಇಂತಹ ಮಹಾನ್ ವ್ಯಕ್ತಿಗಳ ಕೊಡುಗೆಗಳ ಬಗ್ಗೆ ಧನ್ಯತಾಭಾವ ಮನಸ್ಸಿನಲ್ಲಿರಬೇಕು. ಸರ್ಕಾರ ಕೆಂಪೇಗೌಡರ ಜಯಂತಿಯನ್ನು ಆಚರಿಸುತ್ತಿರುವುದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2, ಏರ್ಪೋರ್ಟ್ ಮುಂಭಾಗದ 108 ಅಡಿಗಳ ಅದ್ಭುತವಾದ ಕೆಂಪೇಗೌಡರ ಪ್ರತಿಮೆ ಇವೆಲ್ಲವೂ ಎಲ್ಲಾ ಸರ್ಕಾರಗಳು ಕೆಂಪೇಗೌಡರ ಮೇಲೆ ಇಟ್ಟಿರುವ ಗೌರವದ ಸೂಚ್ಯಂಕವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ ಅವರು ಮಾತನಾಡಿ, ನಮ್ಮಲ್ಲಿ ಒಗ್ಗಟ್ಟು ಸಂಘಟನೆಯ ಕೊರತೆ ಇದೆ. ಸಮುದಾಯದ ತಳಮಟ್ಟದಲ್ಲಿರುವ ವ್ಯಕ್ತಿಯ ನೆರವಿಗೆ ಸಂಘಟನೆಗಳು ಪೂರಕವಾಗುವ ನಿಟ್ಟಿನಲ್ಲಿ ಸಮುದಾಯದವರು ಒಗ್ಗಟ್ಟಾಗಿರಬೇಕು. ರಾಜ್ಯಮಟ್ಟದಲ್ಲಿ ನೀಡುವ ಕೆಂಪೇಗೌಡ ರತ್ನ ಪ್ರಶಸ್ತಿಯಂತೆ ಜಿಲ್ಲಾ ಮಟ್ಟದಲ್ಲೂ ಪ್ರತಿ ವರ್ಷ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡ ಅವರು ಮಾತನಾಡಿ, 2015 ರಲ್ಲಿ ಮೈಸೂರಿನ ಮಹಾರಾಜ ಮೈದಾನದಲ್ಲಿ 60 ಸಾವಿರ ಜನರನ್ನು ಸೇರಿಸಿ ಕೆಂಪೇಗೌಡರ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿAದ ಆಚರಿಸಲಾಗಿತ್ತು. ದೆಹಲಿಯಲ್ಲಿ ಕೂಡ ಕೆಂಪೇಗೌಡರ ಉತ್ಸವ ಮಾಡಿದ್ದ ಸಂತೋಷ ನಮಗಿದೆ ಎಂದರು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ ಹಾಗೂ ಪತ್ರಕರ್ತರಾದ ಬನ್ನೂರು ಕೆ ರಾಜುರವರು ಮಾತನಾಡಿ, ಪ್ರಗತಿಯ ದ್ಯೋತಕವಾಗಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪನೆ ಮಾಡಲಾಯಿತು. ಕೆಂಪೇಗೌಡರ ನಿಲುವಿಗೆ ಆ ಪ್ರತಿಮೆ ಬಹಳ ಗೌರವ ತಂದುಕೊಟ್ಟಿದೆ. ಕೆಂಪೇಗೌಡರನ್ನು ಪರಿಚಯಿಸುವಲ್ಲಿ ಇತಿಹಾಸದಲ್ಲಿ ಗೊಂದಲವಿದೆ. ಅವರ ವಂಶಸ್ಥರಲ್ಲಿ ಒಂಬತ್ತು ಮಂದಿ ಕೆಂಪೇಗೌಡರಿದ್ದಾರೆ. ಹಿರಿಯ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಕಟ್ಟುವ ಕೆಲಸಕ್ಕೆ ಪರ್ಯಾಯ ಪದ ನಾಡಪ್ರಭು. ಕೆಂಪೇಗೌಡರು ಕೇವಲ ನಾಡನ್ನಷ್ಟೇ ಅಲ್ಲ ಸರ್ವ ಜನಾಂಗದ ಮನಸ್ಸುಗಳನ್ನು ಕಟ್ಟಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಇಡೀ ನಾಡಿಗೆ ಕೆಂಪೇಗೌಡರ ಪರಿಚಯವಾಗಬೇಕೆಂದರೆ ಪಠ್ಯದಲ್ಲಿ ಕೆಂಪೇಗೌಡರ ಪಾಠ ಅಳವಡಿಕೆ ಆಗಬೇಕು ಎಂದರು.

