ಮನೆ ರಾಜ್ಯ ಒಂದೇ ದಿನ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸಿದ ಕೆಎಂಎಫ್.!

ಒಂದೇ ದಿನ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸಿದ ಕೆಎಂಎಫ್.!

0

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ ಒಂದು ಮಹತ್ವದ ಮೈಲಿಗಲ್ಲು ತಲುಪಿದ್ದು, ಒಂದೇ ದಿನದಲ್ಲಿ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಮೇ 22ರ ನಂತರದ ಈ ಸಾಧನೆ, ರಾಜ್ಯದ ಹಾಲು ಉತ್ಪಾದನೆ ಹಾಗೂ ಡೈರಿ ಉದ್ಯಮದ ಬೆಳವಣಿಗೆಗೆ ದೊಡ್ಡ ತಿರುವು ನೀಡಿದೆ.

ಕೆಎಂಎಫ್ ಮೂಲಗಳ ಪ್ರಕಾರ, ಈ ದಾಖಲೆ ನಿರ್ಮಾಣಕ್ಕೆ ಹಲವು ಕಾರಣಗಳಿವೆ. ಮುಂಗಾರು ಮಳೆ ಆರಂಭದಿಂದ ಹಸಿರು ಮೇವಿನ ಲಭ್ಯತೆ ಜಾಸ್ತಿ ಆಗಿದ್ದು, ಜಾನುವಾರುಗಳಿಗೆ ಪೌಷ್ಟಿಕ ಆಹಾರ ಲಭ್ಯವಾಗಿದೆ. ಇದರಿಂದ ಜಾನುವಾರುಗಳ ಆರೋಗ್ಯ ಉತ್ತಮಗೊಂಡು ಹಾಲು ಉತ್ಪಾದನೆಯೂ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ, ರಾಜ್ಯದ ಹಲವೆಡೆಗಳ ಹಾಲು ಸಹಕಾರ ಸಂಘಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹಿಸುವಲ್ಲಿ ಯಶಸ್ವಿಯಾಗಿವೆ.

ಈ ದಾಖಲೆಯೊಂದಿಗೆ, ಕೆಎಂಎಫ್ ತನ್ನ ಹಿಂದಿನ ಗರಿಷ್ಠ ದಾಖಲೆ — 2024ರ ಜೂನ್ 28ರಂದು ಸಂಗ್ರಹಿಸಿದ್ದ 1 ಕೋಟಿ ಲೀಟರ್ ಹಾಲು ಅನ್ನು ಮೀರಿಸಿದೆ. ಇದರ ಮೂಲಕ ದೈನಂದಿನ ಸರಾಸರಿ ಹಾಲು ಸಂಗ್ರಹ ಪ್ರಮಾಣವೂ ಗಮನಾರ್ಹವಾಗಿ ಏರಿಕೆಯಾಗಿದೆ.

ಜೂನ್ 1 ರಂದು ವಿಶ್ವ ಹಾಲು ದಿನಾಚರಣೆಯ ಅಂಗವಾಗಿ, ಕೆಎಂಎಫ್ ತನ್ನ ಜನಪ್ರಿಯ ನಂದಿನಿ ಬ್ರ್ಯಾಂಡ್ ಅಡಿಯಲ್ಲಿ 18 ಹೊಸ ಹಾಲು ಆಧಾರಿತ ಉತ್ಪನ್ನಗಳನ್ನು ಬಿಡುಗಡೆ ಮಾಡಿತ್ತು. ಕೇಕ್‌ಗಳು, ಬೇಕರಿ ಐಟಂಗಳಾಗಿ ಬ್ರೆಡ್, ಬನ್‌ಗಳು, ನಂದಿನಿ ಹಲ್ವಾ, ಲಸ್ಸಿ, ಮೊಸರು, ಮಜ್ಜಿಗೆ, ಐಸ್ ಕ್ರೀಂ ಸೇರಿದಂತೆ 150 ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಇದೀಗ ಹೊಸ ಬೇಕರಿ ಉತ್ಪನ್ನಗಳ ಸೇರ್ಪಡೆಯೊಂದಿಗೆ, ಕೆಎಂಎಫ್ ಉದ್ಯಮ ಮತ್ತಷ್ಟು ವಿಸ್ತರಣೆಯಾದಂತಾಗಿದೆ.