ಬೆಂಗಳೂರು(Bengaluru): ಕೆಂಗಲ್ ಹನುಮಂತಯ್ಯನವರು ಕರ್ನಾಟಕದ ಅಭಿವೃದ್ಧಿಗೆ ನೀಲನಕ್ಷೆ ಹಾಕಿದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತ ಯ್ಯನವರ ಪುಣ್ಯತಿಥಿಯ ಅಂಗವಾಗಿ ವಿಧಾನ ಸೌಧದ ಆವರಣದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ವಿಧಾನಸೌಧದ ನಿರ್ಮಾತೃ, ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಕೆಂಗಲ್ ಹನುಮಂತಯ್ಯ ಅವರ ಪುಣ್ಯತಿಥಿಯ ಅಂಗವಾಗಿ ಅವರನ್ನು ಇಂದು ಸ್ಮರಿಸಿದ್ದೇವೆ. ಅವರ ಕಾರ್ಯಕ್ರಮಗಳು, ಬಿಟ್ಟು ಹೋಗಿರುವ ತತ್ವ ಆದರ್ಶಗಳನ್ನು ಸ್ಮರಿಸುವ ದಿನವಾಗಿದೆ. ಕೆಂಗಲ್ ಹನುಮಂತಯ್ಯ ಅವರು ಮೈಸೂರು ಪ್ರಾಂತ್ಯದ ಅತ್ಯಂತ ಹಿರಿಯ, ಪ್ರಮುಖ ನಾಯಕರಾಗಿದ್ದರು. ಕರ್ನಾಟಕದ ಏಕೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿ ಅವರು ಇಡೀ ಕನ್ನಡ ನಾಡಿನ ಬಗ್ಗೆ ಅಪ್ರತಿಮ ಪ್ರೀತಿ, ಕನ್ನಡಿಗರು ಒಂದಾಗಬೇಕೆಂಬ ಹೆಬ್ಬಯಕೆ ಇತ್ತು. ಮೈಸೂರು ಒಡೆಯರ ರಾಜಮನೆತನದ ಪ್ರಭಾವ ಅವರ ಮೇಲಿತ್ತು. ಅಭಿವೃದ್ಧಿಯನ್ನು ರಾಜಕಾರಣದ ಮೂಲ ಮಂತ್ರವಾಗಬೇಕು ಎಂದು ನಾಡಿನ ಅಭಿವೃದ್ಧಿಯ ಬಗ್ಗೆ ಸದಾ ಚಿಂತನೆ ಮಾಡಿದವರು ಎಂದರು.
ಜನಮಾನಸದಲ್ಲಿ ಶಾಶ್ವತ ಸ್ಥಾನ
ಅಂದಿನ ಮೈಸೂರು ರಾಜ್ಯವಾದ ತಕ್ಷಣ ಬೆಂಗಳೂರು ಅದರ ಶಕ್ತಿ ಕೇಂದ್ರವಾಗಬೇಕೆಂದು ಯೋಚಿಸಿ, ಕರ್ನಾಟಕದ ಶಕ್ತಿ ಸೌಧ ವಿಧಾನಸೌಧದ ನಿರ್ಮಿಸಿದರು. ಅವರ ದೂರದೃಷ್ಟಿಯಿಂದ ಭವ್ಯವಾದ ವಿಧಾನಸೌಧ ನಮಗೆ ಕೊಟ್ಟಿದ್ದಾರೆ. ಇಡೀ ಭಾರತ ದೇಶದಲ್ಲಿ ವಿಧಾನ ಮಂಡಲಗಳ ಕಚೇರಿ ಯಾವುದೇ ರಾಜ್ಯದಲ್ಲಿ ಇಲ್ಲ. ಇದರಲ್ಲಿ ಕುಳಿತು ಅವರ ಆಡಳಿತ ಮಾಡಲು ಸಾಧ್ಯವಾಗಲಿಲ್ಲ. ಆದರೆ ಜನಮಾನಸದಲ್ಲಿ, ತಮ್ಮದೇ ಆದ ಶಾಶ್ವತ ಸ್ಥಾನ ಗಳಿಸಿದ್ದಾರೆ. ಕೇಂದ್ರದ ರೈಲ್ವೆ ಸಚಿವರಾಗಿ ರಾಜ್ಯದಲ್ಲಿ ಡಬಲ್ ಲೈನ್ ರೈಲ್ವೆ ಆಗಬೇಕೆಂದು ಪ್ರಥಮ ಬಾರಿಗೆ ಚಿಂತನೆ ಮಾಡಿದವರು ಹನುಮಂತಯ್ಯ ಅವರು. ಅವರು ಹಾಕಿರುವ ಬುನಾದಿಯಿಂದ ಕರ್ನಾಟಕದಲ್ಲಿ ಪ್ರಗತಿ ಕಾಣಲು ಸಾಧ್ಯವಾಯಿತು. ಆಡಳಿತದ ಬಗ್ಗೆ ಬಹಳಷ್ಟು ವಿಚಾರ ಗಳಿದ್ದಂಥವರು. ಆಡಳಿತ ಸುಧಾರಣೆಯ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಸ್ವಾತಂತ್ರ್ಯ ನಂತರ ಅವರನ್ನು ಸದಾ ಸ್ಮರಣೆ ಮಾಡಿ, ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು. ಜಾತಿ , ಮತ, ಪಂಥವನ್ನು ಮೀರಿ ಕೆಲಸ ಮಾಡಿದವರು. ಪ್ರಾಮಾಣಿಕತೆಗೆ ಮತ್ತೊಂದು ಹೆಸರಾಗಿದ್ದರು.ಅವರ ಆದರ್ಶ ಬರುವ ದಿನಗಳಲ್ಲಿ ನಮಗೆ ದಾರಿ ದೀಪವಾಗುತ್ತದೆ ಎಂದರು.
ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಸಂಸದ ಮುನಿಸ್ವಾಮಿ, ಕೆಂಗಲ್ ಹನುಮಂತಯ್ಯ ಅವರ ಕುಟುಂಬ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.