ಕೆoಪೇಗೌಡರು ಕೇವಲ ಪಾಳೆಗಾರ ಅಥವಾ ಸಾಮಂತರು ಮಾತ್ರವಲ್ಲ. ಕೆಂಪೇಗೌಡರ ಸಂಸ್ಥಾನ ಮೈಸೂರು ಸಂಸ್ಥಾನಕ್ಕಿoತ ದೊಡ್ಡದು. ನಾಡಪ್ರಭು ಎಂದು ಅವರನ್ನು ಮಾತ್ರ ಸಂಬೋಧಿಸಲಾಗುತ್ತದೆ. ಮನುಷ್ಯತ್ವದ ಜಾತಿಯುಳ್ಳ ನಾಡಪ್ರಭು ಸರ್ವರನ್ನು ಅಭಿವೃದ್ಧಿ ಪಡಿಸುವ ದೂರ ದೃಷ್ಟಿ ಹೊಂದಿದ್ದರು. ಸಾವಿರ ಕೆರೆಗಳ ಸರದಾರ, ನಾಡು ಮರೆಯದ ಅಪ್ಪಟ ಕನ್ನಡ ಕುವರ, ಯೋಜನಾ ನಿಪುಣ, ಜ್ಞಾನಿ ಕೆಂಪೇಗೌಡರ ಕನಸಿನ ಬೆಂಗಳೂರನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ ಮುಂದಾಗಬೇಕು ಎಂದರು.

ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ 500 ವರ್ಷಗಳ ಹಿಂದೆಯೇ ಮುಂದಿನ ಪೀಳಿಗೆಯ ಕಲ್ಪನೆ, ದೂರದೃಷ್ಟಿ, ದಾರ್ಶನಿಕ ಮನೋಭಾವ, ವೈಚಾರಿಕತೆ ಎಲ್ಲವನ್ನು ಹೊಂದಿದ್ದ ಅಪ್ರತಿಮ ಜ್ಞಾನಿ ಕೆಂಪೇಗೌಡರನ್ನು ಬೆಂಗಳೂರಿನಲ್ಲಿ ನೆನೆಸಿಕೊಳ್ಳದ ಜಾಗವಿಲ್ಲ. ಇಂತಹ ಮಹಾನ್ ವ್ಯಕ್ತಿಗಳನ್ನು ಕೇವಲ ಆಯಾ ಜಾತಿ ಸಮುದಾಯಗಳಿಗೆ ಮೀಸಲಾಗಿರಿಸದೆ, ಅವರ ಸಾಧನೆಗಳನ್ನು ಗೌರವಿಸಬೇಕು. ಸಾವಿರ ಕೆರೆಗಳನ್ನು ನಿರ್ಮಿಸಿದ ಕೆಂಪೇಗೌಡರ ದೂರದೃಷ್ಟಿಯಂತೆ ಇಂದು ಕೆರೆಕಟ್ಟೆಗಳನ್ನು ಕಾಪಾಡಿಕೊಳ್ಳುವುದರ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳುವ ಸಂದರ್ಭ ಬಂದಿದೆ. ಆದ್ದರಿಂದ ಕೆಂಪೇಗೌಡರ ಕನಸು ಹಾಗೂ ಸಾಧನೆಗಳನ್ನು ಉಳಿಸಿಕೊಳ್ಳುವಲ್ಲಿ ಯುವಜನತೆ ಜಾಗರೂಕರಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ಶ್ರೀ ಸೋಮನಾಥ ಸ್ವಾಮೀಜಿ, ಮೈಸೂರು ಮಹಾನಗರ ಪಾಲಿಕೆಯ ಉಪಮಹಾ ಪೌರರಾದ ರೂಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜೆ. ಗೋವಿಂದರಾಜು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ್ ಹಾಗೂ ವಿವಿಧ ಒಕ್ಕೂಟ ಹಾಗೂ ಸಂಘಟನೆಗಳ ಮುಖಂಡರುಗಳು ಭಾಗವಹಿಸಿದ್ದರು.