ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಆಸ್ತಿಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಜನ ಸಾಮಾನ್ಯರ ಮುಂದೆ ಮಚ್ಚುಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹಲವರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಮೃತ ವ್ಯಕ್ತಿಯನ್ನು ಚೆನ್ನಪ್ಪ ನಾರಿನಾಳ್ ಎಂದು ಗುರುತಿಸಲಾಗಿದೆ. ಚಿಕ್ಕದೊಂದು ಬೇಕರಿಯಲ್ಲಿ ಇದ್ದ ವೇಳೆ ಅಪರಿಚಿತ ದಾಳಿಕೋರರ ಗುಂಪೊಂದು ಅಕಸ್ಮಾತ್ ಅಲ್ಲಿಗೆ ನುಗ್ಗಿ, ಮಚ್ಚುಗಳು ಮತ್ತು ಮರದ ದಿಮ್ಮಿಯಿಂದ ಆತನ ಮೇಲೆ ದಾಳಿ ನಡೆಸಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಚೆನ್ನಪ್ಪ ಹೊರಗೆ ಓಡುತ್ತಿರುವುದು, ಆದರೆ ದಾಳಿಕೋರರು ಬೆನ್ನಟ್ಟಿ ಆತನನ್ನು ಹಿಡಿದು ಮಚ್ಚು ಲಾಂಗುಗಳಿಂದ ಅಟ್ಟಾಡಿಸಿ ಹೊಡೆದು ಕೊಂದ ದೃಶ್ಯ ಸ್ಪಷ್ಟವಾಗಿದೆ. ಇಬ್ಬರು ವ್ಯಕ್ತಿಗಳು ಮಚ್ಚುಗಳಿಂದ ಹಲ್ಲೆ ನಡೆಸಿದರೆ, ಇನ್ನೊಬ್ಬನು ಮರದ ದಿಮ್ಮಿಯಿಂದ ತಲೆಯ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ, ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ತಕ್ಷಣವೇ ಧಾವಿಸಿದ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಈ ವೇಳೆ ಪ್ರಮುಖ ಮಾಹಿತಿ ಹಾಗೂ ದೃಶ್ಯಾವಳಿಗಳ ಆಧಾರದ ಮೇಲೆ ಪ್ರಮೋದ್, ನಾಗರಾಜ್, ಪ್ರದೀಪ್, ರವಿ, ಗೌತಮ್, ಮಂಜುನಾಥ್ ಹಾಗೂ ಇನ್ನೊಬ್ಬರನ್ನು ಬಂಧಿಸಲಾಗಿದೆ.
“ಇದು ಆಸ್ತಿಯ ಕುರಿತ ಹಳೆಯ ದ್ವೇಷದ ಭಾಗ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನುಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲು ತಂಡ ರಚಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಕ್ರೂರ ದಾಳಿ ಸ್ಥಳೀಯರಲ್ಲಿ ಭೀತಿಯ ವಾತಾವರಣ ನಿರ್ಮಿಸಿದೆ. ಸಾರ್ವಜನಿಕ ಸ್ಥಳದಲ್ಲೇ ಹತ್ಯೆ ನಡೆದಿರುವುದು ಜನರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಮೃತನ ಕುಟುಂಬ ಆಘಾತಕ್ಕೊಳಗಾಗಿದ್ದು, ನ್ಯಾಯ ದೊರೆಯಲಿ ಎಂಬುದು ಅವರ ಬೇಡಿಕೆ.














