ಚಿಕ್ಕೋಡಿ: ಮನೆಗೆ ನುಗ್ಗಿ ಮಕಳ್ಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಮೇಲೆ ಅಥಣಿ ಪೊಲೀಸರು ಫೈರಿಂಗ್ ಮಾಡಿ ಇಬ್ಬರು ಬಾಲಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹಾರಾಷ್ಟ್ರ ಗಡಿಯಲ್ಲಿ ಗುರುವಾರ ಈ ಘಟನೆ ನಡೆದಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ, ಮೂವರು ಬಂಧಿಸಿದ್ದಾರೆ.
ಚಿಕ್ಕೋಡಿ ತಾಲೂಕಿನ ರವಿಕಿರಣ ಕಮ್ಲಾಕರ್, ಬಿಹಾರದ ಮೂಲದ ಸದ್ಯ ಮುಂಬೈ ನಿವಾಸಿ ಶಾರುಖ್ ಶೇಖ್ ಮತ್ತು ಕೊಲ್ಹಾಪುರ ಜಿಲ್ಲೆಯ ಸಂಬಾ ಕಾಂಬಳೆ ಬಂಧಿತ ಆರೋಪಿಗಳು.
ಗುರುವಾರ ದಿನದಂದು ಅಥಣಿ ಪಟ್ಟಣದ ಹುಲಗಬಾಳ ರಸ್ತೆಯ ಸ್ವಾಮಿ ಪ್ಲಾಟ್ ಬಡಾವಣೆಯ ವಿಜಯ್ ದೇಸಾಯಿ ಎಂಬುವರ ಮನೆಗೆ ನುಗ್ಗಿ ಅವರ 4 ಮತ್ತು 3 ವರ್ಷದ ಮಕ್ಕಳನ್ನು ಅಪಹರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ವಿಷಯ ತಿಳಿದು ಕೂಡಲೇ ಕಾರ್ಯಪ್ರವೃತ್ತರಾದ ಅಥಣಿ ಪೊಲೀಸರು ಮೂರು ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಮಹಾರಾಷ್ಟ್ರ ಗಡಿಯಾದ ಕೋಹಳ್ಳಿ ಸಿಂಧೂರ್ ಮಾರ್ಗ ಮಧ್ಯದಲ್ಲಿ ಅಪಹರಣಕಾರರನ್ನು ಪೊಲೀಸರು ತಡೆಗಟ್ಟಿದ್ದರು.
ಈ ವೇಳೆ, ಪೊಲೀಸರು ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಆತ್ಮರಕ್ಷಣೆಗೆ ಓರ್ವ ರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಬಂಧಿತ ಕೊಲ್ಲಾಪುರ ಜಿಲ್ಲೆ ಹಾತ್ ಕನಗಲಾ ಗ್ರಾಮದ ಸಂಬಾ ರಾವಸಾಬ ಕಾಂಬಳೆ ಎಂದು ಗುರುತಿಸಲಾಗಿದ್ದ, ಆತನನ್ನು ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಜಮೀರ್ ಡಾಂಗೆ ಹಾಗೂ ರಮೇಶ್ ಹಾದಿಮನಿ ಎಂಬ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಅವರನ್ನು ಕೂಡ ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಥಣಿ ಪೊಲೀಸರ ತುರ್ತು ಕಾರ್ಯಾಚರಣೆಯಿಂದ ಇಬ್ಬರು ಮಕ್ಕಳು ಸುರಕ್ಷಿತವಾಗಿ ಮನೆ ಸೇರಿವೆ. ಪೊಲೀಸರ ಸಕಾಲಿಕ ಕರ್ತವ್ಯಪ್ರಜ್ಞೆಯ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.