ಯಳಂದೂರು: ಯರಿಯೂರು ಗ್ರಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಚಿನ್ನಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದ ಉಪಾದ್ಯಕ್ಷ ಸ್ಥಾನಕ್ಕೆ ನಾರಾಯಣಸ್ವಾಮಿ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಈ ಸ್ಥಾನ ಖಾಲಿಯಾಗಿತ್ತು. ಮಂಗಳವಾರ ಇದಕ್ಕೆ ಚುನಾವಣೆ ನಿಗಧಿಯಾಗಿತ್ತು. ಪಂಚಾಯತ್ ರಾಜ್ ನೀರಾವರಿ ವಿಭಾಗದ ಎಇಇ ಚಂದ್ರಶೇಖರ ಮೂರ್ತಿ ಇದಕ್ಕೆ ಚುನಾವಣಾಧಿಕಾರಿಯಾಗಿ ನೇಮಕವಾಗಿದ್ದರು. ೧೮ ಮಂದಿ ಸದಸ್ಯರಿರುವ ಈ ಪಂಚಾಯಿತಿಯಲ್ಲಿ ಚಿನ್ನಸ್ವಾಮಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೂತನ ಉಪಾಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ನಮ್ಮ ಪಂಚಾಯಿತಿ ತಾಲೂಕಿನ ಪ್ರತಿಷ್ಠಿತ ಪಂಚಾಯಿತಿಗಳಲ್ಲಿ ಒಂದಾಗಿದೆ. ಯರಿಯೂರು, ಚಾಮಲಾಪುರ ಹಾಗೂ ಗಣಿಗನೂರು ಗ್ರಾಮಗಳನ್ನೊಳಗೊಂಡ ದೊಡ್ಡ ಪಂಚಾಯಿತಿಯಾಗಿದೆ. ಇಲ್ಲಿನ ಮೂಲ ಸಮಸ್ಯೆಗಳ ನಿವಾರಣೆಗೆ ನಾನು ಪ್ರಥಮ ಆದ್ಯತೆಯನ್ನು ನೀಡುತ್ತೇನೆ. ಇಲ್ಲಿನ ರಸ್ತೆ, ಚರಂಡಿ, ಬೀದಿ ದೀಪ ನಿರ್ವಹಣೆಗೆ ಪ್ರಥಮ ಆದ್ಯತೆಯನ್ನು ನೀಡುತ್ತೇನೆ. ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರ ದೂರುಗಳಿಗೆ ಸ್ಪಂಧಿಸುತ್ತೇನೆ. ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಪಂಚಾಯಿತಿಯ ಅಭಿವೃದ್ಧಿಗೆ ಪ್ರಾಮಾಣಿವಾಗಿ ಯತ್ನಿಸುತ್ತೇನೆ ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್ ಗ್ರಾಪಂ ಅಧ್ಯಕ್ಷೆ ಲಾವಣ್ಯಕುಮಾರ್ ಸದಸ್ಯರಾದ ಆರ್.ನಾರಾಯಣಸ್ವಾಮಿ, ಮಹೇಶ್, ಶೈಲಜಾ, ದೊಡ್ಡಮ್ಮ, ಮಹದೇವಯ್ಯ, ಲಕ್ಷ್ಮಿ, ವೈ.ಎಂ. ಪ್ರವೀಣ್‌ಕುಮಾರ್, ಕಪ್ಪಣ್ಣ, ಎನ್. ಆಶಾ, ಪಿ. ಮಹದೇಶ, ಪದ್ಮಾ, ಸಿ. ರಮೇಶ, ಜಿ.ಸಿ. ರಾಜೇಶ, ಕೆಂಪಮ್ಮ, ರತ್ನಮ್ಮ, ಶಾಂತಿ, ಚಂದ್ರಮ್ಮ ತಾಪಂ ಮಾಜಿ ಸದಸ್ಯ ವೈ.ಕೆ. ಮೋಳೆ ನಾಗರಾಜು ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ ಮುಖಂಡರಾದ ಜಯಣ್ಣ, ಮಹೇಶ್, ನಾರಾಯಣ, ವೈ.ಬಿ. ಮಹದೇವಸ್ವಾಮಿ, ನಟರಾಜು, ಮಹದೇವಶೆಟ್ಟಿ, ರಂಗಸ್ವಾಮಿ, ಕೃಷ್ಣಮೂರ್ತಿ, ಸೇರಿದಂತೆ ಅನೇಕರು ಇದ್ದರು.