ಶ್ರೀನಗರ(ಜಮ್ಮು ಕಾಶ್ಮೀರ): ಭಯೋತ್ಪಾದಕ ಕೃತ್ಯಗಳು, ದುಷ್ಕೃತ್ಯಕ್ಕೆ ಪಿತೂರಿ ಹಾಗು ಸ್ಥಳೀಯೇತರ ಜನರ ಹತ್ಯೆ ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಇಂದು ಕಾಶ್ಮೀರದ ಹಲವೆಡೆ ದಾಳಿ ನಡೆಸುತ್ತಿದೆ.
ಶ್ರೀನಗರ, ಸೊಪೋರ್ ಮತ್ತು ಬುಡ್ಲಾಮ್ ಸೇರಿದಂತೆ ಹಲವು ಸ್ಥಳದಲ್ಲಿ ದಾಳಿ ಮುಂದುವರೆದಿದೆ. 2024ರ ಫೆಬ್ರವರಿ 7ರಂದು ಶ್ರೀನಗರದ ಶಲ್ಲಾ ಕಡಲ್ ಸಮೀಪ ಇಬ್ಬರು ಸ್ಥಳೀಯರಲ್ಲದ ಪಂಜಾಬ್ ನೌಕರರ ಹತ್ಯೆ ನಡೆದಿತ್ತು. ಅಮೃತ್ಪಾಲ್ ಸಿಂಗ್ ಮತ್ತು ರೋಹಿತ್ ಮಶಿಹ್ ಎಂಬವರನ್ನು ಎಲ್ಇಟಿ ಉಗ್ರ ಸಂಘಟನೆಯ ನಂಟು ಹೊಂದಿರುವ ದಿ ರೆಸಿಸ್ಟಂಟ್ ಫ್ರಂಟ್ ಉಗ್ರರು ಕೊಂದಿದ್ದರು. 2024ರ ಆಗಸ್ಟ್ನಲ್ಲಿ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಸೇರಿದಂತೆ ನಾಲ್ವರ ವಿರುದ್ಧ ಎನ್ಐಎ ಚಾರ್ಚ್ಶೀಟ್ ದಾಖಲಿಸಿತ್ತು.
ಈ ಚಾರ್ಜ್ಶೀಟ್ ಪ್ರಕಾರ, ಆದಿಲ್ ಮಂಜೂರ್ ಲಾಂಗೂ ಎಂಬ ಉಗ್ರ ಇಬ್ಬರು ಕಾರ್ಮಿಕರ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಮಶಿಹ್ ಒಂದು ದಿನದ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
ಲಾಂಗೂ ಹೊರತಾಗಿ, ಚಾರ್ಜ್ಶೀಟ್ನಲ್ಲಿ ಎನ್ಐಎ ಅಹ್ರಾನ್ ರಸೂಲ್ ದಾರ್ ಅಲಿಯಾಸ್ ತೋಟಾ, ದಾವೂದ್ ಮತ್ತು ಪಾಕಿಸ್ತಾನದ ಹ್ಯಾಂಡ್ಲರ್ ಜಹಂಗೀರ್ ಅಲಿಯಾಸ್ ಪೀರ್ ಸಾಹಬ್ ಎಂಬಾತನೂ ಆರೋಪಿ ಎಂದು ಉಲ್ಲೇಖಿಸಿದೆ. ಜಮ್ಮು ನ್ಯಾಯಾಲಯಕ್ಕೆ ಜಾರ್ಜ್ಶೀಟ್ ಸಲ್ಲಿಸಲಾಗಿದೆ.
ಸೋಪೋರ್ನ ಎರಡು ಸ್ಥಳಗಳಲ್ಲದೇ ಶ್ರೀನಗರದಲ್ಲಿರುವ ಉದ್ಯಮಿಯೊಬ್ಬರ ಕುಟುಂಬಕ್ಕೆ ಸೇರಿದ ಮನೆಯ ಮೇಲೂ ಎನ್ಐಎ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.














