ಮನೆ ದೇವಸ್ಥಾನ ಕೋಲತ್ತಿರಿ ರಾಜವಂಶ

ಕೋಲತ್ತಿರಿ ರಾಜವಂಶ

0

ಪೌರಾಣಿಕವಾಗಿ ತ್ರೇತಾಯುಗದಲ್ಲಿ ಮಹಾವಿಷ್ಣುವಿನ ಆರನೇ ಅವತಾರಿಯಾಗಿ ಅವಿರ್ಭವಿಸಿದ ಪರಶುರಾಮನು ಸಮುದ್ರರಾಜನ ಮೂಲಕ ಪಡಕೊಂಡ ಗೋಕರ್ಣದಿಂದ ಕನ್ಯಾಕುಮಾರಿಗಿನ ಭೂ ಪ್ರದೇಶವೇ ʼಕೇರಳʼವೆಂದು ತಿಳಿಯಲಾಗಿದೆ. ಚಾರಿತ್ರಿಕವಾಗಿ ಉತ್ತರ ದೇಶದಿಂದ ದಕ್ಷಿಣ ಅಭಿಮುಖವಾಗಿ ಬಂದಂತಹ ದ್ರಾವಿಡ ಜನಾಂಗದವರು ನೆಲೆಯೂರಿದ ಈ ಕೇರಳ ನಾಡಿನಲ್ಲಿ ಆದಿಯಲ್ಲಿ ಬ್ರಾಹ್ಮಣವರ್ಗದವರು ಇರಲಿಲ್ಲ. ಶೂದ್ರ ಮತ್ತು ಗುಡ್ಡಕಾಡು ಪಂಗಡದವರು ಮಾತ್ರ ವಾಸವಾಗಿದ್ದರು ಮತ್ತು ಅವರು ಶಕ್ತಿದೇವತೆಯ ಆರಾಧಕರಾಗಿದ್ದರು ಎಂದು ಚರಿತ್ರೆಗಾರರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಕೇರಳ ರಾಜ್ಯದ ತಲಶ್ಶೇರಿವರೆಗೆ ವಿಸ್ತಾರವಾಗಿರುವ ಪ್ರದೇಶವನ್ನು ಕ್ರಿ.ಶ. ಐದನೇ ಶತಮಾನ ಆರಂಭದಲ್ಲಿ ಯಾದವ ರಾಜವಂಶಗಳು ಆಳ್ವಿಕೆ ನಡೆಸಿದವು. ಇದನ್ನ “ಏಳಿಮಲೆ” ಎಂದು ಕರೆಯಲಾಗುತ್ತಿದ್ದು, ಪೌರಾಣಿಕವಾಗಿ “ಸಪ್ತಶೈಲ” ಎಂದು ಇದು ಪ್ರಸಿದ್ಧಿಯಾಗಿತ್ತು. ಯಾದವ ವಂಶದ “ಕೋಲಾಯನ್” ಎಂಬ ವಿಭಾಗದ ರಾಜರುಗಳು ಆಳಿದುದರಿಂದ ಏಳಿಮಲೆ ರಾಜ್ಯವು “ಕೋಲತ್ತು ನಾಡು” ಎಂದು ಕರೆಯಲ್ಪಟ್ಟಿತು.      

ಕೇರಳ ಸಾಹಿತ್ಯದಲ್ಲಿ ಪ್ರಸಿದ್ಧನಾದ ʼನಂದನ್ʼ ಎಂಬ ರಾಜನು ಏಳಿಮಲೆ ರಾಜ್ಯದ ಆಡಳಿತ ನಡೆಸಿದ ಪ್ರಸಿದ್ಧ ಕೋಲಾಯನ್ ರಾಜನಾಗಿದ್ದನು. ನಂದನನ ಪರಂಪರೆಯೇ ಮುಂದಕ್ಕೆ ʼಚಿರಕ್ಕಲ್ ರಾಜವಂಶʼವಾಗಿಯೂ, ʼಮೂಷಿಕ ರಾಜವಂಶʼವಾಗಿಯೂ, ʼಕೋಲತ್ತಿರಿ ರಾಜವಂಶʼವಾಗಿಯೂ ಬೆಳವಣಿಗೆಯಾಯಿತು. ಆ ಕೋಲತ್ತಿರಿ ರಾಜವಂಶದವರು ಏಳಿಮಲೆ ರಾಜ್ಯವನ್ನು “ಕೋಲ ಸ್ವರೂಪ”ವೆಂದು ವಿಭಜಿಸಿ ಆಳ್ವಿಕೆ ನಡೆಸಿದರು. ಕೋಲತ್ತೀರಿ ರಾಜವಂಶದ ಕುಲದೇವತೆಯು ಭಗವತಿಯಾದ ಮಾಡಾಯಿಕಾವಿಲಮ್ಮ ಭಗವತಿ ಆಗಿರುತ್ತಾಳೆ.

ಕೋಲತ್ತಿರಿ ರಾಜವಂಶದ ಸುಮಾರು 12 ರಾಜ ಕುಟುಂಬಗಳು ಕೇರಳಾದ್ಯಂತ ಹರಡಿದ್ದು ಈ ಕೆಳಗಿನಂತಿದೆ.

