ಮನೆ ರಾಜ್ಯ ಶಸ್ತ್ರಾಸ್ತ್ರ ತರಬೇತಿ ವಿಚಾರ: ಸರ್ಕಾರ ಜೀವಂತವಾಗಿದೆಯೇ? ಎಂದ ಸಿದ್ದರಾಮಯ್ಯ

ಶಸ್ತ್ರಾಸ್ತ್ರ ತರಬೇತಿ ವಿಚಾರ: ಸರ್ಕಾರ ಜೀವಂತವಾಗಿದೆಯೇ? ಎಂದ ಸಿದ್ದರಾಮಯ್ಯ

0

ಬೆಂಗಳೂರು (Bengaluru)-ಮಡಿಕೇರಿಯ ಶಾಲಾ ಆವರಣದಲ್ಲಿ ಭಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಸರ್ಕಾರ ಜೀವಂತವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಮಡಿಕೇರಿಯ ಶಾಲಾ ಆವರಣದಲ್ಲಿ ಯುವಜನರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿರುವ ಭಜರಂಗದಳ ಕಾನೂನಿಗೆ ಬಹಿರಂಗ ಸವಾಲು ಹಾಕಿದೆ. ಸಂಘಟನೆಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ಜೀವಂತ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ಬಂದೂಕು ಬಳಕೆಯ ತರಬೇತಿ ನೀಡಿದರೂ ಕ್ರಮ ಜರುಗಿಸದೇ ಇರುವುದನ್ನು ನೋಡಿದರೆ ರಾಜ್ಯದಲ್ಲಿ ಗೃಹ ಮತ್ತು ಶಿಕ್ಷಣ ಸಚಿವರಿದ್ದಾರೆಯೇ ಎಂಬ ಅನುಮಾನ ಬರುತ್ತದೆ. ಭಜರಂಗ ದಳ ನಡೆಸಿದ ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ಮತ್ತು ಸುಜಾ ಕುಶಾಲಪ್ಪ ಪಾಲ್ಗೊಂಡಿದ್ದಾರೆ. ಇವರ ಬದ್ಧತೆ ಸಂವಿಧಾನಕ್ಕೋ? ಬಜರಂಗ ದಳಕ್ಕೋ? ಎಂದು ಅವರು ಕುಟುಕಿದ್ದಾರೆ.

ಶಸ್ತ್ರಾಸ್ತ್ರ ತರಬೇತಿ‌‌ ಸಂಪೂರ್ಣವಾಗಿ ಕಾನೂನು ವಿರೋಧಿ ಚಟುವಟಿಕೆಯಾಗಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಕ್ಷಣ ಭಜರಂಗ ದಳದ ನಾಯಕರನ್ನು ಬಂಧಿಸಲು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವ ಶ್ರೀರಾಮ ಸೇನೆ, ಭಜರಂಗ ದಳ, ಹಿಂದೂ ಜಾಗರಣ ವೇದಿಕೆ ಮೊದಲಾದ ಸಂಘಟನೆಗಳ‌ ಜೊತೆ ತನ್ನ ಸಂಬಂಧ ಏನು ಎಂಬುದನ್ನು ಬಿಜೆಪಿ‌ ಮೊದಲು ಸ್ಪಷ್ಟಪಡಿಸಬೇಕು. ರಾಜ್ಯದಲ್ಲಿ ಶಾಂತಿ ಕದಡಿ ಭೀತಿ ಹುಟ್ಟಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರ ಕೋಮು‌ವಾದಿ ಸಂಘಟನೆಗಳಿಗೆ ವಿಶೇಷ ಅನುಮತಿ ನೀಡಿದೆಯೇ ಎಂದವರು ಕೇಳಿದ್ದಾರೆ.

ಹಿಂದಿನ ಲೇಖನದೇಗುಲವಾದರೆ ಹಿಂದೂಗಳಿಗೆ, ದರ್ಗಾವಾದರೆ ಮುಸ್ಲಿಂರಿಗೆ ಬಿಟ್ಟುಕೊಡಿ: ಪೇಜಾವರ ಶ್ರೀ
ಮುಂದಿನ ಲೇಖನವಾಟ್ಸ್‌ಆ್ಯಪ್ ಮೂಲಕ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