ತಿರುವನಂತಪುರ: ಕೇರಳದ ವಯನಾಡ್‌ನ ಮಾನಂದವಾಡಿಯಲ್ಲಿ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದಲ್ಲದೆ, ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದ್ದ ‘ನರಭಕ್ಷಕ’ ಹುಲಿ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಇದರಿಂದಾಗಿ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.
ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆಯ (ಆರ್‌ಆರ್‌ಟಿ) ಸಿಬ್ಬಂದಿ ಹುಲಿ ಸತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಅದರ ಕುತ್ತಿಗೆಯ ಮೇಲೆ ಗಂಭೀರ ಗಾಯಗಳಾಗಿದ್ದು, ಮತ್ತೊಂದು ಹುಲಿಯೊಂದಿಗೆ ಕಾದಾಟ ನಡೆಸುವ ವೇಳೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಸಾಧ್ಯತೆ ಇದೆ. ಈಚೆಗೆ ಸಾವಿಗೀಡಾದ್ದ ಮಹಿಳೆಯನ್ನು ಇದೇ ಹುಲಿ ಕೊಂದಿತ್ತು ಎಂಬುದು ದೃಢಪಟ್ಟಿದೆ ಎಂದು ಅರಣ್ಯ ಪಶುವೈದ್ಯ ಡಾ.ಅರುಣ್ ತಿಳಿಸಿದ್ದಾರೆ.
ಹುಲಿ ಸೆರೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದ ಕೇರಳ ಸರ್ಕಾರವು, ವಯನಾಡ್‌ನ ಮಾನಂದವಾಡಿಯಲ್ಲಿ 48 ಗಂಟೆಗಳ ಕಾಲ ಕರ್ಫ್ಯೂ ವಿಧಿಸಿತ್ತು.
ಜನವರಿ 25ರಂದು ಮಾನಂದವಾಡಿಯ ಪ್ರಿಯದರ್ಶಿನಿ ಎಸ್ಟೇಟ್‌ನಲ್ಲಿ ಕಾಫಿ ಬೀಜ ಕೊಯ್ಯುತ್ತಿದ್ದ ಪರಿಶಿಷ್ಟ ಜಾತಿಯ 47 ವರ್ಷದ ಮಹಿಳೆ ರಾಧಾ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿತ್ತು. ಇದಾದ ಸ್ಪಲ್ಪ ಹೊತ್ತಿನಲ್ಲೇ ಅರಣ್ಯ ಕಚೇರಿ ಮುಂದೆ ಜಮಾಯಿಸಿದ್ದ ಸ್ಥಳೀಯರು ಹುಲಿಯನ್ನು ಕೊಂದು ಹಾಕಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಹುಲಿ ಸೆರೆ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಹುಲಿಯನ್ನು ‘ನರಭಕ್ಷಕ’ ಎಂದು ಕೇರಳ ಸರ್ಕಾರ ಘೋಷಿಸಿತ್ತು. ಹುಲಿಯ ಬೇಟೆಗೆ ಆದೇಶಿಸಿತ್ತು. ವಯನಾಡ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಉನ್ನತ ಮಟ್ಟ ಸಭೆ ಬಳಿಕ ಅರಣ್ಯ ಸಚಿವ ಎ.ಕೆ.ಸಸೀಂದ್ರನ್ ಈ ವಿಷಯ ತಿಳಿಸಿದ್ದರು.
ಇಲಾಖೆಯ ಕ್ಷಿಪ್ರ ಕಾರ್ಯಪಡೆಯ (ಆರ್‌ಆರ್‌ಟಿ) ಸದಸ್ಯ, 28 ವರ್ಷದ ಜಯಸೂರ್ಯ ಅವರ ಕೈಗೆ ಹುಲಿ ದಾಳಿಯಿಂದ ಗಾಯವಾಗಿದ್ದು, ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.