ಕನ್ನಡ ಚಿತ್ರರಂಗ ಎಂದಿಗೂ ಮರೆಯದಂತಹ ನಟ ವಜ್ರಮುನಿ. ಅವರಿಗೆ ಸರಿಸಾಟಿ ಆಗುವಂತಹ ಕಲಾವಿದ ಮತ್ತೊಬ್ಬರಿಲ್ಲ. ವಜ್ರಮುನಿ ಅವರ ಮ್ಯಾನರಿಸಂ ಸಖತ್ ಫೇಮಸ್. ‘ಎಲಾ ಕುನ್ನಿ..’ ಎಂದು ಅವರು ಹೇಳಿದ್ದ ಡೈಲಾಗ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅದನ್ನೇ ಈಗ ಶೀರ್ಷಿಕೆಯಾಗಿಸಿಕೊಂಡು ಸಿನಿಮಾ ಮೂಡಿಬರುತ್ತಿದೆ.
‘ಯಲಾ ಕುನ್ನಿ’ ಚಿತ್ರದಲ್ಲಿ ಕೋಮಲ್ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಇಂದು ಅವರ ಜನ್ಮದಿನ. ಆ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ವಜ್ರಮುನಿ ಲುಕ್ ನಲ್ಲಿಯೇ ಈ ಪೋಸ್ಟರ್ ಮೂಡಿಬಂದಿದೆ ಎಂಬುದು ವಿಶೇಷ.
‘ಯಲಾ ಕುನ್ನಿ’ ಸಿನಿಮಾವನ್ನು ‘ಸೌಭಾಗ್ಯ ಸಿನಿಮಾಸ್’ ಬ್ಯಾನರ್ ಮೂಲಕ ಮಹೇಶ್ ಗೌಡ ಅವರು ನಿರ್ಮಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಎನ್.ಆರ್. ಪ್ರದೀಪ್ ಅವರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ‘ಎಲಾ ಕುನ್ನಿ’ ಚಿತ್ರದ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ.
‘ನವರಸ ನಾಯಕ’ ಜಗ್ಗೇಶ್ ಅವರ ಮಗ ಯತಿರಾಜ್ ಹಾಗೂ ವಜ್ರಮುನಿ ಅವರ ಮೊಮ್ಮಗ ಆಕರ್ಶ್ ಅವರು ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಎಲಾ ಕುನ್ನಿ’ ಚಿತ್ರದ ಶೀರ್ಷಿಕೆ ಗಮನ ಸೆಳೆಯುತ್ತಿದೆ. ಅಷ್ಟೇ ಅಲ್ಲದೇ, ‘ಮೇರಾ ನಾಮ್ ವಜ್ರಮುನಿ’ ಎಂಬ ಟ್ಯಾಗ್ ಲೈಗ್ ಕೂಡ ಹೈಲೈಟ್ ಆಗಿದೆ. ‘ನರಕ ತುಂಬಿ ಮರಳಿ ಬಂದ ರಾಮನ ಗುಣದ ರಾವಣ’ ಎಂಬ ಸಾಲು ಈ ಪೋಸ್ಟರ್ ನಲ್ಲಿದೆ.