ಮನೆ ರಾಜ್ಯ ಜೀವನದ ಮೌಲ್ಯ ಅರ್ಥಮಾಡಿಕೊಳ್ಳುವ ಜ್ಞಾನ ಗೊತ್ತಿರಬೇಕು: ಡಾ.ಎಸ್.ಎಲ್.ಭೈರಪ್ಪ

ಜೀವನದ ಮೌಲ್ಯ ಅರ್ಥಮಾಡಿಕೊಳ್ಳುವ ಜ್ಞಾನ ಗೊತ್ತಿರಬೇಕು: ಡಾ.ಎಸ್.ಎಲ್.ಭೈರಪ್ಪ

0

ಮೈಸೂರು(Mysuru): ಜೀವನದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಗೊತ್ತಿರಬೇಕು.‌ ಆ ಮೌಲ್ಯಗಳು ಯಾವುದು ಎನ್ನುವುದನ್ನು ತಿಳಿಯಬೇಕು. ಇಲ್ಲದಿದ್ದರೆ ಅದು ಕೇವಲ ಕಥೆ ಆಗುತ್ತದೆ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕ ಹಾಗೂ ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಸದ್ವಿದ್ಯಾ ಶಾಲೆಯ ವಿವೇಕಾನಂದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 92ನೇ ಜನ್ಮ ದಿನದ ಸಂಭ್ರಮದ ಕಾರ್ಯಕ್ರಮದಲ್ಲಿ ಅಭಿವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ರಾಮಾಯಣ ಮಹಾಭಾರತವು ವೇದಕ್ಕೆ ಸಮಾನವಾದುದು. ಜೀವನದ ಮೌಲ್ಯಗಳು ಹೇಗಿರಬೇಕು ಎನ್ನುವುದನ್ನು ಚೆನ್ನಾಗಿ ತಿಳಿಸಿಕೊಡಲಾಗಿದೆ ಎಂದರು.

ಜನ್ಮ ದಿನ ಆಚರಿಸಿಕೊಳ್ಳುವ ಅಭ್ಯಾಸವಿಲ್ಲ. ಕಸಾಪ ಜಿಲ್ಲಾ ಘಟಕದವರಿಂದಾಗಿ ಇದೇ‌ ಮೊದಲ ಬಾರಿಗೆ ಪಾತ್ರವಾಗಿದ್ದೇನೆ. ಹೀಗೆ ಆಚರಿಸುವವರು ಚಿಕ್ಕಂದಿನಿಂದಲೂ ಯಾರೂ ಇರಲಿಲ್ಲ. ಅಲ್ಲದೇ, ನನಗೆ ಜನ್ಮ ದಿನಾಂಕದ ಬಗ್ಗೆಯೇ ಅನುಮಾನವಿದೆ. ಶಾಲಾ ದಾಖಲಾತಿಗಳಲ್ಲಿ ಆ.20 ಎಂದು ನಮೂದಾಗಿದೆಯಷ್ಟೆ ಎಂದು ತಿಳಿಸಿದರು.

ಪ್ರೌಢಶಾಲಾ ಮಟ್ಟದಲ್ಲಿ ಮಕ್ಕಳಿಗೆ ಏನು ಆಸಕ್ತಿ ಬೆಳೆಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಪ್ರೌಢಶಾಲೆ ನಂತರದ ಉಪನ್ಯಾಸಕರು ಯಾವುದೋ ಸಿದ್ಧಾಂತದಲ್ಲಿ ಮುಳುಗಿರುತ್ತಾರೆ ಅಥವಾ ಬರಡಾಗಿರುತ್ತಾರೆ‌. ಸಾಹಿತ್ಯದ ರಸ ಅನುಭವಿಸುವುದು ಪ್ರೌಢಶಾಲಾ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.

ನಾನು ಇಷ್ಟು ವರ್ಷ ಬದುಕಿರಲು ದುಶ್ಚಟಗಳು ಇಲ್ಲದಿರುವುದೇ ಕಾರಣ. ಕಾಫಿ-ಟೀ ಕುಡಿಯುವುದಿಲ್ಲ. ಹೀಗಾಗಿ ನಾನು ಒಂಬತ್ತು ದಶಕ‌ಗಳನ್ನು ಕಳೆದಿದ್ದೀನಿ. ಕಾಯಿಲೆಗಳಿಗೆ ಅವಕಾಶ‌ ಕೊಡದಂತೆ ಅಭ್ಯಾಸಗಳನ್ನು ಇಟ್ಟುಕೊಳ್ಳಬೇಕು  ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸಿ.ಆರ್.ನಾಗರಾಜ್‌, ಜಂಟಿ ಕಾರ್ಯದರ್ಶಿ ಪ್ರೊ.ಕೆ.ಎಸ್.ಹಿರಿಯಣ್ಣ, ಸಂಸ್ಕೃತಿ ಚಿಂತಕ ಕೆ.ರಘುರಾಂ ವಾಜಪೇಯಿ ಹಾಜರಿದ್ದರು.

ಶ್ರೀವಿದ್ಯಾ ಪ್ರಾರ್ಥಿಸಿದರು. ಕೃಪಾ ಮಂಜುನಾಥ್‌ ಸ್ವಾಗತಿಸಿದರು. ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಮ.ನ.ಲತಾ ಮೋಹನ್‌ ನಿರೂಪಿಸಿದರು.

ಹಿಂದಿನ ಲೇಖನಮಾಲೇಗಾಂವ್‌ ಸ್ಫೋಟ: ಎನ್‌ಐಎ ವಕೀಲರಾಗಿ ವಾದಿಸಿರುವುದನ್ನು ಉಲ್ಲೇಖಿಸಿದ ಆರೋಪಿ: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ರೇವತಿ
ಮುಂದಿನ ಲೇಖನಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ : ಆಗಸ್ಟ್ 25 ರಂದು  ಮತದಾರರ ಪಟ್ಟಿಯ ಕರಡು ಪ್ರಕಟ