1.ಪಯಂಗಡಿಯ ಅಡಿತ್ತಿಲ ರಾಜಕುಟುಂಬ – ಕಣ್ಣೂರು ಜಿಲ್ಲೆ,

2. ಚೆರುಕುನ್ನಿಲ್ ಕವಿಣೆಶ್ಶೇರಿ ರಾಜ ಕುಟುಂಬ – ಕಣ್ಣೂರು ಜಿಲ್ಲೆ,

3. ಪಡಿಂ ಕೋವಿಲಕಮ್ ರಾಜ ಕುಟುಂಬ -,ಕಣ್ಣೂರು ಜಿಲ್ಲೆ.

4. ಚಿರಕ್ಕಲ್ ಕೋವಿಲಕಮ್ ರಾಜ ಕುಟುಂಬ – ಕಣ್ಣೂರು ಜಿಲ್ಲೆ

5. ತಿರುವನಂತಪುರಂ ಕೋವಿಲಕಂ ರಾಜ ಕುಟುಂಬ – ತಿರುವನಂತಪುರಂ ಜಿಲ್ಲೆ.

6. ಮಾವೇಲಿಕ್ಕರ ಕೊಟ್ಟಾರಂ ರಾಜ ಕುಟುಂಬ – ಅಲಪ್ಪುಯ ಜಿಲ್ಲೆ

7. ಪ್ರಾಯಿಕ್ಕರ ಕೊಟ್ಟಾರಂ ರಾಜ ಕುಟುಂಬ – ಅಲಪ್ಪುಯ ಜಿಲ್ಲೆ,

8. ಎಣ್ಣಾಕಾಟ್ಟು ಕೊಟ್ಟಾರಂ ರಾಜ ಕುಟುಂಬ – ಅಲಪ್ಪುಯ ಜಿಲ್ಲೆ,

9. ಕಾರ್ತಿಕಪಳ್ಳಿ ಕೊಟ್ಟಾರಂ ರಾಜ ಕುಟುಂಬ – ಅಲಪ್ಪುಯ ಜಿಲ್ಲೆ,

10.  ಮಾರಿಯಂಪಳ್ಳಿ ಕೊಟ್ಟಾರಂ ರಾಜ ಕುಟುಂಬ – ಕೋಟ್ಟಯಂ ಜಿಲ್ಲೆ

11. ಆರನ್ಮುಳ ಕೊಟ್ಟಾರಂ ರಾಜ ಕುಟುಂಬ – ಪತ್ತನಂತಿಟ್ಟ ಜಿಲ್ಲೆ

12. ತಿರುವಲ್ಲಕೊಟ್ಟಾರಂ ರಾಜಕುಟುಂಬ – ಪತ್ತನಂತಿಟ್ಟ ಜಿಲ್ಲೆ

ಮೇಲ್ಕಾಣಿಸಿದ 12 ರಾಜವಂಶದವರು ಇಂದೂ ಮೂಡಾಯಿ ಕ್ಷೇತ್ರಕ್ಕೆ ಆಗಮಿಸಿ, ಭಗವತಿಯ ದರ್ಶನ ಪಡೆದು ತೆರಳುವ ಸಂಪ್ರದಾಯವಿದೆ.

“ಉದಯವರ್ಮ ರಾಜ ಚರಿತ್ರಂ” ಎಂಬ ಸಂಸ್ಕೃತ ಗ್ರಂಥದ ಆಧಾರದ ಪ್ರಕಾರ ಉದಯವರ್ಮ ರಾಜ ಎಂಬ ಕೋಲತ್ತಿರಿ ಅರಸು ದಕ್ಷ ಆಡಳಿತಕಾರಿಯಾಗಿದ್ದು, ಎಲ್ಲ ಸಮುದಾಯದ ಪ್ರಜೆಗಳಿಂದಲೂ ಗೌರವಾನ್ವಿತನಾಗಿದ್ದನು. ಆತನು ಕೇರಳದ ಸೃಷ್ಟಿಕರ್ತನಾದ ಪರಶುರಾಮನು ಗೈದಂತೆಯೇ ಆಂಧ್ರಾ ಮತ್ತು ಮದರಾಸು ಪರದೇಶಗಳಿಂದ ಬ್ರಾಹ್ಮಣ ಕುಟುಂಬಗಳನ್ನ ಬರಮಾಡಿಸಿ ಅವರನ್ನು “ಕೇರಳ ಬ್ರಾಹ್ಮಣ”ರೆಂದು “ಎಂಬ್ರಾಂದಿರಿ”ಗಳೆಂದು ಗೌರವವಾಗಿ ಹೆಸರಿಸಿ, ಬೇರೆ ಬೇರೆ ಗ್ರಾಮಗಳಲ್ಲಿ ನೆಲೆಗೊಳಿಸಿದರು. ಹಾಗೆಯೇ ಗೋಕರ್ಣ-ಗೋವಾ ಭಾಗಗಳಿಂದ ಕೊಂಕಣ ಬ್ರಾಹ್ಮಣಸ್ಥರನ್ನು ಬಂಗಾಳದಿಂದ ಭಟ್ಟಾರಕರ್ ಬ್ರಾಹ್ಮಣರನ್ನೂ ಕರೆಸಿ ನೆಲೆಗೊಳಿಸಿದರು.

ಹಿಂದಿನ ಲೇಖನಪುನರ್ವಸು: ಪ್ರಥಮ, ದ್ವಿತೀಯ, ತೃತೀಯ ಚರಣಗಳು
ಮುಂದಿನ ಲೇಖನ“ಗಣ’ ಚಿತ್ರದ  ರೊಮ್ಯಾಂಟಿಕ್‌ ಸಾಂಗ್‌ ಬಿಡುಗಡೆ