ಮನೆ ರಾಷ್ಟ್ರೀಯ ಕೇರಳ ಇನ್ನು ಮುಂದೆ ಕೇರಳಂ – ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ..!

ಕೇರಳ ಇನ್ನು ಮುಂದೆ ಕೇರಳಂ – ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ..!

0

ನವದೆಹಲಿ : ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಕೇರಳ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇರಳವನ್ನು ಕೇರಳಂ ಎಂದು ಮರುನಾಮಕರಣ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಮುನ್ನ ಕೇಂದ್ರ ಸಚಿವ ಸಂಪುಟದ ಈ ಮಹತ್ವದ ನಿರ್ಧಾರ ಹೊರಬಿದ್ದಿದೆ. ಇಂದು ಹೊಸ ಪ್ರಧಾನಿ ಕಚೇರಿ ಕಟ್ಟಡ ಸೇವಾ ತೀರ್ಥದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಾಗಿತ್ತು. ಕೇರಳ ವಿಧಾನಸಭೆಯು 2024 ಜೂನ್ 24ರಂದು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿ, ಸಂವಿಧಾನದ ಅನುಚ್ಛೇದ 3ರ ಅಡಿಯಲ್ಲಿ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.

ಇದು 2023ರ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ಮಂಡಿಸಿದ ನಿರ್ಣಯದ ನಂತರದ ಎರಡನೇ ಸರಣಿಯಾಗಿತ್ತು. ಮೊದಲ ನಿರ್ಣಯದಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳನ್ನು ಒಳಗೊಂಡಂತೆ ಎರಡನೇ ಬಾರಿ ಸರ್ವಸಮ್ಮತವಾಗಿ ಅಂಗೀಕರಿಸಲಾಗಿತ್ತು. ಮಲಯಾಳಂ ಭಾಷೆಯಲ್ಲಿ ರಾಜ್ಯವನ್ನು ‘ಕೇರಳಂ’ ಎಂದೇ ಕರೆಯಲಾಗುತ್ತದೆ.

ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಮಲಯಾಳಂ ಮಾತನಾಡುವ ಪ್ರದೇಶಗಳ ಏಕೀಕರಣಕ್ಕಾಗಿ ಈ ಬೇಡಿಕೆ ಇದ್ದುದು ಇದಕ್ಕೆ ಮೂಲ ಕಾರಣವಾಗಿದೆ. ಈ ಬದಲಾವಣೆಯಿಂದ ಸಂವಿಧಾನದ ಮೊದಲ ಅನುಸೂಚಿಯಲ್ಲಿ ರಾಜ್ಯದ ಹೆಸರು ಬದಲಾಗುವುದಲ್ಲದೇ 8ನೇ ಅನುಸೂಚಿಯಲ್ಲಿರುವ ಎಲ್ಲಾ ಭಾಷೆಗಳಲ್ಲೂ ‘ಕೇರಳಂ’ ಎಂದು ಬಳಸಲಾಗುತ್ತದೆ.