ಬೆಂಗಳೂರು : ಕೋಗಿಲು ಲೇಔಟ್‌ನಲ್ಲಿ 37 ಕುಟುಂಬಗಳನ್ನು ಹೊರತುಪಡಿಸಿ ಉಳಿದವರೆಲ್ಲ ಬೇರೆ ಕಡೆಯಿಂದ ಬಂದವರು ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಈಗಾಗಲೇ ಪ್ರತಿ ಮನೆಯಿಂದ ಐದು ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ತಾತ್ಕಾಲಿಕ ಆದೇಶ ಪ್ರತಿ, ಪಡಿತರ ಚೀಟಿಯನ್ನು ಸಂಗ್ರಹಿಸಿದ್ದು, ಅವುಗಳ ನೈಜತೆಯನ್ನು ಜಿಬಿಎ, ಕಂದಾಯ, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ.
119 ಮನೆಗಳನ್ನು ಸಮೀಕ್ಷೆ ಮಾಡಲಾಗಿದ್ದು 118 ಕುಟುಂಬಗಳಿಗೆ ಆಧಾರ್ ಕಾರ್ಡ್ ಇದೆ. 102 ಕುಟುಂಬಗಳಿಗೆ ವೋಟರ್ ಕಾರ್ಡ್ ಇದ್ದರೆ 77 ಕುಟುಂಬಗಳಿಗೆ ರೇಷನ್ ಕಾರ್ಡ್ ಇದೆ. 63 ಕುಟುಂಬಗಳಿಗೆ ಆದಾಯ ಪ್ರಮಾಣ ಪತ್ರ, 56 ಕುಟುಂಬಗಳಿಗೆ ಜಾತಿ ಪ್ರಮಾಣಪತ್ರ ನೀಡಲಾಗಿದೆ. 37 ಕುಟುಂಬಗಳು ಮೂಲ ಬೆಂಗಳೂರಿನವರು ಎಂಬ ತೀರ್ಮಾನಕ್ಕೆ ಬರಲಾಗಿದೆ. ಹೀಗಾಗಿ ಆರಂಭದಲ್ಲಿ 37 ಕುಟುಂಬಗಳಿಗೆ ಮಾತ್ರ ವಸತಿ ಸೌಲಭ್ಯ ಸಿಗುವ ಸಾಧ್ಯತೆಯಿದೆ. ಇಲ್ಲಿಯೂ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಇರುವ ಕುಟುಂಬಗಳನ್ನ ಪರಿಶೀಲಿಸಿ ಮನೆ ಕೊಡಬೇಕೇ? ಬೇಡವೇ ಎಂಬ ನಿರ್ಧಾರ ಆಗಲಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆಯ ಯಲಹಂಕ ಹೋಬಳಿಯ ಕೋಗಿಲು ಬಂಡೆ ಕ್ವಾರಿ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 167 ಮನೆ ಮತ್ತು ಶೆಡ್‌ಗಳನ್ನು ನೆಲಸಮಗೊಳಿಸಲಾಗಿದ್ದು ಮನೆ ನೀಡುವಂತೆ ಕೋರಿ 250ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಮನೆ ಕಳೆದುಕೊಂಡವರ ದಾಖಲೆಗಳ ಪರಿಶೀಲನೆ ಬಳಿಕ ಅವರಲ್ಲಿ ಅರ್ಹರಿದ್ದರೆ ಬೈಯಪ್ಪನಹಳ್ಳಿಯಲ್ಲಿ ನಿರ್ಮಿಸಿರುವ ವಸತಿ ಸಮುಚ್ಚಯದಲ್ಲಿ ಮನೆ ನೀಡಲು ಸರ್ಕಾರ ತೀರ್ಮಾನಿಸಿದೆ. ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಾಯಧನ ಲಭ್ಯವಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಪ್ರತಿ ಮನೆಗೆ 5 ಲಕ್ಷ ರೂ. ನೀಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ಸಹಾಯಧನ ಸೇರಿ 8.70 ಲಕ್ಷ ರೂ. ಸಿಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 9.50 ಲಕ್ಷ ರೂ. ಸಿಗುತ್ತದೆ. ಸಾಮಾನ್ಯ ವರ್ಗದವರಿಗೆ 2.50 ಲಕ್ಷ ರೂ. ಸಾಲದ ರೂಪದಲ್ಲಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 1.70 ಲಕ್ಷ ರೂ. ಸಾಲ ನೀಡಲಾಗುತ್ತದೆ.














